ನಾವು ವ್ಯವಹರಿಸುವ ಒಡನಾಟವೇ ಖಾಯಂ ಎಂದು ತಿಳಿದುಕೊಂಡಿರುವುದರಿಂದ ಆ ವ್ಯಕ್ತಿ ಹೋಗುವಾಗ ದುಃಖ ಬರುತ್ತದೆ. ಒಡನಾಟವೂ ಅಶಾಶ್ವತ ಎಂದು ತಿಳಿದುಕೊಂಡರೆ ದುಃಖ ಬರುವುದಿಲ್ಲ. ಒಡನಾಟವೂ ತಾತ್ಕಾಲಿಕ ಎಂದು ತಿಳಿದುಕೊಳ್ಳಬೇಕು.
ಒಳ್ಳೆಯ ಬಾಲ್ಯ ಹೋಗಿದೆ ಎಂದು ಯಾರಾದರೂ ದುಃಖ ಪಡುತ್ತಾರೆಯೆ? ಅಲ್ಲಿ ನಿಶ್ಚಿತವಾದ್ದರಿಂದ ದುಃಖಪಡುವುದಿಲ್ಲ. ಹೆಚ್ಚು ಹೊತ್ತು ಇದ್ದಷ್ಟೂ ಖಾಯಂ ಎಂಬ ಭಾವನೆ ಬರುತ್ತದೆ. ರೈಟ್ಸ್, ಓನರ್‌ಶಿಪ್ ಎಂದರೇನರ್ಥ? ನನ್ನ ಜಾಗ ಎಂದು ಭೂಮಿಯಲ್ಲಿ ಯಾರಾದರೂ ಬರೆದಿದ್ದಾರಾ? ಮನಸ್ಸಿನಲ್ಲಿ ಬರೆದದ್ದನ್ನು ದಾಖಲೆಯಲ್ಲಿ ಬರೆಸಿದ್ದು. ಬಾಲ್ಯ, ಯವ್ವನ, ವಾರ್ಧಕ್ಯ ಸಹಜ ಎಂದು ತಿಳಿದುಕೊಂಡರೆ ಅದು ಕಳೆದು ಹೋದರೂ ದುಃಖ ಬರುವುದಿಲ್ಲ.
ದೇಹಾಂತರವಾದಾಗಲೂ ಅಳಬೇಡಿ ಎಂಬುದೇ ಕೃಷ್ಣೋಪದೇಶ. ಯಾರ ಮನಸ್ಸು ಆತನ ಕೈಯಲ್ಲಿಲ್ಲವೋ ಅವರಿಗೆ ದುಃಖ ಬರುತ್ತದೆ. ಯಾರ ಮನಸ್ಸು ಆತ್ಮದೊಂದಿಗೆ ಸಹಕರಿಸುವುದಿಲ್ಲವೋ ಅವರಿಗೆ ದುಃಖ. ಧೀರ ಎಂದರೆ ಮನಸ್ಸು ನಿಯಂತ್ರಣದಲ್ಲಿದ್ದವ. “ಖ’ = ಇಂದ್ರಿಯ, ಸು= ಅನುಕೂಲ, ದು= ಪ್ರತಿಕೂಲ. ಅನುಕೂಲವಾದ ಇಂದ್ರಿಯವೇ ಸುಖ, ಪ್ರತಿಕೂಲವಾದ ಇಂದ್ರಿಯವೇ ದುಃಖ. ಮನಸ್ಸಿನ ಏಕಾಗ್ರತೆಯೇ ಸುಖ, ಮನಸ್ಸು ಕೇಳದಿರುವುದೇ ದುಃಖ. ಆದ್ದರಿಂದ ದೇಹಾಂತರಪ್ರಾಪ್ತಿ ದುಃಖಕ್ಕೆ ಕಾರಣವಲ್ಲ, ಕೌಮಾರವೂ, ವಾರ್ಧಕ್ಯವೂ ಸುಖಕ್ಕೂ, ದುಃಖಕ್ಕೂ ಕಾರಣವಲ್ಲ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811