Advertisement

Mangaluru: ತುಳುನಾಡಿನಲ್ಲೇ “ತುಳು ಪಿಎಚ್‌ಡಿ’ಗಿಲ್ಲ ಅವಕಾಶ !

02:43 AM Oct 17, 2024 | Team Udayavani |

ಮಂಗಳೂರು: ತುಳುನಾಡಿನಲ್ಲಿ ತುಳು ಭಾಷೆಯಲ್ಲಿಯೇ ಉನ್ನತ ಶಿಕ್ಷಣ ಪಡೆದು ಪಿಎಚ್‌ಡಿ ಪಡೆಯುವ ಆಸೆಯಿದ್ದರೆ ಅದು ಈಡೇರದು! ಯಾಕೆಂದರೆ, ತುಳುವಿನಲ್ಲಿ ಪಿಎಚ್‌ಡಿ ಪಡೆಯಲು ಮಂಗಳೂರು ವಿ.ವಿ.ಯಲ್ಲಿ ಅವಕಾಶವೇ ಇಲ್ಲ.

Advertisement

ಕನ್ನಡ ವಿಭಾಗದಲ್ಲಿ ತುಳುವಿನ ವಿಷಯದ ಬಗ್ಗೆ ಪಿಎಚ್‌ಡಿ ಮಾಡಲು ಮಂಗಳೂರು ವಿ.ವಿ. ಸಹಿತ ಇತರ ಕಡೆಯಲ್ಲಿ ಅವಕಾಶವಿದೆ. ಆದರೆ ಕನ್ನಡ ಲಿಪಿಯಲ್ಲಿ ತುಳು ಭಾಷೆಯಲ್ಲಿ ಬರೆದು ಪಿಎಚ್‌ಡಿ ಮಾಡಲು ತುಳು ವಿಭಾಗವಿಲ್ಲದೆ ಸಾಧ್ಯವಾಗುತ್ತಿಲ್ಲ. ವಿ.ವಿ. ವ್ಯಾಪ್ತಿಯ ತುಳು ಎಂಎ ಸ್ನಾತಕೋತ್ತರ ವಿಭಾಗದಲ್ಲಿ ಇದುವರೆಗೆ 5 ತಂಡಗಳಲ್ಲಿ 81 ವಿದ್ಯಾರ್ಥಿಗಳು ತುಳು ಪದವೀಧರರಾಗಿದ್ದಾರೆ. ತುಳು ಭಾಷೆ, ಸಂಸ್ಕೃತಿ, ಜಾನಪದ, ಇತಿಹಾಸಗಳ ಬಗ್ಗೆ ಬೆಳಕು ಚೆಲ್ಲುವ ಆಸಕ್ತಿ ಅರಳಿಸುವ ಉದ್ದೇಶದಿಂದ ಪದವಿ ಪಡೆದಿದ್ದಾರೆ. ಇದೇ ವಿದ್ಯಾರ್ಥಿಗಳ ಪೈಕಿ ಹಲವರಿಗೆ ಪಿಎಚ್‌ಡಿ ಮಾಡಲು ಆಸಕ್ತಿ ಇದೆ. ಆದರೆ, ತುಳು ವಿಭಾಗವಿಲ್ಲ ಎಂಬ ಕಾರಣದಿಂದ ಪಿಎಚ್‌ಡಿ ಅವಕಾಶ ಅವರಿಗೆ ದೊರೆಯುವುದಿಲ್ಲ.

ತುಳು ಎಂಎ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಕಣ್ವತೀರ್ಥ ಅವರ ಪ್ರಕಾರ “ತುಳುವಿನ ಅಧಿಕೃತ ಲಿಪಿಯನ್ನು ಸರಕಾರ ಇನ್ನಷ್ಟೇ ಅಧಿಕೃತ ಮಾಡಬೇಕಿದೆ. ಹೀಗಾಗಿ ನಮಗೆ ಈಗ ತುಳುವಿನಲ್ಲಿ ಪಿಎಚ್‌ಡಿಯನ್ನು ಕನ್ನಡ ಭಾಷೆಯಲ್ಲಿ ನಡೆಸಲು ಅವಕಾಶ ನೀಡುವಂತೆ ವಿ.ವಿ. ಹಾಗೂ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದೇವೆ. ಇದಕ್ಕೂ ಮೊದಲು ತುಳು ವಿಭಾಗ ಆರಂಭಿಸಬೇಕಿದೆ’ ಎಂಬುದು ನಮ್ಮ ಆಗ್ರಹ ಎನ್ನುತ್ತಾರೆ.

“ಕುಪ್ಪಂ ವಿಶ್ವವಿದ್ಯಾನಿಲಯದಲ್ಲಿ ತುಳುವಿನಲ್ಲಿ ಇಬ್ಬರು ಪಿಎಚ್‌ಡಿ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲಿ ತುಳು ಪಿಎಚ್‌ಡಿ ಸಾಧ್ಯವಾಗುವುದಾದರೆ, ನಮ್ಮೂರಿನ ವಿ.ವಿ.ಯಲ್ಲಿ ಯಾಕೆ ಈ ಅವಕಾಶ ಇಲ್ಲ’ ಎಂಬ ಪ್ರಶ್ನೆ ತುಳು ಎಂಎ ವಿಭಾಗದ ಪ್ರಶಾಂತಿ ಶೆಟ್ಟಿ ಇರುವೈಲು ಅವರದ್ದು.

2007ರಿಂದ ತುಳು ಕಲಿಕೆಗೆ ಸಿಕ್ಕಿತ್ತು ಅವಕಾಶ
ಪ್ರಾಥಮಿಕ ಶಿಕ್ಷಣದಲ್ಲಿ 6ರಿಂದ 10ನೇ ತರಗತಿವರೆಗೆ ತುಳು ಭಾಷೆಯನ್ನು ಕಲಿಯಲು 2007ರಿಂದ ಅವಕಾಶ ನೀಡಲಾಗಿತ್ತು. ಉನ್ನತ ಶಿಕ್ಷಣದಲ್ಲಿ ತುಳು ಭಾಷೆ, ಜಾನಪದ, ಇತಿಹಾಸಗಳ ಬಗ್ಗೆ ಅಧ್ಯಯನವಾಗಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪ್ರಬಲ ಒತ್ತಾಸೆಯಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯವು 2018ರಲ್ಲಿ ತನ್ನ ಘಟಕ ಕಾಲೇಜಾದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗ ಆರಂಭಿಸಿತ್ತು. ತುಳು ಉಪನ್ಯಾಸಕರು ದೊರಕಿದರೆ ಮುಂದೆ ಕಾಲೇಜು ಹಂತದಲ್ಲಿ ತುಳು ಶಿಕ್ಷಣವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು ಎಂಬ ದೂರದೃಷ್ಟಿಯಿತ್ತು.

Advertisement

ತುಳು ಎಂಎಗೆ ಎದುರಾಗಿದೆ ಸಂಚಕಾರ!
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಡಿ ಕಾರ್ಯನಿರ್ವಹಿಸುತ್ತಿರುವ ತುಳು ಸ್ನಾತಕೋತ್ತರ ವಿಭಾಗದ 2024-25ನೇ ಸಾಲಿನ ಪ್ರವೇಶಾತಿ ಶುಲ್ಕವನ್ನು ಈ ಹಿಂದೆ ಇರುವುದಕ್ಕಿಂತ ದುಪ್ಪಟ್ಟು ಮಾಡಿರುವ ಪರಿಣಾಮ ವಿದ್ಯಾರ್ಥಿಗಳ ದಾಖಲಾತಿ ಇಲ್ಲದೆ ಈ ವಿಭಾಗಕ್ಕೆ ಸಂಚಕಾರ ಎದುರಾಗಿದೆ. ಆರಂಭದಲ್ಲಿ ತುಳು ಎಂಎಗೆ ವಾರ್ಷಿಕ ಸುಮಾರು 15 ಸಾವಿರ ರೂ. ಶುಲ್ಕ ಇತ್ತು. ವಿದ್ಯಾರ್ಥಿಗಳ ಮನವಿ ಹಿನ್ನೆಲೆಯಲ್ಲಿ 2020-21ರಿಂದ 4 ಸಾವಿರ ರೂ. ಶುಲ್ಕ ಕಡಿತಗೊಳಿಸಲಾಗಿತ್ತು. ಈ ವರ್ಷದಿಂದ ಶುಲ್ಕವನ್ನು ಮತ್ತೆ ಏರಿಸಿದ್ದು, 22,410 ರೂ. ಎಂದು ನಿಗದಿಪಡಿಸಲಾಗಿದೆ. ಇಷ್ಟು ಶುಲ್ಕ ತೆತ್ತು ಪ್ರವೇಶ ಪಡೆಯಲು ವಿದ್ಯಾರ್ಥಿಗಳು ನಿರಾಕರಿಸುತ್ತಿದ್ದಾರೆ.


“ಸರಕಾರದಿಂದ ಅನುಮೋದನೆ ಆಗಬೇಕು’

ತುಳುವಿನ ವಿಷಯ ಆಧಾರಿತವಾಗಿ ಸಂಶೋಧನೆ ಮಾಡಲು ಮಂಗಳೂರು ವಿ.ವಿ.ಯಲ್ಲಿ ಅವಕಾಶವಿದೆ. ಆದರೆ, ತುಳುವಿನಲ್ಲಿ ಪಿಎಚ್‌ಡಿ ಮಾಡಬೇಕಾದರೆ ತುಳು ವಿಭಾಗ ರಚನೆ ಆಗಬೇಕು. ಅದಕ್ಕೆ ಸರಕಾರದಿಂದ ಅಧಿಕೃತ ಅನುಮೋದನೆ ದೊರಕಬೇಕು. ಅದು ದೊರೆಯದೆ ಪಿಎಚ್‌ಡಿಗೆ ಅವಕಾಶ ನೀಡಲು ಆಗುವುದಿಲ್ಲ.
ಪ್ರೊ| ಪಿ. ಎಲ್‌. ಧರ್ಮ, ಕುಲಪತಿ, ಮಂಗಳೂರು ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next