Advertisement

ಶಿವಪಾಡಿ: ಮಾ.2,3,4 ರಂದು ಶಿವಾರತಿ; ಮಾ.5 ರಂದು ಅತಿರುದ್ರ ಮಾಹಾಯಾಗ ಪೂರ್ಣಾಹುತಿ

05:02 PM Mar 01, 2023 | Team Udayavani |

ಮಣಿಪಾಲ: ಶಿವಪಾಡಿ ದೇಗುಲದಲ್ಲಿ ಶ್ರೀ ಉಮಾಮಹೇಶ್ವರ ದೇಗುಲದ ಅಭಿವೃದ್ಧಿ ಟ್ರಸ್ಟ್‌ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಫೆ.22ರಿಂದ ಆರಂಭಗೊಂಡ  ಅತಿರುದ್ರ ಮಹಾಯಾಗವು ಮಾ.5ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದೆ.

Advertisement

ಮಾ.2,3,4:ಶಿವಾರತಿ
ಮಾ.2,3,4ರಂದು ವಾರಣಾಸಿಯ ಗಂಗಾರತಿಯಂತೆ ಅತಿ ರುದ್ರ ಯಾಗ ಮಂಟಪದಲ್ಲಿ ವಾರಣಾಸಿಯಿಂದ ಆಗಮಿಸಿದ 8 ಮಂದಿಯ ತಂಡದಿಂದ ವಿಶೇಷವಾಗಿ ಶಿವಾರತಿಯು ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ. ಮಾ.2ರಂದು ಶತ ಚಂಡಿಕಾಯಾಗ ನಡೆಯಲಿದೆ.

ಮಾ.2: ಹೊರೆಕಾಣಿಕೆ ಮೆರವಣಿಗೆ
ಮಾ.2ರಂದು ಮಧ್ಯಾಹ್ನ 3ಗಂಟೆಗೆ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಬೃಹತ್‌ ಹೊರೆಕಾಣಿಕೆ ಮೆರವಣಿಗೆಯು ಹೊರಡಲಿದ್ದು ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಶಿವಪಾಡಿ ದೇವಸ್ಥಾನವನ್ನು ತಲುಪುವುದು.ಈ ಮೆರವಣಿಗೆಯಲ್ಲಿ  ಮಹಿಳೆಯರಿಂದ ಕಲಶ, ಚಂಡೆ ವಾದನ ,ಭಜನಾ ತಂಡಗಳು, ವಿವಿಧ ವೇಷಭೂಷ ಣ, ಸ್ತಬ್ದಚಿತ್ರಗಳು,ಕೀಲು ಕುದುರೆ ,ಬ್ಯಾಂಡ್‌ ವಾದ್ಯ ಸಹಿತ ಇನ್ನಿತರ ತಂಡಗಳು ಭಾಗವಹಿಸಲಿದೆ.

ಮಾ.5: ಪೂರ್ಣಾಹುತಿ
ಮಾ. 4ರ ಸಂಜೆ ದೇಗುಲಕ್ಕೆ ಶ್ರಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರನ್ನು ವಿಶೇಷ ಮೆರವಣಿಗೆಯಲ್ಲಿ ಕರೆತರಲಾಗುವುದು. ಸಂಜೆ 5.30ಕ್ಕೆ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದಾರೆ.ಅನಂತರ ಸ್ವಾಮೀಜಿಯವರಿಂದ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ ನೆರವೇರಲಿದೆ. ಮಾ. 5ರಂದು ಯಾಗ ಮಂಟಪದಲ್ಲಿ ಬೆಳಗ್ಗೆ 6.30ರಿಂದ ಏಕಾದಶಿ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಸ್ವಾಮೀಜಿಯವರಿಂದ ದೇವ ರಿಗೆ ಕಲಶಾಭಿಷೇಕ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿದೆ.

Advertisement

ಸೀತಾ ರಸೋಯಿ ಪಾಕಶಾಲೆ
ಇಲ್ಲಿ ಪರಿಣಿತ ಬಾಣಸಿಗರಿಂದ ಅಡುಗೆಯನ್ನು ಸಿದ್ಧಪಡಿಸಲಾಗುತ್ತಿದೆ. ಬೆಳಗ್ಗೆ ಉಪಹಾರ, ಮಧ್ಯಾಹ್ನ ಅನ್ನಪ್ರಸಾದ, ಸಂಜೆ ಲಘು ಉಪಹಾರ ಹಾಗೂ ರಾತ್ರಿ ಅನ್ನಪ್ರಸಾದವನ್ನು ರುಚಿಕಟ್ಟಾಗಿ ತಯಾರಿಸಿ ಬಡಿಸಲಾಗುತ್ತಿದೆ.

ಅನ್ನಪ್ರಸಾದ
ಪ್ರತಿನಿತ್ಯ ದೇಗುಲಕ್ಕೆ ದೂರದೂರುಗಳಿಂದ ಭಕ್ತರ ಸಂಖ್ಯೆ ವೃದ್ಧಿಸುತ್ತಿದ್ದು, ದಿನವೊಂದಕ್ಕೆ ಸುಮಾರು 8ರಿಂದ 10 ಸಾವಿರ ಮಂದಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರೆ, 2ರಿಂದ 3 ಸಾವಿರ ಮಂದಿ ಭಕ್ತರು ಉಪಹಾರ ಸೇವಿಸುತ್ತಿದ್ದಾರೆ. ಪೂರ್ಣಾಹುತಿಯ ಹಿಂದಿನ ದಿನ (ಮಾ. 4ರಂದು) ಮತ್ತು ಪೂರ್ಣಾಹುತಿಯ ದಿನ (ಮಾ. 5ರಂದು) ಸುಮಾರು 50 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸುವ ನಿರೀಕ್ಷೆಯಿದೆ.

ಅತ್ಯಾಕರ್ಷಕ ನಗರಾಲಂಕಾರ
ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಕೆಳಪರ್ಕಳದ ವಾಟರ್‌ ಟ್ಯಾಂಕ್‌ನ ವರೆಗೆ ಮತ್ತು ಈಶ್ವರನಗರದಿಂದ ದೇಗುಲದ ವರೆಗೆ ಸುಮಾರು 3 ಕಿ.ಮೀ. ದೂರ ವರೆಗಿನ ರಸ್ತೆಯನ್ನು ಆಕರ್ಷಕವಾಗಿ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ರಾತ್ರಿ ಕಾಲದಲ್ಲಿ ನೋಡುಗರಿಗೆ ಕಣ್ಣಿಗೆ ಹಬ್ಬವೋ ಎಂಬಂತೆ ಭಾಸವಾಗುತ್ತಿದೆ. ರಸ್ತೆಯ ಉದ್ದಗಲಕ್ಕೂ ಕೇಸರಿ ಬಣ್ಣದ ಪತಾಕೆಗಳು, ಬ್ಯಾನರ್‌ಗಳು, ಗಮನ ಸೆಳೆಯುವ ಸ್ವಾಗತ ಕಮಾನುಗಳಿಂದ ಶೃಂಗರಿಸಲಾಗಿದೆ. ಭಕ್ತರಿಗೆ ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗುವಂತೆ ಈಶ್ವರನಗರದಲ್ಲಿ 32 ಅಡಿಯ ಬೃಹತ್‌ ಎಲ್‌ಇಡಿ ವಾಲ್‌ ಅಳವಡಿಸಲಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ
ಸುಮಾರು 2,000 ವಾಹನಗಳ ಪಾರ್ಕಿಂಗ್‌ಗೆ ವಿವಿಧ ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ದ್ವಿಚಕ್ರವಾಹನ ಮತ್ಯು ಚತುಷ್ಚಕ್ರವಾಹನಗಳ ನಿಲುಗಡೆಗೆ ಪ್ರತ್ಯೇಕವಾಗಿ ಸ್ಥಳಾವಕಾಶ ಒದಗಿಸಲಾಗಿದೆ. ಭಕ್ತರಿಗೆ ತೊಂದರೆಯಾಗದಂತೆ ಅಲ್ಲಲ್ಲಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮಹೇಶ್‌ ಠಾಕೂರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next