Advertisement

3 ವರ್ಷದಲ್ಲಿ ಮೂರು ಲಕ್ಷ ಜನರಿಗೆ ಸ್ವಯಂ ಉದ್ಯೋಗ ತರಬೇತಿ: ಸೇಡಂ

07:29 AM Jun 10, 2020 | Suhan S |

ಕಲಬುರಗಿ: ಕಲ್ಯಾಣ ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವನ್ನು ಬೇರೆ ಭಾಗವದರೂ ತಮಗೆ ಬೇಕು ಎನ್ನುವ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುವುದಾಗಿ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ತಿಳಿಸಿದರು.

Advertisement

ಸಂಘದ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಮೂರು ವರ್ಷದಲ್ಲಿ ಮೂರು ಲಕ್ಷ ಜನರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಸ್ವಾವಲಂಬನೆ ಬದುಕಿಗೆ ನಾಂದಿ ಹಾಡಲಾಗುವುದು ಎಂದರು. ಮುಂದಿನ ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿಗಳ ಆಶಯದಂತೆ ಪ್ರದೇಶದಲ್ಲಿ ಹಾಕಿಕೊಳ್ಳಲಾಗುವ ಜನಪರ ಕಾರ್ಯಕ್ರಮಗಳ ರೂಪುರೇಷೆ ಸಿದ್ಧವಾಗಲಿದೆ. ಈ ಪ್ರದೇಶದ ಮಾನವ ವಿಕಸನ ಮತ್ತು ಸಂಸ್ಕಾರ ಒಳಗೊಂಡಂತೆ ಸಮಗ್ರ ಅಭಿವೃದ್ಧಿಗೆ ಪ್ರತಿ ಹಳ್ಳಿಯನ್ನು ಘಟಕವನ್ನಾಗಿ ಪರಿಗಣಿಸಿ ಕಾರ್ಯಕ್ರಮಗಳ ಉಸ್ತುವಾರಿಗೆ ಸಂಘದಿಂದ ಓರ್ವನನ್ನು ಪ್ರತಿನಿಧಿಯಾಗಿ ನೇಮಿಸಲಾಗುವುದು. ಅದೇ ರೀತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿ ಗಳು ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಒಂದು ತಿಂಗಳಲ್ಲಿ ಆಡಳಿತ ಮಂಡಳಿ ಸಭೆ ಸೇರಿ 500 ಕೋಟಿ ರೂ. ಮೊತ್ತಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ವಿವರಣೆ ನೀಡಿದರು.

ಕೃಷಿ, ಶಿಕ್ಷಣ, ಸಾಹಿತ್ಯ, ಸ್ವಯಂ ಉದ್ಯೋಗ, ಆರೋಗ್ಯ, ಯುವಜನ ಮತ್ತು ಮಹಿಳಾ ಸಬಲೀಕರಣ, ಗ್ರಾಮ ಸಬಲೀಕರಣ ಹೀಗೆ ನಾನಾ ಕ್ಷೇತ್ರದಲ್ಲಿ ಸಂಘವು ಕಾಯೋನ್ಮುಖವಾಗಲಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಂದು, ಪಟ್ಟಣ ಪಂಚಾಯತಿಯಲ್ಲಿ  ಎರಡು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂರು ಹಾಗೂ ನಗರ ಪ್ರದೇಶದಲ್ಲಿ ವಾರ್ಡ್‌ವಾರು ಮಹಿಳೆಯರಿಗೆ ಹೊಲಿಗೆ ತರಬೇತಿ ಕೇಂದ್ರ ತೆಗೆಯಲಾಗುವುದು. ಕೋಟಿ ವೃಕ್ಷ ಯೋಜನೆಯಡಿ 6 ಜಿಲ್ಲೆಗಳಲ್ಲಿ ಒಂದು ಕೋಟಿ ವಿವಿಧ ಬಗೆಯ ಗಿಡ ಮರಗಳನ್ನು ಮತ್ತು 10 ಲಕ್ಷ ಹಣ್ಣಿನ ಗಿಡಗಳನ್ನು ನೆಡಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಭಾಗದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಒಳಗೊಂಡ ಆರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಸಿಇಒ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಕಾಧಿಕಾರಿಗಳು ಇದಕ್ಕೆ ವಿಶೇಷ ಆಹ್ವಾನಿತ ಸದಸ್ಯರಾಗಿರುತ್ತಾರೆ. ಸಂಘಕ್ಕೆ ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಮತ್ತು ಅನುಭವ ಹೊಂದಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮೀಜಿ, ನಿವೃತ್ತ ಐಎಎಸ್‌ ಅಧಿಕಾರಿ ಮದನಗೋಪಾಲ, ಕೃಷಿ ತಜ್ಞ ಎಸ್‌ .ಎ. ಪಾಟೀಲ, ಶಿಕ್ಷಣ ತಜ್ಞ ಗುರುರಾಜ ಕರಜಗಿ ಹಾಗೂ ವಿಜಯಪುರದ ಚಾಣಕ್ಯ ಸ್ಪರ್ಧಾ ತರಬೇತಿ ಕೇಂದ್ರದ ಎಂ.ಎನ್‌. ಬಿರಾದಾರ ಅವರನ್ನು ಆಡಳಿತಾತ್ಮಕ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 50 ಸಾವಯವ ಕೃಷಿ ಕೇಂದ್ರಗಳನ್ನು ಸ್ಥಾಪಿಸಿ ಅದರ ಮುಖಾಂತರ 5000 ಸಾವಯವ ಕೃಷಿಕರನ್ನು ಗುರುತಿಸಿ ತರಬೇತಿ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ. ಕೃಷಿಯಲ್ಲಿ ತಂತ್ರಜ್ಞಾನದೊಂದಿಗೆ ಮುಂದುವರಿದ ದೇಶಗಳಿಗೆ ರೈತರ ಪ್ರವಾಸ ಏರ್ಪಡಿಸುವ ಯೋಜನೆಯೂ ನಮ್ಮ ಮುಂದಿದೆ. ಯುವ ಸಮುದಾಯದಲ್ಲಿ ಸಂಸ್ಕಾರ ಬೆಳವಣಿಗೆಗೆ ಪ್ರತಿ ಗ್ರಾ.ಪಂನಲ್ಲಿ ಸಂಸ್ಕಾರ ಕೇಂದ್ರ ತೆರೆಯಲಾಗುವುದು. ಕಲಬುರಗಿಯ ಸಂಘದ ಕಾರ್ಯಾಲಯದಲ್ಲಿ “ಕಲ್ಯಾಣ ಕರ್ನಾಟಕ ಜನಸ್ಪಂದನ ವಿಭಾಗ’ ಎಂದು ಪ್ರಾರಂಭಿಸಿ ಅದರ ಮುಖಾಂತರ ಈ ಭಾಗದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಪಂದನೆಯ ರೀತಿಯಲ್ಲಿ ಕಾರ್ಯನಿರ್ವಹಿಸಲಾಗುತ್ತದೆ ಎಂದರು.

Advertisement

ಸಂಘದ ಕಾರ್ಯದರ್ಶಿ ಭೀಮಾ ಶಂಕರ ತೆಗ್ಗೆಳ್ಳಿ, ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ ಹಾಗೂ ವಿಕಾಸ ಅಕಾಡೆಮಿಯ ಭಾರತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next