ಪಾಲಕ್ಕಾಡ್: ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲ್ಲಿದ್ದ ನಾಲ್ವರು ಪೌರ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶೋರನೂರ್ ಸೇತುವೆಯ ಬಳಿ ಶನಿವಾರ(ನ.2) ಸಂಜೆ ಸಂಭವಿಸಿದೆ.
ಶನಿವಾರ ಸಂಜೆ ಶೋರನೂರ್ ರೈಲು ನಿಲ್ದಾಣದ ಬಳಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಪೌರ ಕಾರ್ಮಿಕರು ಹಳಿಯಲ್ಲಿದ್ದ ಕಸ ಸ್ವಚ್ಛಗೊಳಿಸುತ್ತಿರುವ ವೇಳೆ ದೆಹಲಿಯಿಂದ ತಿರುವನಂತಪುರಂ ಕಡೆಗೆ ಹೊರಟಿದ್ದ ಕೇರಳ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಮೂವರ ಮೃತದೇಹಗಳನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದು, ಇನ್ನೊಂದು ಮೃತದೇಹ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಹತ್ತಿರದ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು, ಅಗ್ನಿಶಾಮಕ ತಂಡ ಹುಡುಕಾಟ ನಡೆಸುತ್ತಿದೆ ಎನ್ನಲಾಗಿದೆ.
ಮೃತರೆಲ್ಲರೂ ತಮಿಳುನಾಡು ಮೂಲದವರಾಗಿದ್ದು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ,
ಮೇಲ್ನೋಟಕ್ಕೆ ಕರ್ತವ್ಯ ನಿರ್ವಹಿಸುತ್ತಿದ್ದ ಪೌರ ಕಾರ್ಮಿಕರು ರೈಲು ಬರುತ್ತಿರುವುದನ್ನು ಗಮನಿಸದೆ ಈ ದುರ್ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ ಸತ್ಯಾಸತ್ಯತೆ ತನಿಖೆ ಬಳಿಕ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: Threat: ಬಾಬಾ ಸಿದ್ದಿಕ್‌ನಂತೆ ನಿಮ್ಮನ್ನೂ ಕೊಲ್ಲುತ್ತೇನೆ… ಸಿಎಂ ಯೋಗಿಗೆ ಬೆದರಿಕೆ ಸಂದೇಶ