Advertisement

Manipal:ಪರ್ಕಳದ ಸಾಮಾನ್ಯ ತಂತ್ರಜ್ಞ ಆರ್‌. ಮನೋಹರ್‌ ಅಸಾಮಾನ್ಯ ಸಂಶೋಧಕರಾದ ಕುತೂಹಲಕಾರಿ ಕಥೆ

08:26 PM Sep 29, 2024 | Team Udayavani |

ಮಣಿಪಾಲ: ಬಾಲ್ಯದಲ್ಲಿ ಅಗರಬತ್ತಿಯ ರೋಲರ್‌ಗಳನ್ನು ಬಳಸಿ ದೂರದರ್ಶಕ ಮಾಡುವ ಆಸ‌ಕ್ತಿ ಹೊಂದಿದ್ದ ವ್ಯಕ್ತಿಯೊಬ್ಬರು ಇಂದು ಬೈನಾಕ್ಯುಲರ್‌ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ನಮ್ಮದೇ ಭಾರತೀಯ ಸೇನೆ, ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳು ಬೆರಗಿನಿಂದ ಅವರತ್ತ ನೋಡುತ್ತಿವೆ. ಅವರೇ ಪರ್ಕಳದ ಆರ್‌. ಮನೋಹರ್‌.

Advertisement

ಮನೋಹರ್‌ ಅವರು ಮಣಿಪಾಲದ ಟಿಎಮ್‌ಎ ಪೈ  ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್‌ ಡಿಪ್ಲೊಮಾ ಮಾಡಿದವರು. ಈಗ ಎಮ್‌ಐಟಿಯ ಪ್ರಯೋಗಾಲಯದಲ್ಲಿ ಸಹಾಯಕ ಎಂಜಿನಿಯರ್‌.  ಹಲವಾರು ಮಾದರಿಯ ಬೈನಾಕ್ಯುಲರ್‌ಗಳನ್ನು ನಿರ್ಮಿಸಿದ ಇವರು ಈಗ ರೂಪಿಸಿದ ಎರಡು ವಿಭಿನ್ನ ಸಾಧನಗಳು ಸಾಕಷ್ಟು ಕುತೂಹಲ ಮೂಡಿಸಿವೆ, ಮನ್ನಣೆ ಪಡೆದಿವೆ.

ಅವರು ತಯಾರಿಸಿದ 40ರಿಂದ 60 ಮ್ಯಾಗ್ನಿಫಿಕೇಶನ್‌ ಹೊಂದಿರುವ ಸಣ್ಣ ದೂರದರ್ಶಕಕ್ಕೆ  ದಿ ಬ್ರಿಟಿಷ್‌ ವರ್ಲ್ಡ್ ರೆಕಾರ್ಡ್ಸ್‌ ಗೌರವ ಸಿಕ್ಕಿದ್ದರೆ, 200ರಿಂದ 240 ಮ್ಯಾಗ್ನಿಫಿಕೇಶನ್‌ ಹೊಂದಿರುವ ಅತ್ಯಾಧುನಿಕ ದೂರದರ್ಶಕ ಈಗಾಗಲೇ ದಿ ಲಂಡನ್‌ ಬುಕ್‌ ಆಫ್ ರೆಕಾರ್ಡ್ಸ್‌ ಮತ್ತು  ದಿ ಅಮೆರಿಕನ್‌ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ  ಗಿನ್ನೆಸ್‌ ವಿಶ್ವ ದಾಖಲೆಗೂ ಭಾಜನವಾಗುವ ಹಾದಿಯಲ್ಲಿದೆ.

ವಿಶ್ವಪ್ರಸಿದ್ಧ ಮಾದರಿಗೇ ಸವಾಲು!
ಮನೋಹರ್‌ ಅವರು ರೂಪಿಸಿರುವ 200ರಿಂದ 400 ಮ್ಯಾಗ್ನಿಫಿಕೇಶನ್‌ ಮಾದರಿ ಜರ್ಮನಿಯ ಒಬೆರ್ವೇರ್ಕ್‌ ಕಂಪೆನಿಯ ವಿಶ್ವ ಮಾನ್ಯತೆ ಪಡೆದ 40ಎಕ್ಸ್‌ಗೆ ಸಂವಾದಿಯಾಗಿದೆ. ಅದು 4 ಕೆಜಿ ತೂಕವಿದ್ದು, ಐದು ಲಕ್ಷ ರೂ. ಬೆಲೆ ಇದೆ. ಅದೇ ಮನೋಹರ್‌ ಮಾದರಿ ಕೇವಲ ಒಂದು ಕೆಜಿ ತೂಕ ಮತ್ತು 80,000 ರೂ.ಗೆ ದೊರೆಯುತ್ತದೆ. ಜರ್ಮನ್‌ ಬೈನಾಕ್ಯುಲರ್‌ಗಳಲ್ಲಿ ಟ್ರೈಪಾಡ್‌ ಇಟ್ಟು ಬಾಗಿ ನಿಲ್ಲಬೇಕು. ಇಲ್ಲಿ ನೇರವಾಗಿ, ಬೇಕಿದ್ದರೆ ಕೈಯಲ್ಲಿ ಹಿಡಿದೇ ನೋಡಬಹುದು.

ಸೇನೆಯಿಂದಲೂ ಬೇಡಿಕೆ
ಮನೋಹರ್‌ ಅಭಿವೃದ್ಧಿಪಡಿಸಿದ  200-240 ಎಕ್ಸ್‌ ಎಲ್‌ ಮಾದರಿಯನ್ನೂ ಈಗಾಗಲೇ ಅಯೋಧ್ಯೆಯ ರಾಮ ಮಂದಿರದ ಭದ್ರತೆಯಲ್ಲಿ ಬಳಸಲಾಗುತ್ತಿದೆ. ಉತ್ತರ ಪ್ರದೇಶ ಸರಕಾರ 25 ಸಾಧನಗಳನ್ನು ಹಿಂದೆಯೇ ಖರೀದಿಸಿದೆ.

Advertisement

ಇದೀಗ ಭಾರತೀಯ ಸೇನೆಯಿಂದ 500ರಷ್ಟು ಸಾಧನಕ್ಕೆ ಬೇಡಿಕೆ ಬಂದಿದೆ. ಸೈನಿಕರ ಶೂಟಿಂಗ್‌ ತರಬೇತಿಯ ವೇಳೆ ದೂರದ ಗುರಿಯ ನಿಖರತೆಯನ್ನು ತಿಳಿಯಲು ಇದನ್ನು ಬಳಸುವ ಸಾಧ್ಯತೆಗಳಿವೆ. ಇಲ್ಲಿ ವಾಟರ್‌ ಪ್ರೂಫ್  ಅಲ್ಯೂಮಿನಿಯಂನಿಂದ ಮಾಡಿದ ಸಾಧನ ಬೇಕಾಗಿದೆ.

ಈಗಾಗಲೇ ಇವರು ದೂರದರ್ಶಕ ತಯಾರಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೇಟೆಂಟ್‌ಗಳನ್ನು ಪಡೆದಿದ್ದಾರೆ.

ಬಾಲ್ಯದಿಂದಲೂ  ನನಗೆ ಬೈನಾಕ್ಯೂಲರ್‌ ಬಗ್ಗೆ ತುಂಬಾ ಆಸಕ್ತಿ. ಭೌತಶಾಸ್ತ್ರ ಕಲಿಯುವಾಗ ಅದು ಇನ್ನಷ್ಟು ಹೆಚ್ಚಿತು. ಇದನ್ನು ಇಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಹೊರಟು ಈ ಹಂತಕ್ಕೆ ಬಂದಿದ್ದೇನೆ. ಈಗ ನನ್ನ ಮಗ ನೋಡಿಕೊಳ್ಳುತ್ತಿರುವ ಫೀಲ್ಡ್‌ ಕಿಂಗ್‌ ಆ್ಯಪ್ಟಿಕ್ಸ್‌  ಸಂಸ್ಥೆ ಅಡಿಯಲ್ಲಿ ಈ ದೂರದರ್ಶಕಗಳನ್ನು ತಯಾರಿಸಲಾಗುತ್ತಿದೆ.
– ಆರ್‌ ಮನೋಹರ್‌, ಸಂಶೋಧಕರು

ಬೈನಾಕ್ಯೂಲರ್‌ಗಳ ವಿಶೇಷತೆಗಳೇನು?
200ರಿಂದ 240 ಮೆಗ್ನಿಫಿಕೇಷನ್‌ ಸಾಮರ್ಥ್ಯ ಹೊಂದಿರುವ ಅತೀ ವಿಶಿಷ್ಟ ಬೈನಾಕ್ಯುಲರ್‌ ಮೂಲಕ 10 ಕಿ.ಮೀ. ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ಇದರ ನಿರ್ಮಾಣಕ್ಕೆ ತಗಲಿದ ವೆಚ್ಚ ಕೇವಲ 50,000 ರೂ.

ಒಂದೂವರೆ  ಅಡಿ ಉದ್ದ, ಒಂದು ಕೆ.ಜಿ ತೂಕದ  40ರಿಂದ 60 ಮೆಗ್ನಿಫಿಕೇಶನ್‌ ಹೊಂದಿರುವ ಸಣ್ಣ  ದೂರದರ್ಶಕದ ಮೂಲಕ  5 ಕಿ.ಮೀ ದೂರದ ವಸ್ತಗಳನ್ನು  ಸ್ಪಷ್ಟವಾಗಿ ನೋಡಬಹುದಾಗಿದೆ. ಇದಕ್ಕೆ ತಗಲಿರುವ ವೆಚ್ಚ ಕೇವಲ 30,000 ರೂ.

ಸಾಮಾನ್ಯವಾಗಿ ಬೈನಾಕ್ಯುಲರ್‌ನಲ್ಲಿ ನೋಡುವಾಗ ಒಂದು ಕಣ್ಣು ಮುಚ್ಚಬೇಕು. ಆದರೆ, ಇಲ್ಲಿ ಏಕಕಾಲಕ್ಕೆ ಎರಡೂ ಕಣ್ಣುಗಳಿಂದ ಆಕಾಶಕಾಯಗಳನ್ನು ನೋಡಬಹುದು. ಚಂದ್ರನ ಕುಳಿಗಳು, ಹಲವು ಗ್ರಹಗಳನ್ನು ಹತ್ತಿರದಿಂದ ನೋಡಬಹುದು.

ನಿಮ್ನ ಮಸೂರ ಮತ್ತು ಫೈಬರ್‌ ಪೈಪ್‌ಗಳಿಂದ ನಿರ್ಮಿಸಿರುವ ಈ ದೂರದರ್ಶಕ ಅತ್ಯಂತ ಹಗುರ ಎಂಬ ಕಾರಣಕ್ಕೂ ಗಮನ ಸೆಳೆದಿದೆ.

-ದಿವ್ಯಾ, ನಾಯ್ಕನಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next