Advertisement

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

02:00 AM Nov 24, 2024 | Team Udayavani |

ಪುತ್ತೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿಯ ಕೃಷಿ ಸಾಲ ಹಾಗೂ ಶೇ.3 ಬಡ್ಡಿ ದರದ ಸಾಲ ಮಿತಿ ಹೆಚ್ಚಿಸಿ ರಾಜ್ಯ ಸರಕಾರವೂ ಬಜೆಟ್‌ನಲ್ಲಿ ಹೊರಡಿಸಿರುವ ಆದೇಶವನ್ನು ಅನುಷ್ಠಾನಿಸದೆ ರೈತರಿಗೆ ವಂಚನೆ ಮಾಡಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

Advertisement

ಶೂನ್ಯ ಬಡ್ಡಿ ದರದ ಸಾಲವನ್ನು 5 ಲ. ರೂ.ಗೆ, ಶೇ.3 ಬಡ್ಡಿ ದರದ ಸಾಲವನ್ನು 10ರಿಂದ 15 ಲಕ್ಷ ರೂ.ಗೆ ಹೆಚ್ಚಿಸುವ ಬಗ್ಗೆ ಬಜೆಟಿನಲ್ಲಿ ನೀಡಿದ ಭರವಸೆಯಂತೆ ಸಿದ್ದರಾಮಯ್ಯ ಸರಕಾರ 2023ರ ಸೆ.9ರಂದು ಈ ಎರಡು ಸಾಲದ ಮಿತಿಯನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಈ ಬಜೆಟಿನ ನಿರ್ಣಯವನ್ನು ಸರಕಾರವು ಮೇ 27ಕ್ಕೆ ಸಹಕಾರ ಸಂಘಗಳ ನಿಬಂಧಕರಿಗೆ, ನಿಬಂಧಕರು ಆ.1ರಂದು ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಳುಹಿಸಿದ್ದಾರೆ. ಪ್ರಕ್ರಿಯೆ ನಡೆದು 8 ತಿಂಗಳಾದರೂ ಅದು ಪಾಲನೆ ಆಗಿಲ್ಲ ಎಂದರು.

ನಬಾರ್ಡ್‌ ಕೇಳಿ ಘೋಷಿಸಿದ್ದಾ?
ರಾಜ್ಯದ 26 ಲಕ್ಷ ರೈತರಿಗೆ 27 ಸಾವಿರ ಕೋ.ರೂ. ದಾಖಲೆ ಸಾಲ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮದು ನುಡಿದಂತೆ ನಡೆದ ಸರಕಾರ ಎನ್ನುವ ಸಿದ್ದರಾಮಯ್ಯರಿಗೆ ಬಜೆಟ್‌ನಲ್ಲಿ ಘೋಷಿಸಿದನ್ನು ಜಾರಿ ಮಾಡಲು ಯಾಕೆ ಸಾಧ್ಯವಾಗಿಲ್ಲ? ಶೂನ್ಯ ಬಡ್ಡಿ ಸಾಲ ವಿತರಣೆಗೆ ಸಂಬಂಧಿಸಿ ರಾಜ್ಯ ಸಹಕಾರ ಸಚಿವರು ನಬಾರ್ಡ್‌ ದುಡ್ಡು ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ ನೀವು ನಬಾರ್ಡ್‌ ಕೇಳಿ ಬಜೆಟ್‌ನಲ್ಲಿ ಘೋಷಿಸಿದ್ದೇ ಎಂದು ಪ್ರಶ್ನಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ಥ, ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್‌ ಪಿ.ಬಿ., ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್‌ ತೆಂಕಿಲ ಉಪಸ್ಥಿತರಿದ್ದರು.

ಸಾಲ ನೀಡಿ ಸಂಕಷ್ಟ
ಶೂನ್ಯ ಬಡ್ಡಿಯ ಮಿತಿ ಹೆಚ್ಚಳವನ್ನು ನಂಬಿ ಕೆಲವು ಸೊಸೈಟಿಗಳು ತಮ್ಮ ಸ್ವಂತ ನಿಧಿಯಿಂದ ಸಾಲ ನೀಡಿತ್ತು. ನಿಯಮ ಪ್ರಕಾರ ರಾಜ್ಯ ಅಪೆಕ್ಸ್‌ ಬ್ಯಾಂಕ್‌ಗೆ ನಬಾರ್ಡ್‌ ಬ್ಯಾಂಕ್‌ನಿಂದ ಹಣಕಾಸು ಸೌಲಭ್ಯ ಒದಗಿಸಲಾಗುತ್ತದೆ. ಅಪೆಕ್ಸ್‌ನಿಂದ ಡಿಸಿಸಿ ಬ್ಯಾಂಕ್‌ಗಳಿಗೆ ಬಂದು ಅಲ್ಲಿಂದ ಆಯಾ ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ಸಾಲದ ನಿಧಿ ವರ್ಗಾವಣೆ ಆಗುತ್ತದೆ.

ಈ ಪ್ರಕ್ರಿಯೆ ಇನ್ನೂ ಆಗಿಲ್ಲ. ನಬಾರ್ಡ್‌ ದುಡ್ಡು ಬಂದಿಲ್ಲ ಎಂಬ ಸಬೂಬು ಹೇಳಲಾಗುತ್ತಿದೆ. ಇದರಿಂದ ಸೊಸೈಟಿಗಳು ತಾವು ನೀಡಿದ ಸಾಲದ ಮೊತ್ತದ ಮೇಲೆ ಬಡ್ಡಿ ವಸೂಲಿ ಮಾಡಲು ಮುಂದಾಗಿದೆ. ಆದರೆ ಸಾಲ ಪಡೆದಿರುವ ಕೃಷಿಕರು ಸರಕಾರದ ಶೂನ್ಯ ಬಡ್ಡಿ ದರದ ಆದೇಶವನ್ನು ತೋರಿಸುತ್ತಿದ್ದಾರೆ. ಹೀಗಾಗಿ ಸರಕಾರದ ಆದೇಶ ನಂಬಿ ಸಾಲ ನೀಡಿದ ಸೊಸೈಟಿ ಸಂಕಷ್ಟಕ್ಕೆ ಸಿಲುಕಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next