ಹೊಸದಿಲ್ಲಿ: ಧೈರ್ಯವಾಗಿ ಚುನಾವಣೆ ಎದುರಿಸಲು ಸಾಧ್ಯವಾಗದೇ ಬಿಜೆಪಿ ದಿಲ್ಲಿಯಲ್ಲಿ “ಆಪರೇಷನ್ ಕಮಲ’ ಆರಂಭಿಸಿದೆ.
ತಮ್ಮ ಪರವಿರದ ಸಾವಿರಾರು ಮತದಾರರ ಹೆಸರನ್ನು ಮತಪಟ್ಟಿಯಿಂದ ತೆಗೆಸಿಹಾಕಲು ಮುಂದಾಗಿದೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ನೇರವಾಗಿ ಹೋರಾಡಿ ಚುನಾವಣೆ ಗೆಲ್ಲುವ ಬದಲು ಆಪ್ ಸತ್ತವರ ಹೆಸರನ್ನು ಪಟ್ಟಿಗೆ ಸೇರಿಸುತ್ತಿದೆ ಎಂದು ಚಾಟಿ ಬೀಸಿದೆ.
ರವಿವಾರ ಮಾಧ್ಯಮಗಳ ಮುಂದೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕೇಜ್ರಿವಾಲ್ “ಬಿಜೆಪಿಯಲ್ಲಿ ಪ್ರಬಲ ಅಭ್ಯರ್ಥಿಗಳೂ ಇಲ್ಲ, ಸಿಎಂ ಅಭ್ಯರ್ಥಿ ಅಂತೂ ಇಲ್ಲವೇ ಇಲ್ಲ. ಒಂದೇ ಕ್ಷೇತ್ರದಲ್ಲಿ 11,000 ಮತದಾರರ ಹೆಸರು ತೆಗೆಸಲು ಬಿಜೆಪಿ ಅರ್ಜಿ ಸಲ್ಲಿಸಿದ್ದು, ಆಯೋಗ ಈ ಕುತಂತ್ರಕ್ಕೆ ತಡೆ ಒಡ್ಡಿದೆ’ ಎಂದಿದ್ದಾರೆ.
ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವೀರೇಂದ್ರ ಸಚ್ದೇವ್ ತಿರುಗೇಟು ನೀಡಿದ್ದು, 2014ರಿಂದ ಮತದಾರರ ಸಂಖ್ಯೆ ತೀವ್ರ ಹೆಚ್ಚಳವಾಗಿದೆ. ಈ ಹೊಸ ಮತದಾರರು ಎಲ್ಲಿಂದ ಬಂದರು? ಹೊಸ ಮತದಾರರು 66 ದಾಟಿದವರು. ಆಪ್ ನಕಲಿ ದಾಖಲೆ ಮೂಲಕ ಬೇರೆ ಊರಿನವರು, ಸತ್ತವರು ಎಲ್ಲರನ್ನೂ ಮತದಾರರ ಪಟ್ಟಿಗೆ ಸೇರಿಸುತ್ತಿದೆ ಎಂದಿದ್ದಾರೆ.