ಹೊಸದಿಲ್ಲಿ: ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ದೊಡ್ಡ ಗೆಲುವು ಸಾಧಿಸಲಿದ್ದಾರೆ, ರಾಹುಲ್ ಗಾಂಧಿ ಅವರೊಂದಿಗೆ ಸಂಸತ್ತಿನಲ್ಲಿ ಜತೆಯಾಗಿ ಬಿಜೆಪಿ ಮತ್ತು ಎನ್ಡಿಎಗೆ ಖಂಡಿತವಾಗಿಯೂ ನಿದ್ದೆಯಿಲ್ಲದ ರಾತ್ರಿಗಳನ್ನು ಕಾಣುವಂತೆ ಮಾಡಲಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಹೇಳಿದ್ದಾರೆ.
ಚುನಾವಣ ಫಲಿತಾಂಶಕ್ಕೆ ಒಂದು ದಿನ ಮೊದಲು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೈಲಟ್, “ನಾವು ವಯನಾಡ್ನಿಂದ ಪ್ರಿಯಾಂಕಾ ಅವರ ಐತಿಹಾಸಿಕ ಗೆಲುವನ್ನು ನೋಡುತ್ತಿದ್ದೇವೆ. ಅವರು ಅನೇಕ ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಒಂದು ಸಮಯದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಜೀವ್ ಗಾಂಧಿಯವರಿಗಾಗಿ ವ್ಯಾಪಕವಾಗಿ ಪ್ರಚಾರ ಮಾಡಿದ್ದಾರೆ, ಆದ್ದರಿಂದ ಅವರು ದೇಶಾದ್ಯಂತ ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಈಗಾಗಲೇ ಕೇಡರ್ ಅನ್ನು ಪ್ರೇರೇಪಿಸುವ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ ” ಎಂದು ಮಾಜಿ ಕೇಂದ್ರ ಸಚಿವ ಹೇಳಿದರು.
ಪ್ರಿಯಂಕಾ ಗಾಂಧಿ ದೇಶಾದ್ಯಂತ ಅತ್ಯಂತ ಜನಪ್ರಿಯ ಮುಖವಾಗಿದ್ದು, ಕೇರಳದ ಜನರಿಗೆ ಮಾತ್ರವಲ್ಲದೆ ಸಂಸತ್ತಿನಲ್ಲಿ ಮಹಿಳೆಯರು ಮತ್ತು ಯುವಜನರಿಗೆ ಧ್ವನಿಯಾಗಿ ಉತ್ತಮ ವಕೀಲರಾಗಳಿದ್ದಾರೆ ಎಂದು ಪೈಲಟ್ ಹೇಳಿದರು.
“ರಾಹುಲ್ ಗಾಂಧಿ ಲೋಕಸಭೆಯಲ್ಲಿ ವಿಪಕ್ಷದ ನಾಯಕರಾಗಿ ಸರಕಾರವನ್ನು ಹೆಚ್ಚು ಜವಾಬ್ದಾರಿಯುತವಾಗಿರುವಂತೆ ನೋಡಿಕೊಂಡಿದ್ದಾರೆ. ಪ್ರಿಯಾಂಕಾಜೀ ಅವರು ಶ್ರೇಣಿಗೆ ಸೇರುವುದು ಎನ್ಡಿಎಗೆ ಕಠಿನ ದಿನಗಳಾಗಲಿವೆ. ಲೋಕಸಭೆಯಲ್ಲಿ ಒನ್ ಪ್ಲಸ್ ಒನ್ 11 ಆಗಲಿದೆ’ ಎಂಬ ಲೆಕ್ಕಾಚಾರ ಪೈಲಟ್ ನೀಡಿದರು.
ನವೆಂಬರ್ 13 ರಂದು ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಮತದಾನ ನಡೆದಿದ್ದು, ನಾಳೆ (ನವೆಂಬರ್ 23) ಫಲಿತಾಂಶ ಪ್ರಕಟವಾಗಲಿದೆ.