ಮಂಗಳೂರು: ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯವು ಕಳೆದ ಕೆಲವು ವರ್ಷಗಳ ಅವಧಿಯಲ್ಲಿ 8 ಪೇಟೆಂಟ್‌ಗಳನ್ನು ಪಡೆಯುವ ಮೂಲಕ ಮಹತ್ವದ ಮೈಲುಗಲ್ಲು ದಾಖಲಿಸಿದೆ.
ಮಂಗಳೂರು ವಿವಿಯಲ್ಲಿ 2017ರಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಆರಂಭವಾಗಿತ್ತು. ಬಳಿಕ ಪೇಟೆಂಟ್ ಕಾರ್ಯದಲ್ಲಿ ನಿರಂತರ ಬೆಳವಣಿಗೆ ಕಂಡು ಬಂದಿದೆ. ಈವರೆಗೆ ಒಟ್ಟು 8 ಪೇಟೆಂಟ್ ಕಾರ್ಯಗಳು ನಡೆದಿದ್ದು, ಇವುಗಳಲ್ಲಿ 2 ಪೇಟೆಂಟ್ ಲಿಖಿತ ರೂಪದಲ್ಲಿ ಪ್ರಕಟಗೊಂಡಿವೆ.
“2018-19ರಿಂದ ಆರಂಭವಾಗಿ ಇಲ್ಲಿಯವರೆಗೆ ಒಟ್ಟು 8 ಪೇಟೆಂಟ್‌ಗಳು ವಿವಿಯ ವಿವಿಧ ವಿಭಾಗಕ್ಕೆ ಲಭಿಸಿದೆ. ಮೊದಲಿಗೆ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಕೆ.ಆರ್. ಚಂದ್ರಶೇಖರ್ ಮತ್ತು ಭಾಗ್ಯ ನೆಕ್ರಕಲಾಯ ಅವರ ಸಂಶೋಧನೆಗೆ ಪೇಟೆಂಟ್ ದೊರಕಿದೆ. ರಸಾಯನಶಾಸ್ತ್ರ ವಿಭಾಗದಲ್ಲಿ ಬೋಜ ಪೂಜಾರಿ ಹಾಗೂ ಜಗದೀಶ್ ಪ್ರಸಾದ್ ಅವರ ಸಂಶೋಧನೆಗೆ ತಲಾ 2 ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಅಂಬರೀಶ್ ಅವರ ಸಂಶೋಧನೆಗೆ ಪೇಟೆಂಟ್ ಲಭಿಸಿದೆ.
ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎ.ಎಂ.ಖಾನ್ ಹಾಗೂ ಇಂಡಸ್ಟ್ರಿಯಲ್ ಕೆಮೆಸ್ಟ್ರಿ ವಿಭಾಗದಲ್ಲಿ ಬಿ.ಕೆ.ಸರೋಜಿನಿ ಅವರ ತಲಾ ಒಂದೊಂದು ಪೇಟೆಂಟ್ ಕಾರ್ಯಗಳು ಲಿಖೀತ ರೂಪದಲ್ಲಿದ್ದು, ಅನುಮೋದನೆ ನಿರೀಕ್ಷೆಯಲ್ಲಿದೆ. ಜತೆಗೆ ಇತರರು ಕೂಡ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ’ ಎಂದು ಮಂಗಳೂರು ವಿವಿಯ ಪೇಟೆಂಟ್ ವಿಭಾಗದ ಮುಖ್ಯಸ್ಥರಾದ ಗಣೇಶ್ ಸಂಜೀವ್ ತಿಳಿಸಿದ್ದಾರೆ.
ಎಂಟರಲ್ಲಿ ಏಳು ದೇಶೀಯವಾಗಿ ಪಡೆದ ಪೇಟೆಂಟ್. ಒಂದು ಅಮೆರಿಕದ ಪೇಟೆಂಟ್. ಇದನ್ನು ಕಿಂಗ್ ಫೈಸಲ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಪಡೆಯಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ನಡೆಸಲಾಗುವ ಸಂಶೋಧನೆಗಳಿಗೆ ನೀಡಲಾಗುವ ವಿಶೇಷ ಹಕ್ಕಾದ ಪೇಟೆಂಟ್, ಸಂಶೋಧಕರಿಗೆ ತಮ್ಮ ಆವಿಷ್ಕಾರಕ್ಕೆ ಕಾನೂನು ರಕ್ಷಣೆ ಒದಗಿಸುತ್ತದೆ.