Advertisement

Waqf Property: ಮಾಜಿ ಸಿಎಂಗಳ ದಾಖಲೆ ಶೀಘ್ರ ಬಿಡುಗಡೆ: ಸಿಎಂ ಸಿದ್ದರಾಮಯ್ಯ

02:03 AM Nov 04, 2024 | Team Udayavani |

ಬೆಂಗಳೂರು:  ಬಿ.ಎಸ್‌. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ್‌ ಶೆಟ್ಟರ್‌ ಹಾಗೂ ಇವರ ಈಗಿನ ಮಿತ್ರ ಎಚ್‌.ಡಿ.ಕುಮಾರಸ್ವಾಮಿ  ಮುಖ್ಯಮಂತ್ರಿ ಆಗಿದ್ದಾಗ ನೂರಾರು ರೈತ ಕುಟುಂಬಗಳ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಖಾತೆ ಬದಲಾಯಿಸಿದ ದಾಖಲೆಗಳನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ. ಆಗ ನಿಮ್ಮ ಪಾಪದ ಫ‌ಲವನ್ನು ನೀವೇ ಉಣ್ಣಬೇಕಾಗುವ ಸಂದರ್ಭ ಬರಬಹುದು. ಅದಕ್ಕೆ ಸಿದ್ಧರಾಗಿರಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಟಿ ಸವಾಲು ಹಾಕಿದ್ದಾರೆ.

Advertisement

ಬಿ.ವೈ. ವಿಜಯೇಂದ್ರ “ಎಕ್ಸ್‌’ ಮೂಲಕ ಪೋಸ್ಟ್‌ ಮಾಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ತಾವೇ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹಾಕಿರುವ ಸವಾಲನ್ನು ಗಮನಿಸಿದೆ. ನನ್ನ ಜತೆ ಚರ್ಚೆ ನಡೆಸುವ ಮೊದಲು ನಿಮ್ಮದೇ ಪಕ್ಷದ ನಾಯಕರಾಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ರಮೇಶ ಜಾರಕಿಹೊಳಿ ಅವರ ಜತೆ ಒಂದು ಸುತ್ತು ಚರ್ಚೆ ಮಾಡಿಕೊಂಡು ಬನ್ನಿ. ನಿಮ್ಮ ತಂದೆಯವರನ್ನು ಮುಖ್ಯಮಂತ್ರಿ ಮಾಡಲು ನೀವು ಬಿಜೆಪಿ ಹೈಕಮಾಂಡ್‌ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಿದ್ದೀರಿ. ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಇನ್ನೂ ಒಂದಷ್ಟು ಕೋಟಿ ರೂಪಾಯಿ ನೀಡಿದ್ದೀರಿ ಎಂದು ನಿಮ್ಮ ನಾಯಕರೇ ಆರೋಪಿಸಿದ್ದಾರೆ. ಮೊದಲು ಅವರ ಜತೆ ಚರ್ಚಿಸಿ ನಂತರ ಬನ್ನಿ’ ಎಂದು ಲೇವಡಿ ಮಾಡಿದ್ದಾರೆ.

ದುರ್ಯೋಧನ-ದುಶ್ಯಾಸನರ ಇತಿಹಾಸ ಕೆದಕಬೇಕಾ?
ನಮ್ಮ ಸರಕಾರದ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯೂ ಚುಚ್ಚಲಿಲ್ಲವೇ? ನಿಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ನಿಮ್ಮದೇ ಶಾಸಕರು ಹೇಗೆ ದುರ್ಯೋಧನ – ದುಶ್ಯಾಸನರ ರೀತಿಯಲ್ಲಿ ನಡೆದುಕೊಂಡಿದ್ದರು ಎನ್ನುವ ಇತಿಹಾಸವನ್ನು ನಾನು ಕೆದಕಲು ಹೋಗುವುದಿಲ್ಲ. ಆದರೆ, ಪೋಕ್ಸೋ  ಕಾಯ್ದೆಯಡಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನಿಮ್ಮ ತಂದೆಯವರನ್ನು ಮನೆಯಲ್ಲಿಟ್ಟುಕೊಂಡು ನಮಗೆ ಹೆಣ್ಣುಮಕ್ಕಳ ರಕ್ಷಣೆಯ ಪಾಠ ಮಾಡಲು ಕನಿಷ್ಠ ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಟೀಕಿಸಿದ್ದಾರೆ.

ಬೇಟಿ ಬಚಾವೋ ಬೇಟಿ ಪಡಾವೋ ಎಂದು ಆಗಾಗ ಘೋಷಣೆ ಕೂಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಘೋಷಣೆಗೆ ಬದ್ಧರಾಗಿದ್ದರೆ, ಪೋಕೊÕ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಸ್ಥಾನದಿಂದ ಮತ್ತು ಅವರನ್ನು ರಕ್ಷಿಸುತ್ತಿರುವ ನಿಮ್ಮನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಿ ಎಂದು ಸವಾಲು ಹಾಕಿದರು.

ದುಸ್ಸಾಹಸ ಮಾಡಬೇಡಿ
ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುವ ನೈತಿಕತೆ ಈ ಜನ್ಮದಲ್ಲಿ ನೀವು ಪಡೆದುಕೊಂಡಿಲ್ಲ. ಅದನ್ನು ಮುಂದಿನ ಜನ್ಮದಲ್ಲಿ ಗಳಿಸಿಕೊಳ್ಳುವ ಪ್ರಯತ್ನ ಮಾಡಬಹುದು ಅಷ್ಟೇ. ಸಿಬಿಐ ಮತ್ತು ಇಡಿ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದರೆ, ಡಿನೋಟಿಫಿಕೇಷನ್‌, ಅಕ್ರಮ ಗಣಿಗಾರಿಕೆ, ಮನಿ ಲಾಂಡ್ರಿಂಗ್‌ ಹೀಗೆ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳ ಕಿಂಗ್‌ಪಿನ್‌ ಆಗಿರುವ ನಿಮ್ಮ ಜಾಗ ಎಲ್ಲಿರಬಹುದು ಎನ್ನುವುದನ್ನು ಒಮ್ಮೆ ಯೋಚಿಸಿ. ಗಾಜಿನ ಮನೆಯಲ್ಲಿ ಕೂತು ಕಲ್ಲು ಹೊಡೆಯುವ ದುಸ್ಸಾಹಸ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next