ಹೈದರಾಬಾದ್ : ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (
Salman Khan) ಅಭಿನಯದ ‘ಸಿಕಂದರ್’ ಚಿತ್ರದ ಶೂಟಿಂಗ್ ಹೈದರಾಬಾದ್‌ನ ಸ್ಟಾರ್ ಹೋಟೆಲ್‌ನಲ್ಲಿ ನಡೆಯುತ್ತಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಟಾಪ್ ಹೀರೋಗೆ ಬಂದಿರುವ ನಿರಂತರ ಬೆದರಿಕೆಗಳ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ನಡೆಸಲಾಗುತ್ತಿದೆ.
ಸಲ್ಮಾನ್ ಖಾನ್ ಅವರು ‘ವೈ ಪ್ಲಸ್’ ವರ್ಗದ ಭದ್ರತೆ ಹೊಂದಿರುವುದರಿಂದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಶನಿವಾರ(ನ9) ತಿಳಿಸಿದ್ದು, ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿವೆ.‘ಸಿಕಂದರ್’ ಚಿತ್ರದಲ್ಲಿ ‘ರಶ್ಮಿಕಾ ಮಂದಣ್ಣ ಕೂಡ ನಟಿಸುತ್ತಿದ್ದಾರೆ.
ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಅವರಿಗೆ ಸರಕಾರದ ಭದ್ರತೆ ಜತೆಗೆ ತಮ್ಮದೇ ಆದ ಭದ್ರತೆಯನ್ನೂ ಹೊಂದಿದ್ದಾರೆ. ಈ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆಗಳನ್ನು ಪಡೆದಿದ್ದ ಸಲ್ಮಾನ್ ಅವರಿಗೆ ಮತ್ತೆ ಬೆದರಿಕೆಗಳನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಮುಂಬೈನಲ್ಲಿ ತಿಳಿಸಿದ್ದರು. ಗುರುವಾರ ರಾತ್ರಿ ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಬೆದರಿಕೆ ಸಂದೇಶ ಕಳುಹಿಸಿ
5 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದು, ಇದನ್ನು ಬಿಷ್ಣೋಯ್ ಗ್ಯಾಂಗ್ ಪರವಾಗಿ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇದಲ್ಲದೆ, ‘ಮೈ ಸಿಕಂದರ್ ಹೂ’ ಹಾಡಿನ ಗೀತರಚನೆಕಾರನಿಗೆ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಧಿಕಾರಿಗಳ ದೂರಿನ ಮೇರೆಗೆ ವರ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.