Advertisement

ಸಪ್ತ ಸಂಶೋಧಕಿಯರಿಂದ ಸೀಮೋಲ್ಲಂಘನ

10:40 AM May 16, 2017 | Harsha Rao |

ವಿಜಯಪುರ: ಅವ್ವ ಕೂಲಿ ಮಾಡಿ ಯಜಮಾನ ನಿಲ್ಲದ ತುಂಬು ಕುಟುಂಬದ ಒಲೆ ಹೊತ್ತಿಸಿ, ಏಳು ತುತ್ತಿನ ಚೀಲ ತುಂಬಿಸುವ ದುಸ್ಥಿತಿ ಇದ್ದರೂ ಈ ದಲಿತ ಕುಟುಂಬದ ಆ ಬಾಲೆ ಅವ್ವನ ಕನಸು ನನಸಾಗಿಸುತ್ತಿದ್ದಾಳೆ. ಸರ್ಕಾರದ ಯೋಜನೆ ಸಮರ್ಪಕ ಅನುಷ್ಠಾನದ ಮೂಲಕ ಹಳ್ಳಿಗರ ಬದುಕು ಹಸನಾಗಿಸುವ ತನ್ನ ಯೋಜನೆಯನ್ನು ವಿದೇಶಿಗರಿಗೆ ವಿವರಿಸಿ ಬಂದಿದ್ದಾಳೆ. ಕಲಬುರಗಿ ಜಿಲ್ಲೆಯ ಕಲ್ಲಹಂಗರಗಾ ಕುಗ್ರಾಮದ ಅಂಬುಬಾಯಿ ಎಂಬ ಕೂಲಿ ಕಾರ್ಮಿಕಳ ಮಗಳು ಎಂಬಿಎ ವಿಭಾಗದಲ್ಲಿ ಪಿಎಚ್‌ಡಿ ಪದವಿಗಾಗಿ ಸಂಶೋಧನೆ ನಡೆಸಿರುವ ಸಾತವ್ವ ಎಂಬಾಕೆಯ ಕಥೆ ಇದು. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕೃಪೆಯಿಂದ ಆರು ಸ್ನೇಹಿತೆಯರೊಂದಿಗೆ ಭಾರತವನ್ನು ಪ್ರತಿನಿಧಿಸಲು ವಿದೇಶಕ್ಕೆ ಹೋಗಿಬಂದಿರುವ ದಲಿತ ಸಮುದಾಯದ ಆ ಸಂಶೋಧಕಿ ಕಂಗಳಲ್ಲಿ ಸಾಧನೆಯ ಗುರಿ
ಮುಟ್ಟಿದ ತೃಪ್ತಿ.

Advertisement

ಥೈಲ್ಯಾಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿ ಮಲೇಶಿಯಾ, ಜಪಾನ್‌, ಶ್ರೀಲಂಕಾ, ಥೈಲ್ಯಾಂಡ್‌ ದೇಶಗಳ ಜತೆ ಭಾರತ ಸೇರಿ ಅಂತಾರಾಷ್ಟ್ರೀಯ ಮಟ್ಟದ ಅಂತರ ಶಿಸ್ತೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಥೈಲ್ಯಾಂಡ್‌ನ‌ ಐಎಸ್‌ಇಆರ್‌ಡಿ ವಿಶ್ವವಿದ್ಯಾಲಯ ಮೇ 5ರಿಂದ ಹಮ್ಮಿಕೊಂಡಿ¨ª‌ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಧಿಸಿದ್ದ
ಮಹಿಳಾ ವಿವಿಯ 7 ಸಂಶೋಧನಾ ವಿದ್ಯಾರ್ಥಿನಿಯರ ನಿಯೋಗದಲ್ಲಿ ಸಾತವ್ವ ಕೂಡ ಒಬ್ಬರು.

ಹೊಸ ಬೆಳಕು ನೀಡಿದ ವಿವಿ: ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು ತಿರುಕನ ಕನಸಿನಂತೆ. ಆದರೆ ಮಹಿಳಾ ವಿವಿ ಯೋಜನೆ ನಿಜಕ್ಕೂ ನನ್ನಂಥವರ ಬಾಳಲ್ಲಿ ಹೊಸ ಬೆಳಕನ್ನೇ ಮೂಡಿಸುತ್ತಿದೆ. ಸಂಶೋಧನಾ ಪ್ರಬಂಧ
ಮಂಡನೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ ಎನ್ನುತ್ತಾರೆ ಸಾತವ್ವ. ಸಾತವ್ವ ಅವರೊಂದಿಗೆ ತೆರಳಿದ್ದ ಇತರೆ ಆರು ಸಂಶೋಧನಾ ವಿದ್ಯಾರ್ಥಿನಿಯರಾದ
ಶುಭಾಂಗಿ ನಾಟೀಕರ ಆಸ್ಪತ್ರೆಯ ಗುಣಮಟ್ಟದ ಸೇವೆಯಿಂದ ರೋಗಿಗಳ ಆರೈಕೆ ಕುರಿತು ವಿಷಯ ಮಂಡಿಸಿ ವಿದೇಶಿಗರ ಗಮನ ಸೆಳೆದರೆ, ಕಾನೂನು ಸಂಘರ್ಷ ಎದುರಿಸುತ್ತಿರುವ ಮಕ್ಕಳ ಕುರತು ಬೆಳಕು ಚಲ್ಲಿದ ಸುಧಾ ಜೈನಾಪುರ ಅವರ ಪ್ರಬಂಧ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನದಲ್ಲಿ ಮೆಚ್ಚುಗೆ ಪಡೆದಿವೆ.

ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಆಥಿರ್ಕತೆ ಕುರಿತು ವಿಜಯ ಲಕ್ಷ್ಮೀ ಪವಾರ ಸಂಶೋಧನಾ ಪ್ರಬಂಧ ಮಂಡಿಸಿದ್ದರೆ, ಕನ್ನಡ ವಿಭಾಗದ ಪೂರ್ಣಿಮಾ ದಾಮಣ್ಣವರ, ಗ್ರಂಥಾಲಯ ವಿಭಾಗದ ರೇಣುಕಾ ಪೂಜಾರ, ರೇಷ್ಮಾ ಗಜಾಕೋಶ ಅವರೂ ಪ್ರಬಂಧ ಮಂಡಿಸಿ ಮರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next