Advertisement
ಕೇರಳದ ದಕ್ಷಿಣದ ತುದಿ ತಿರುವನಂತಪುರದಿಂದ ಉತ್ತರದ ಕಾಸರಗೋಡು ನಡುವೆ 532 ಕಿ.ಮೀ. ಉದ್ದದ ರೈಲ್ವೇ ಕಾರಿಡಾರ್ ಅನ್ನು ಸಿಲ್ವರ್ ಲೈನ್ ಯೋಜನೆಯಡಿ ನಿರ್ಮಿಸಲಾಗುತ್ತದೆ. ಸದ್ಯದ ಅಂದಾಜಿನ ಪ್ರಕಾರ ಯೋಜನಾ ಗಾತ್ರ 67 ಸಾವಿರ ಕೋ. ರೂ. ಈ ಕಾರಿಡಾರ್ ನಿರ್ಮಾಣಗೊಂಡು ಸೆಮಿ ಹೈಸ್ಪೀಡ್ ರೈಲು ಓಡಾಟ ಆರಂಭಗೊಂಡದ್ದೇ ಆದಲ್ಲಿ ಈ ಎರಡು ನಗರಗಳ ನಡುವಣ ಪ್ರಯಾಣದ ಸಮಯ ಸರಿಸುಮಾರು 8-9 ತಾಸುಗಳಷ್ಟು ಕಡಿಮೆಯಾಗಲಿದೆ. ಈ ರೈಲು ಪ್ರತೀ ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು, ಕೇರಳದ ಒಟ್ಟು 14 ಜಿಲ್ಲೆಗಳ ಪೈಕಿ ಮೂರನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳನ್ನು ಹಾದು ಹೋಗಲಿದೆ. ಈಗಿನ ಯೋಜನೆ ಪ್ರಕಾರ ಕೋಯಿಕ್ಕೋಡ್‌ನ ನಿಲ್ದಾಣ ಭೂಗತವಾಗಿರಲಿದ್ದು, ತಿರುವನಂತಪುರ, ಎರ್ನಾಕುಳಂ ಮತ್ತು ತೃಶೂರ್‌ನಲ್ಲಿ ನೆಲಮಟ್ಟದಿಂದ ಮೇಲ್ಭಾಗದಲ್ಲಿ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಈ ಕಾರಿಡಾರ್‌ನ ಮೂಲಕ ಕೊಚ್ಚಿ ಮತ್ತು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೂ ಸಂಪರ್ಕ ಒದಗಿಸಲಾಗುವುದು.
ಕೇಂದ್ರದ ರೈಲ್ವೇ ಖಾತೆ ಮತ್ತು ಕೇರಳ ಸರಕಾರದ ಜಂಟಿ ಉದ್ಯಮ ಕಂಪೆನಿಯಾಗಿರುವ “ದಿ ಕೇರಳ ರೈಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್(ಕೆ-ರೈಲ್)ಮೂಲಕ ಈ ಯೋಜನೆ ಅನುಷ್ಠಾನ ಗೊಳ್ಳಲಿದೆ. 50 ಸಾವಿರ ಮಂದಿಗೆ ಉದ್ಯೋಗ
ಸಿಲ್ವರ್ ಲೈನ್ ಯೋಜನೆಯ ಅನುಷ್ಠಾನದ ವೇಳೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸುಮಾರು 50,000 ಮಂದಿಗೆ ಉದ್ಯೋಗ ದೊರೆಯಲಿದೆ. ಯೋಜನೆ ಮುಗಿದ ಬಳಿಕ ಸುಮಾರು 11 ಸಾವಿರದಷ್ಟು ಪ್ರತ್ಯಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆ ಸಾಕಾರಗೊಂಡ ಮರು ವರ್ಷವೇ ಪ್ರತೀ ದಿನ ಅಂದಾಜು 80 ಸಾವಿರದಷ್ಟು ಪ್ರಯಾಣಿಕರು ಈ ಕಾರಿಡಾರ್‌ನ ಮೂಲಕ ಸಂಚರಿಸಲಿದ್ದಾರೆ. ಇದು ಇಡೀ ರಾಜ್ಯದ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲಿದೆ ಎಂಬುದು ರಾಜ್ಯ ಸರಕಾರದ ಆಶಾವಾದ.
Related Articles
ಯೋಜನೆಗೆ ಸುಮಾರು 1,383 ಹೆಕ್ಟೇರ್ ಜಾಗ ಬೇಕಾಗುತ್ತದೆ. ಸದ್ಯದ ಅಂದಾಜಿನ ಪ್ರಕಾರ ಕಾರಿಡಾರ್ ಹಾದುಹೋಗುವ ಜಾಗದ ಪೈಕಿ 1,198 ಹೆಕ್ಟೇರ್ ಖಾಸಗಿ ಜಾಗವಾಗಿದೆ. ಯೋಜನೆಗೆ ಕೇರಳ ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್ ಮೆಂಟ್ ಫಂಡ್ ಬೋರ್ಡ್(ಕೆಐಐಎಫ್ಬಿ) 2,100 ಕೋಟಿ ರೂ. ಅನುದಾನ ಒದಗಿಸಲಿದೆ.
Advertisement
ಏನಿದು ಸೆಮಿ ಹೈ ಸ್ಪೀಡ್ ರೈಲು?ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಪ್ರತೀ ಗಂಟೆಗೆ 250 ಕಿ.ಮೀ.ಗಿಂತ ವೇಗದಲ್ಲಿ ಸಾಗುವ ರೈಲಿಗೆ ಹೈ ಸ್ಪೀಡ್ ರೈಲು ಎನ್ನಲಾಗುತ್ತದೆ. ಸಿಲ್ವರ್ ಲೈನ್ ಯೋಜನೆಯಲ್ಲಿ ರೈಲಿನ ಗರಿಷ್ಠ ವೇಗ 200 ಕಿ.ಮೀ. ಎಂದು ನಿಗದಿಪಡಿಸಲಾಗಿದೆ. ಆದ್ದರಿಂದ ಇದನ್ನು ಸೆಮಿ ಹೈ ಸ್ಪೀಡ್ ಎಂದು ಕರೆಯಲಾಗುತ್ತದೆ. ತಿರುವನಂತಪುರದಿಂದ ಕಾಸರಗೋಡಿಗೆ 4 ಗಂಟೆಗಳಲ್ಲಿ ತಲುಪಬಹುದಾಗಿದೆ (ಸದ್ಯ ರೈಲು ಮತ್ತು ಬಸ್‌ಗಳಲ್ಲಿ ಸುಮಾರು 13 ಗಂಟೆಗಳು ಬೇಕಾಗುತ್ತದೆ). ಉತ್ತರಾಭಿಮುಖವಾಗಿ ಒಂದು ಹಳಿ ಇದ್ದರೆ ಇನ್ನೊಂದು ದಕ್ಷಿಣಾಭಿಮುಖವಾಗಿರುತ್ತದೆ. ಪ್ರತೀ ದಿಕ್ಕಿಗೆ 37 ಸರ್ವಿಸ್‌ನಂತೆ ದಿನಂಪ್ರತಿ 74 ಸರ್ವಿಸ್ ಇರಲಿದೆ. ಪ್ರತೀ 20 ನಿಮಿಷಕ್ಕೊಂದರಂತೆ ರೈಲು ಸಂಚರಿಸಲಿದೆ ಎನ್ನಲಾಗಿದೆ. ಲೆಕ್ಕಾಚಾರ ಹೇಗೆ?
ಕೆ-ರೈಲ್ ಈ ಯೋಜನೆಗಾಗಿ ಪ್ರತೀ ಕಿ.ಮೀ.ಗೆ ಸರಾಸರಿ 120 ಕೋಟಿ ರೂ. ಖರ್ಚು ಅಂದಾಜಿಸಿದೆ. ಆದರೆ ದೇಶದ ಇದೇ ರೀತಿಯ ಇತರ ಯೋಜನೆಗಳನ್ನು ಗಮನಿಸಿದರೆ ಈ ಲೆಕ್ಕಾಚಾರದ ಬಗ್ಗೆಯೂ ಸಂಶಯ ಮೂಡುತ್ತದೆ. ಇತರೆಡೆಯ ಸೆಮಿ ಹೈ ಸ್ಪೀಡ್ ಯೋಜನೆಯ ಪ್ರತೀ ಕಿ.ಮೀ.ಗೆ ಸುಮಾರು 370 ಕೋಟಿ ರೂ. ತಗಲಿದೆ. ಮೆಟ್ರೋ ಯೋಜನೆಗೆ ಖರ್ಚಾಗಿದ್ದು ಪ್ರತೀ ಕಿ.ಮೀ.ಗೆ ಸರಾಸರಿ 270 ಕೋಟಿ ರೂ. ಅದೇ ವೇಳೆ ನೀತಿ ಆಯೋಗದ ಅಂದಾಜು ಪ್ರಕಾರ ಪ್ರತೀ ಕಿ.ಮೀ.ಗೆ ಸುಮಾರು 250 ಕೋಟಿ ರೂ. ಬೇಕಾಗಬಹುದು. ಆ ಪ್ರಕಾರ ಯೋಜನೆಯ ಅಂದಾಜು ಗಾತ್ರ 1,33,000 ಕೋ. ರೂ. ಆಗುತ್ತದೆ. ವೈರುಧ್ಯ
ಕೇರಳದಲ್ಲಿ ಸಿಲ್ವರ್ ಲೈನ್ ಯೋಜನೆಯನ್ನು ಶತಾಯಗತಾಯ ಅನುಷ್ಠಾನಗೊಳಿಸಿಯೇ ಸಿದ್ಧ ಎನ್ನುತ್ತಿರುವ ಎಡ ಪಕ್ಷಗಳು, ಅತ್ತ ಮುಂಬಯಿ-ಅಹ್ಮದಾಬಾದ್ ನಡುವಣ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆಯಿಂದ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗವಿಲ್ಲ. ಇದೊಂದು ಬಿಳಿ ಆನೆ. ಇದರಿಂದ ಬೊಕ್ಕಸಕ್ಕೆ ಹೊರೆ ಎಂದು ಬುಲೆಟ್ ರೈಲಿನ ಬಗ್ಗೆ ಎಡಪಕ್ಷಗಳು ಮಾಡುತ್ತಿರುವ ಆರೋಪವನ್ನೇ ಇದೀಗ ಎಡಪಕ್ಷಗಳ ಆಡಳಿತವಿರುವ ಕೇರಳದಲ್ಲಿ ವಿಪಕ್ಷ ಸಿಲ್ವರ್ ಲೈನ್ ಯೋಜನೆಯ ಬಗೆಗೆ ಮಾಡುತ್ತಿವೆ. ಕಾರಿಡಾರ್‌ಹಾದುಹೋಗುವ ಜಾಗದಲ್ಲಿ ಕಲ್ಲಿನ ಕಂಬಗಳನ್ನು ಕೆ-ರೈಲ್‌ನೆಟ್ಟಿದೆ. ಸ್ಥಳೀಯರು ಈ ಕಂಬಗಳನ್ನು ಕಿತ್ತಸೆಯುವ ಮೂಲಕ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಅನುಮಾನ, ಗೊಂದಲಗಳೇನು?
ಸಿಲ್ವರ್ ಲೈನ್ ಯೋಜನೆ ಬಗ್ಗೆ ಮುಖ್ಯವಾಗಿ ಎದ್ದಿರುವ ಪ್ರಶ್ನೆ ಎಂದರೆ ಗೇಜ್‌ಗೆ ಸಂಬಂಧಿಸಿದ್ದು. ಸಾಧಾರಣವಾಗಿ ಹೈ ಸ್ಪೀಡ್ ಮತ್ತು ಸೆಮಿ ಹೈ ಸ್ಪೀಡ್ ರೈಲುಗಳಿಗೆ ಸ್ಟಾಂಡರ್ಡ್ ಗೇಜ್ ಸೂಕ್ತ ಎನ್ನುವ ಅಭಿಪ್ರಾಯವಿದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಈ ಯೋಜನೆಗೆ ಅಂತಾರಾಷ್ಟ್ರೀಯ ಏಜೆನ್ಸಿ, ಬ್ಯಾಂಕ್‌ಗಳಿಂದ ಸಾಲ ತೆಗೆದುಕೊಳ್ಳಲಾಗುತ್ತಿರುವುದರಿಂದ ಅವು ಹಳಿಗಳು ಸ್ಟಾಂಡರ್ಡ್ ಗೇಜ್ ಆಗಿರಬೇಕು ಎಂದು ಷರತ್ತು ವಿಧಿಸುತ್ತವೆ. ಹೀಗಾಗಿ ನಾವು ಸ್ಟಾಂಡರ್ಡ್ ಗೇಜ್ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಕೆ-ರೈಲ್ ಅಧಿಕಾರಿಗಳು ಹೇಳುತ್ತಾರೆ. ಭಾರತದ ಶೇ. 96ರಷ್ಟು ರೈಲು ಹಳಿಗಳನ್ನು ಬ್ರಾಡ್ ಗೇಜ್ ವಿಧಾನದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಎರಡು ಹಳಿಗಳ ಮಧ್ಯೆ ಇರುವ ಅಂತರ 1,676 ಮಿ. ಮೀಟರ್. ಕೇರಳದಲ್ಲಿ ಶೇ. 100ರಷ್ಟು ಹಳಿಯೂ ಬ್ರಾಡ್ ಗೇಜ್‌ನಲ್ಲೇ ಇದೆ. ಇದೇ ವೇಳೆ ಸ್ಟಾಂಡರ್ಡ್ ಗೇಜ್‌ನ ಹಳಿಗಳ ನಡುವಿನ ಅಂತರ 1,435 ಮಿ.ಮೀ. ಸಹಜವಾಗಿ ಸ್ಟಾಂಡರ್ಡ್ ಗೇಜ್ ಮತ್ತು ಬ್ರಾಡ್ ಗೇಜ್ ಹಳಿಗಳ ಮಧ್ಯೆ ಓಡಾಡುವ ಗಾಡಿಗಳ ಉದ್ದ, ಅಗಲ, ಭಾರ ವ್ಯತ್ಯಾಸವಾಗಿರುತ್ತದೆ. ಹೀಗಾಗಿ ಈಗ ಇರುವ ಹಳಿಗಳ ಮಾದರಿಯಂತೆಯೇ ನಿರ್ಮಿಸಿದರೆ ಎಲ್ಲ ರೀತಿಯ ರೈಲುಗಳನ್ನು ಈ ಕಾರಿಡಾರ್‌ನಲ್ಲೂ ಓಡಿಸಬಹುದು ಎನ್ನುತ್ತಾರೆ ತಜ್ಞರು. ದೇಶದಲ್ಲಿ ಓಡುವ ಅತೀ ವೇಗದ ರೈಲುಗಳಾದ ವಂದೇ ಭಾರತ್ ಮತ್ತು ಗತಿಮಾನ್ ಎಕ್ಸ್‌ಪ್ರಸ್ ಸುಮಾರು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುತ್ತವೆ. ಇದು ಸಾಗುವುದು ಬ್ರಾಡ್‌ಗೆàಜ್ ಹಳಿಯಲ್ಲಿಯೇ. ಆದ್ದರಿಂದ ಸಿಲ್ವರ್ ಲೈನ್ ಯೋಜನೆಯಲ್ಲೂ ಬ್ರಾಡ್ ಗೇಜ್ ಹಳಿ ನಿರ್ಮಿಸುವುದೇ ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯ. ಪ್ರಕೃತಿಗೆ ಮಾರಕ?
2018ರಲ್ಲಿ ಈ ಯೋಜನೆಗೆ ಸಂಬಂಧಿಸಿ ಪರಿಸರದ ಮೇಲಣ ಪರಿಣಾಮಗಳ ಅಧ್ಯಯನ ನಡೆಸಲಾಗಿದೆಯಾದರೂ ಇದು ಸಮಗ್ರವಾಗಿಲ್ಲ ಎನ್ನಲಾಗುತ್ತಿದೆ. ಯೋಜನೆಯಲ್ಲಿ ಎಂಬಾಂಕ್‌ವೆುಂಟ್(ಎರಡು ಕಡೆ ಗೋಡೆ ರಚಿಸಿ ಮಧ್ಯ ಭಾಗದಲ್ಲಿ ಮಣ್ಣು ತುಂಬಿಸಿ ಅದರ ಮೇಲೆ ಹಳಿಗಳ ನಿರ್ಮಾಣ) ಮೂಲಕ 292 ಕಿ.ಮೀ. ಹಳಿ ನಿರ್ಮಿಸಲು ಉದ್ದೇಶಿಲಾಗಿದ್ದು, ಇದರಿಂದ ಪ್ರಕೃತಿಯ ಮೇಲಾಗುವ ದುಷ್ಪರಿಣಾಮವನ್ನು ವಿವರಿಸಲು ರ್ಯಾಪಿಡ್ ಇಐಎಗೆ ಸಾಧ್ಯವಾಗಿಲ್ಲ. ಮಾತ್ರವಲ್ಲದೆ 2018ರ ಜಲ ಪ್ರಳಯಕ್ಕಿಂತ ಮೊದಲೇ ಈ ಅಧ್ಯಯನ ನಡೆಸಿದ್ದರಿಂದಾಗಿ ಅದನ್ನೂ ಪರಿಗಣಿಸಿಲ್ಲ. ಆದ್ದರಿಂದ ಈ ಎಲ್ಲ ಕಾರಣಗಳಿಂದ ಕೆ-ರೈಲ್ ಹೊಸ ಇಐಎ ನಡೆಸಲು ಚಿಂತನೆ ನಡೆಸಿದೆ. ಪುನರ್ವಸತಿಯೇ ಸವಾಲು
ಈ ಯೋಜನೆಗಾಗಿ ಸ್ಥಳಾಂತರಗೊಳಿಸುವ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು ಕೂಡ ದೊಡ್ಡ ಸವಾಲು. ಸಿಎಂ ಪಿಣರಾಯಿ ವಿಜಯನ್ 10 ಸಾವಿರಕ್ಕಿಂತ ಕಡಿಮೆ ಕುಟುಂಬಗಳನ್ನಷ್ಟೇ ಸ್ಥಳಾಂತರಿಸಬೇಕಾಗಬಹುದು ಎಂದು ಹೇಳಿದ್ದರೂ ಸ್ಟಷ್ಟ ಚಿತ್ರಣ ಇನ್ನಷ್ಟೇ ದೊರೆಯಬೇಕಿದೆ. ಶೇ. 85ರಷ್ಟು ಖಾಸಗಿ ಜಾಗವನ್ನು ಯೋಜನೆಗೆ ಬಳಸಬೇಕಿರುವುದರಿಂದ 13 ಸಾವಿರ ಕೋಟಿ ರೂ. ಗಳನ್ನು ಪರಿಹಾರಕ್ಕಾಗಿ ಮೀಸಲಿಡಲಾಗಿದೆ. ಈ ಹಿಂದೆ ಕೇರಳ ಸರಕಾರ ರಸ್ತೆ ಅಭಿವೃದ್ಧಿಗಾಗಿ ಭೂ ಸ್ವಾಧೀನಪಡಿಸಿಕೊಂಡಾಗಲೆಲ್ಲ ನೀಡಿದ ಪರಿಹಾರ ಧನಕ್ಕೆ ಹೋಲಿಸಿದರೆ ಈ ಯೋಜನೆಯ ಪರಿಹಾರಕ್ಕಾಗಿ ಸುಮಾರು 22 ಸಾವಿರ ಕೋಟಿ ರೂ. ಬೇಕಾಗಬಹುದು. ಹೀಗಾಗಿ ಈ ಲೆಕ್ಕಾಚಾರದ ಬಗ್ಗೆ ಸಂಶಯ ಮೂಡಿದೆ. ಒಟ್ಟಿನಲ್ಲಿ ಸಾಮಾಜಿಕ ಪರಿಣಾಮ ಅಧ್ಯಯನ ವರದಿ ಬಂದ ಬಳಿಕವಷ್ಟೇ ಈ ಕುರಿತಾದ ಸ್ಪಷ್ಟ ಚಿತ್ರಣ ಸಿಗಲಿದೆ. – ರಮೇಶ್ ಬಳ್ಳಮೂಲೆ