ಮುಂಬಯಿ: ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ (Armaan Malik) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗಾಯಕ ಅರ್ಮಾನ್ ಮಲಿಕ್ – ಸೋಷಿಯಲ್ ಮೀಡಿಯಾ ಪ್ರಭಾವಿ ಆಶ್ನಾ ಶ್ರಾಫ್ (Aashna Shroff) ಅವರೊಂದಿಗೆ ಗುರುವಾರ (ಜ.2ರಂದು) ಆತ್ಮೀಯರ ಸಮ್ಮಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
“ತು ಹಿ ಮೇರಾ ಘರ್” ಎನ್ನುವ ಕ್ಯಾಪ್ಷನ್‌ನೊಂದಿಗೆ ಇಬ್ಬರು ಮದುವೆ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದಾಬೂ ಮಲಿಕ್, ಡಾಲಿ ಸಿಂಗ್ ಮತ್ತು ಅನುವ್ ಜೈನ್ ಸೇರಿದಂತೆ ಹಲವರು ನವದಂಪತಿಗೆ ಶುಭಾಶಯವನ್ನು ಕೋರಿದ್ದಾರೆ.
ಅರ್ಮಾನ್ ಆಗಸ್ಟ್ 2023 ರಲ್ಲಿ ಆಶ್ನಾ ಶ್ರಾಫ್ ಅವರೊಂದಿಗೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಎರಡು ಕುಟುಂಬದ ಆತ್ಮೀಯ ಬಂಧುಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮಗಳು ನೆರವೇರಿದೆ.
ಯಾರು ಈ ಆಶ್ನಾ ಶ್ರಾಫ್? : ಅರ್ಮಾನ್ ಅವರ ಪತ್ನಿಯಾಗಿ ಅವರ ಜೀವನಕ್ಕೆ ಎಂಟ್ರಿ ಆಗಿರುವ ಆಶ್ನಾ ಸೋಶಿಯಲ್ ಮೀಡಿಯಾ ಪ್ರಭಾವಿ ಆಗಿದ್ದಾರೆ. ಒಂದು ಮಿಲಿಯನ್‌ಗೂ ಅಧಿಕ ಇನ್ಸ್ಟಾಗ್ರಾಮ್ ಫಾಲೋವರ್ಸ್‌ಗಳನ್ನು ಅವರು ಹೊಂದಿದ್ದಾರೆ. ಫ್ಯಾಷನ್, ಬ್ಯೂಟಿ ಮತ್ತು ಲೈಫ್ ಸ್ಟೈಲ್ ಕುರಿತಾಗಿ ಅವರು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾರೆ.
ಅರ್ಮಾನ್ ಮಲಿಕ್ ಬಾಲಿವುಡ್ ಸೇರಿದಂತೆ ಹಲವು ಭಾಷೆಯಲ್ಲಿ ಹಿಟ್ ಹಾಡುಗಳನ್ನು ನೀಡಿದ್ದಾರೆ.
2005 ರಲ್ಲಿ ಜೀಟಿವಿಯ ಗಾಯನ ರಿಯಾಲಿಟಿ ಶೋ Sa Re Ga Ma Pa L’il Champs ನಿಂದ ಅವರ ಮ್ಯೂಸಿಕಲ್ ಜರ್ನಿ ಆರಂಭವಾಯಿತು.
ಹಿಂದಿಯ ʼಮೈಂ ರಹೂನ್ ಯಾ ನಾ ರಹೂನ್ʼ, ʼವಾಜಾ ತುಮ್ ಹೋʼ, ʼದಿಲ್ ಮೇ ಹೋ ತುಮ್ʼ ಸೇರಿದಂತೆ ಹತ್ತಾರು ಹಿಟ್ ಹಿಂದಿ ಸಾಂಗ್ಸ್‌ಗಳಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ ಅರ್ಮಾನ್ ಮಲಿಕ್ ʼಒಂದು ಮಳೆಬಿಲ್ಲುʼ, ʼಸರಿಯಾಗಿ ನೆನಪಿದೆʼ, ʼಧ್ರುವತಾರೆʼ, ನಿನ್ನ ರಾಜಾ ನಾನುʼ , ʼಮಾತನಾಡಿ ಮಾಯಾವಾದೆʼ, ʼಮಾಯಾಗಂಗೆʼ ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.