Advertisement

ಈಡಿಗ ಮತಗಳ ಮೇಲೆ  ಬಿಜೆಪಿ- ಜೆಡಿಎಸ್‌ ಕಣ್ಣು

06:45 AM Oct 25, 2018 | |

ಶಿವಮೊಗ್ಗ: ಲೋಕಸಭೆ ಉಪಚುನಾವಣೆ ಕಣ ಮಧು ಬಂಗಾರಪ್ಪ ಸ್ಪರ್ಧೆಯೊಂದಿಗೆ ಮತ್ತೂಮ್ಮೆ ರಂಗೇರಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪ ಹೆಸರು ಮತ್ತೆ ಮುನ್ನಲೆಗೆ ಬಂದಿದ್ದು, ಸುಮಾರು ಮೂರು ಲಕ್ಷದಷ್ಟಿರುವ ಈಡಿಗ ಮತಗಳ ಮೇಲೆ ಬಿಜೆಪಿ-ಜೆಡಿಎಸ್‌ ಎರಡೂ ಪಕ್ಷಗಳು ಕಣ್ಣಿಟ್ಟಿವೆ.

Advertisement

ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡಿರುವ ಈ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಈಡಿಗ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿದೆ. ಹೀಗಾಗಿ ಬಂಗಾರಪ್ಪ ಹೆಸರನ್ನು ಪದೇ ಪದೇ ಉತ್ಛರಿಸುವ ಮೂಲಕ ಸಮುದಾಯದ ಮತಗಳನ್ನು ಕ್ರೋಢೀಕರಿಸುವ ಕೆಲಸಕ್ಕೆ ಅಭ್ಯರ್ಥಿ ಮಧು ಬಂಗಾರಪ್ಪ ಮುಂದಾಗಿದ್ದಾರೆ.

ತನ್ನ ತಂದೆಯ ಕೊನೆಯ ಎರಡು ಚುನಾವಣೆಗಳ ಸೋಲಿಗೆ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿರುವ ಮಧು, ಬಂಗಾರಪ್ಪ ಅವರ ಆದರ್ಶಗಳಂತೆ ನಡೆಯುತ್ತೇನೆ ಎಂದು ಸಭೆ-ಸಮಾರಂಭಗಳಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಇತ್ತ ಶಾಸಕ ಕುಮಾರ್‌ ಬಂಗಾರಪ್ಪ ಹಾಗೂ ಹರತಾಳು ಹಾಲಪ್ಪ ಅವರು, ಬಿಜೆಪಿಯು ಸಮುದಾಯಕ್ಕೆ ನೀಡಿರುವ ಆದ್ಯತೆಯನ್ನು ಪ್ರಸ್ತಾಪಿಸುತ್ತಾ ಪ್ರತಿ ದಿನ ಮಧು ಬಂಗಾರಪ್ಪ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಾರೆ.

ಕಾಗೋಡು ಕೈಹಿಡಿದಿಲ್ಲ: ಕಾಗೋಡು ತಿಮ್ಮಪ್ಪ ಅವರನ್ನು ಈಡಿಗ ಸಮಾಜದ ಪ್ರಶ್ನಾತೀತ ನಾಯಕ ಎನ್ನಲಾದರೂ ಕಳೆದ ಚುನಾವಣೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈಡಿಗರು ಯಾಕೆ ಅವರ ಕೈಹಿಡಿಯಲಿಲ್ಲ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಅಲ್ಲದೇ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಕೊನೆವರೆಗೂ ವಿರೋಧಿ ಗಳಾಗಿಯೇ ಉಳಿದಿದ್ದರು.

ಈಗ ಮಧು ಬಂಗಾರಪ್ಪ ಗೆದ್ದರೆ ನನ್ನ ಮಗನೇ ಗೆದ್ದಂತೆ ಎಂದು ಕಾಗೋಡು ಹೇಳುವ ಮೂಲಕ ಈಡಿಗರ ಅನುಕಂಪ ಗಿಟ್ಟಿಸಿಲು ಪ್ಲಾನ್‌ ನಡೆಯುತ್ತಿದೆ. ಅಲ್ಲದೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಗಟ್ಟಿ ಧ್ವನಿಯಲ್ಲಿ ಬಂಗಾರಪ್ಪ ಹೆಸರನ್ನು ಹೇಳುತ್ತಿದ್ದು, ಅವರು ನಮಗೆ ಆದರ್ಶ ಎನ್ನುತ್ತಿದ್ದಾರೆ.

Advertisement

ಬಿಜೆಪಿ ಕೌಂಟರ್‌: ಈಡಿಗ ಮತಗಳನ್ನು ಒಡೆಯಲು ಬಿಜೆಪಿ ನಿರಂತರ ಪ್ರಯತ್ನಿಸುತ್ತಿದ್ದು, ಶಾಸಕರಾದ ಕುಮಾರ ಬಂಗಾರಪ್ಪ, ಹರತಾಳು ಹಾಲಪ್ಪ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಪ್ರಚಾರಕ್ಕೆ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಈ ನಾಯಕರು ಶರಾವತಿ ಡೆಂಟಲ್‌ ಕಾಲೇಜು ಈಡಿಗ ಸಮಾಜದ ಆಸ್ತಿ. ಸಮಾಜದ ಬಗ್ಗೆ ಕಾಳಜಿ ಇದ್ದರೆ ಮಧು ಬಂಗಾರಪ್ಪ ಅದನ್ನು ಸಮಾಜಕ್ಕೆ ಬಿಟ್ಟುಕೊಡಲಿ ಎನ್ನುತ್ತಿದ್ದಾರೆ. ಈ ಹಿಂದೆ ಶರಾವತಿ ಡೆಂಟಲ್‌ ಕಾಲೇಜು ಟ್ರಸ್ಟ್‌ಗೆ ಕುಮಾರ್‌ ಬಂಗಾರಪ್ಪ ಕೂಡ ಅಧ್ಯಕ್ಷರಾಗಿದ್ದರು. ಇನ್ನು ದೇವೇಗೌಡರನ್ನು ಪ್ರಧಾನಿ ಮಾಡಿದ್ದೇ ಬಂಗಾರಪ್ಪ. ಕೊನಗೆ ಅವರಿಗೇ ಸಚಿವ ಸ್ಥಾನ ಕೊಡಲಿಲ್ಲ ಎಂದೂ ಈಡಿಗರಿಗೆ ನೆನಪಿಸುತ್ತಿದ್ದಾರೆ.

ಮಧು ದೆಹಲಿಗೆ ಹೋಗಲಿ
ಈಗ ಈಡಿಗ ಸಮುದಾಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಈಡಿಗ ಸಮಾಜದಿಂದ ಯಾರೂ ಸಂಸದರಿಲ್ಲ. ಮಧು ಬಂಗಾರಪ್ಪ ಸಂಸದರಾಗಲಿ. ಅವರು ದೆಹಲಿಗೆ ಹೋದರೆ ಕುಮಾರ್‌ ಬಂಗಾರಪ್ಪ ನಡುವಿನ ವೈಷಮ್ಯ ಕಡಿಮೆಯಾಗುತ್ತದೆ. ಲಿಂಗಾಯತರು ಅಷ್ಟೊಂದು ಒಗ್ಗಟ್ಟು ಪ್ರದರ್ಶಿಸಬೇಕಾದರೆ ನಾವೇಕೆ ಸುಮ್ಮನಿರಬೇಕು ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಸೊರಬದಲ್ಲಿ ಮಧು ಬಂಗಾರಪ್ಪಗೆ ಹೆಚ್ಚು ಮತ ಬಿದ್ದರೆ ಆಶ್ಚರ್ಯವಿಲ್ಲ.

ಲಿಂಗಾಯತ/ಈಡಿಗ ಮುಖಾಮುಖೀ
1996 ಲೋಕಸಭೆ ಚುನಾವಣೆಯಿಂದಲೂ ಈ ಕ್ಷೇತ್ರದಲ್ಲಿ ಈಡಿಗ- ಲಿಂಗಾಯತ ಅಭ್ಯರ್ಥಿಗಳು ಮುಖಾಮುಖೀಯಾಗುತ್ತಿದ್ದು, ಪ್ರಬಲ ಸ್ಪರ್ಧೆ ನಡೆಯುತ್ತಿದೆ. 1996ರ ಚುನಾವಣೆಯಲ್ಲಿ ಎಸ್‌.ಬಂಗಾರಪ್ಪ, 1998ರ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಆಯನೂರು ಮಂಜುನಾಥ್‌, 1999, 2004 ಹಾಗೂ 2005ರಲ್ಲಿ ಎಸ್‌. ಬಂಗಾರಪ್ಪ, 2009ರಲ್ಲಿ ಬಿ.ವೈ. ರಾಘವೇಂದ್ರ, 2014ರಲ್ಲಿ ಬಿ.ಎಸ್‌. ಯಡಿಯೂರಪ್ಪ ಜಯಗಳಿಸಿದ್ದಾರೆ. 2014ರ ಚುನಾವಣೆಯಲ್ಲಿ ಈಡಿಗ ಸಮಾಜದ ಗೀತಾ ಶಿವರಾಜ್‌ಕುಮಾರ್‌ ಮೂರನೇ ಸ್ಥಾನ ಕಾಯ್ದುಕೊಂಡಿದ್ದರು.

– ಶರತ್‌ ಭದ್ರಾವತಿ
 

Advertisement

Udayavani is now on Telegram. Click here to join our channel and stay updated with the latest news.

Next