ಬೆಂಗಳೂರು: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ವಕೀಲ ಎಂ.ಶಾಂತಾರಾಂ ಶೆಟ್ಟಿ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಿರುವ ಸರ್ಕಾರದ ಆದೇಶಕ್ಕೆ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿರುವ ಹೈಕೋರ್ಟ್, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಹಾಗೂ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ರಾಘವೇಂದ್ರ ಎಸ್. ಚೌವ್ಹಾಣ್ ಅವರಿದ್ದ ಏಕಸದಸ್ಯ ಪೀಠ, ವಿಶೇಷ ಅಭಿಯೋಜಕರ ನೇಮಕಾತಿಗೆ ಏ.6ರ ವರೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು.
ಆರೋಪಿ ವಿರುದ್ಧ ಹೇಳಿಕೆ: ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅರುಣ್ ಶ್ಯಾಮ್, ವಕೀಲ ಶಾಂತಾರಾಂ ಶೆಟ್ಟಿ ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಅವರು ಆರೋಪಿಗಳ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ದೂರುದಾರರಾದ ಗುಲಾಬಿ ಶೆಟ್ಟಿ ಅವರ ಮನವಿ ಮೇರೆಗೆ ಶಾಂತಾರಾಂ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ಅವರನ್ನು ಬಿಟ್ಟು ಬೇರೆ ಯಾವ ವಕೀಲರನ್ನಾದರೂ ನೇಮಕ ಮಾಡಬೇಕು. ಇಲ್ಲದಿದ್ದರೆ ಅವರಿಂದ ಅರ್ಜಿದಾರರಿಗೆ ಅನ್ಯಾಯವಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಶಾಂತಾರಾಂ ಶೆಟ್ಟಿ ಅವರನ್ನು 2016ರ ಅಕ್ಟೋಬರ್ 26ರಂದು ಎಸ್‌ಪಿಪಿಯನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ರಾಜೇಶ್ವರಿ ಶೆಟ್ಟಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆಗ ನ್ಯಾಯಾಲಯ ಆ ನೇಮಕ ಆದೇಶಕ್ಕೆ ತಡೆ ನೀಡಿತ್ತು.
ಇದರಿಂದಾಗಿ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯೂ ಸ್ಥಗಿತಗೊಂಡಿತ್ತು. ನಂತರ ಅರ್ಜಿಯನ್ನು ಇತ್ಯರ್ಥಗೊಳಿಸಿದ್ದ ಹೈಕೋರ್ಟ್, ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಮನವಿಯನ್ನು ಸರ್ಕಾರ ಮಾ.12ರಂದು ತಿರಸ್ಕರಿಸಿ, ಎಸ್‌ಪಿಪಿಯಾಗಿ ಶಾಂತಾರಾಂ ಶೆಟ್ಟಿ ಅವರನ್ನು ಮುಂದುವರಿಸುವುದಾಗಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಪುನಃ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.