ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದ್ದ ಪೈಲೆಟ್ ಸೇವೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಕೇವಲ ಎಸ್ಕಾರ್ಟ್ ಮಾತ್ರ ಮುಂದುವರಿಸಿದೆ. ತಮಗೆ ಝಡ್ ಶ್ರೇಣಿಯ ಭದ್ರತೆ ಒದಗಿಸುವಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಬೆಳಗ್ಗೆಯಿಂದ ಏಕಾಏಕಿ ಪೈಲೆಟ್ ವಾಹನ ಸೇವೆಯನ್ನು ಗೃಹ ಇಲಾಖೆ ವಾಪಸ್ ಪಡೆದಿದೆ. ವಿವಿಐಪಿ ಭದ್ರತೆ ದೃಷ್ಟಿಯಿಂದ ಮಾಜಿ ಮುಖ್ಯಮಂತ್ರಿಗಳಿಗೆ, ವಿಪಕ್ಷ ನಾಯಕರಿಗೆ ಪೈಲೆಟ್ ಹಾಗೂ ಎಸ್ಕಾರ್ಟ್ ಸೇವೆ ನೀಡಲಾಗುತ್ತದೆ. ಆದರೆ, ಯಾವುದೇ ಕಾರಣ ನೀಡದೆ ಸೋಮವಾರ ಬೆಳಗ್ಗೆಯಿಂದ ಪೈಲೆಟ್ ವಾಹನಗಳನ್ನು ವಾಪಸ್ ಪಡೆಯಲಾಗಿದೆ.
ಆಯಾ ನಾಯಕರು ಹೋಗುವ ಸ್ಥಳ ಹಾಗೂ ಸೇರುವ ಜನರಿಗೆ ಅನುಗುಣವಾಗಿ ಅವರ ಭದ್ರತೆಯ ಪ್ರಮಾಣ ನಿರ್ಧಾರವಾಗುತ್ತದೆ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರ ಸಭೆಗಳಲ್ಲಿ ಅತಿ ಹೆಚ್ಚು ಜನ ಸೇರುವುದರಿಂದ ಅವರಿಗೆ ವಿವಿಐಪಿ ಭದ್ರತೆ ಎಸ್ಕಾರ್ಟ್ ಹಾಗೂ ಪೈಲೆಟ್ ಸೇವೆ ನೀಡಲಾಗುತ್ತಿತ್ತು. ಆದರೆ ಏಕಾಏಕಿ ಪೈಲೆಟ್ ಸೇವೆ ಕಡಿತಗೊಳಿಸಲಾಗಿದೆ.
ಕುಮಾರಸ್ವಾಮಿ ಆಕ್ರೋಶ: ಶನಿವಾರದಿಂದಲೇ ಪೈಲಟ್ ಸೇವೆ ವಾಪಸ್ ಪಡೆಯಲಾಗಿದ್ದು, ಯಾವ ಕಾರಣಕ್ಕೆ ವಾಪಸ್ ಪಡೆಯಲಾಗಿದೆ ಎಂಬ ಬಗ್ಗೆ ಗೃಹ ಸಚಿವರಾಗಲಿ, ನಗರ ಪೊಲೀಸ್ ಆಯುಕ್ತರಾಗಲಿ ಮಾಹಿತಿ ನೀಡುತ್ತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ಝಡ್ ಪ್ಲಸ್ ಭದ್ರತೆ ಇದ್ದದ್ದನ್ನು ಝಡ್‌ಗೆ ಇಳಿಸಲಾಗಿತ್ತು. ನಂತರ ಎಸ್ಕಾರ್ಟ್ ಸೇವೆಗೆ ಒದಗಿಸಲಾಗಿದ್ದ ಇನ್ನೋವಾ ಕ್ರಿಸ್ಟಾ ವಾಹನ ವಾಪಸ್ ಪಡೆದು 2.61 ಲಕ್ಷ ಕಿ.ಮೀ. ಸಂಚರಿಸಿರುವ ಸ್ಕ್ಯಾರ್ಪಿಯೋ ವಾಹನ ನೀಡಲಾಗಿದೆ. ಅದು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದೆ. ಯಾವ ಉದ್ದೇಶಕ್ಕೆ ಈ ರೀತಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಬೇಸರ ಹೊರಹಾಕಿದ್ದಾರೆ.