Advertisement
ಮಹಾನಗರ : ಕಡಲ್ಕೊರೆತ ವಿಪರೀತವಾದಾಗಲೆಲ್ಲ ಅಲ್ಲಿನ ಜನ ಬೀದಿಗೆ ಬರುತ್ತಾರೆ. ಆಗ, ಜನಪ್ರತಿನಿಧಿಗಳು ಅಲ್ಲಿಗೆ ಓಡೋಡಿ ಬರುತ್ತಾರೆ. ತಾತ್ಕಾಲಿಕವಾಗಿ ನಾಲ್ಕೈದು ಲೋಡು ಕಲ್ಲು ಕಡಲಿನ ಬದಿಗೆ ಹಾಕುವ ಕೆಲಸ ನಡೆಯುತ್ತದೆ. ಕಲ್ಲು ಹಾಕಿದ ಕೆಲವೇ ದಿನದಲ್ಲಿ ಕಡಲಿನ ಅಲೆಗಳ ಹೊಡೆತಕ್ಕೆ ಸಿಲುಕಿ ಕಲ್ಲೇ ಕಡಲಿಗೆ ಆಹುತಿಯಾಗುತ್ತದೆ. ಮತ್ತೆ ರಾಜಕೀಯ/ಅಧಿಕಾರಿಗಳ ಗಢಣ ಓಡೋಡಿ ಬರುತ್ತಾರೆ. ಮನೆ ಕಳೆದವರಿಗೆ ಅದರ ತೀವೃತೆಯನ್ನು ಮನಗಂಡು ಲೆಕ್ಕಹಾಕಿ ಒಂದಿಷ್ಟು ಪರಿಹಾರ ನೀಡುತ್ತಾರೆ. ಅಲ್ಲಿಗೆ ಒಂದು ವರ್ಷದ ಕಡಲ್ಕೊರೆತ ಸಮಸ್ಯೆ ನಿವಾರಣೆಯಾದಂತೆ! ಮತ್ತೆ ಮುಂದಿನ ಮಳೆಗಾಲ-ಮುಂದಿನ ಕಡಲ್ಕೊರೆತ!
ದ.ಕ.ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರು ತನಕ ಹೆಚ್ಚಾ ಕಡಿಮೆ 168 ಕಿ.ಮೀ. ಉದ್ದದ ಕರಾವಳಿ ತೀರದಲ್ಲಿ ಕಡಲ್ಕೊರೆತ ಸಮಸ್ಯೆ ಇದ್ದೇ ಇದೆ. ಇದರಲ್ಲೂ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಸ್ವಲ್ಪ ಹೆಚ್ಚು ಎಂದೇ ಉಲ್ಲೇಖಿಸಬಹುದು. ಉಳ್ಳಾಲ-ಸಸಿಹಿತ್ಲು-ಮುಕ್ಕ ಸೇರಿದಂತೆ ಮಂಗಳೂರು ವ್ಯಾಪ್ತಿ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಕಡಲ್ಕೊರೆತ ಸಮಸ್ಯೆ ಕಾಣಿಸುತ್ತಿದೆ. ಈ ಪೈಕಿ ಉಳ್ಳಾಲ- ಸೋಮೇಶ್ವರ ಭಾಗದಲ್ಲಿ ಅತ್ಯಧಿಕ. ಉಳ್ಳಾಲ, ಸುಭಾಷ್‌ನಗರ, ಕೈಕೋ ಹಿಲೇರಿಯಾ ವ್ಯಾಪ್ತಿಯಲ್ಲಿ ಹಲವು ಮನೆಗಳು ಸಮುದ್ರಪಾಲಾಗಿರುವ ಉದಾಹರಣೆ ಇದೆ. ಹಲವು ಜನರು ಬೀದಿಗೆ ಬಂದಿದ್ದರು. ಈಗ ಮಳೆಗಾಲ ಮತ್ತೆ ಬಂದ ಕಾರಣ ಮತ್ತೂಮ್ಮೆ ಆತಂಕ ಎದುರಾಗಿದೆ. ಹಲವು ರೀತಿಯಲ್ಲಿ ಪ್ರಯೋಗಗಳು, ಸಮೀಕ್ಷೆಗಳು, ವರದಿಗಳು, ತಂತ್ರಜ್ಞಾನ ಗಳು, ಕಾಂಕ್ರೀಟ್ ತಡೆಗೋಡೆ, ಕಡಲಿಗೆ ಕಲ್ಲು, ಮರಳು ಚೀಲ ಇಡುವುದು ಸೇರಿದಂತೆ ಹತ್ತು ಹಲವು ಬಗೆಯ ಮೂಲಕ ಕಡಲ್ಕೊರೆತ ತಡೆಗಟ್ಟಲು ಪ್ರಯತ್ನ ಮಾತ್ರ ಸಾಗುತ್ತಲೇ ಇದೆ. ಆದರೆ, ಕಡಲ್ಕೊರೆತ ಮಾತ್ರ ಇನ್ನೂ ಕಡಿಮೆಯಾದ ಬಗ್ಗೆ ಉಲ್ಲೇಖವಿಲ್ಲ.
Related Articles
ಉಳ್ಳಾಲ ಸುತ್ತಮುತ್ತಲ ಪ್ರದೇಶದಲ್ಲಿ ಕಡಲ್ಕೊರೆತ ಪ್ರತೀವರ್ಷದ ಸಮಸ್ಯೆ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಸಂತ್ರಸ್ತರಿಗೆ ಪರ್ಯಾಯ ಸ್ಥಳದಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ವಹಿಸುವಂತೆ ಈಗಿನ ಶಾಸಕ ಯು.ಟಿ.ಖಾದರ್ ಅವರು ಸೂಚಿಸಿದ್ದರು. ಇದರಂತೆ ಆಗಿನ ಜಿಲ್ಲಾಧಿಕಾರಿ ಡಾ| ಕೆ.ಜಿ.ಜಗದೀಶ್ ಅವರು, ಸ್ಥಳಾಂತರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ತೀರ ಪ್ರದೇಶದಲ್ಲಿ ಅತ್ಯಂತ ಆತಂಕಿತರಾಗಿ ಜೀವನ ನಿರ್ವಹಿಸುತ್ತಿರುವ ಮನೆ ಮಂದಿಗೆ ಶಾಶ್ವತವಾಗಿ ಬೇರೆ ಕಡೆಗಳಲ್ಲಿ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಸ್ಥಳ ಹುಡುಕಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಜಿಲ್ಲಾಧಿಕಾರಿ ಬದಲಾಗುತ್ತಿದ್ದಂತೆ ಪುನರ್ವಸತಿ ವಿಚಾರ ಅವರ ಜತೆಗೆ ಮರೆಯಾಗಿದೆ.
Advertisement
ಅಗ್ನಿಶಾಮಕದಳದ ಔಟ್‌ಪೋಸ್ಟ್ ಅಗತ್ಯಕಡಲ್ಕೊರತೆ ಸಮಸ್ಯೆ ಎದುರಾದಾಗ, ಮನೆ – ಮಠ ಕಳೆದುಕೊಂಡಾಗ ಅಥವಾ ಇನ್ನಿತರ ಅವಘಡ ಎದುರಾದಾಗ ಅದನ್ನು ಎದುರಿಸಲು ಸರಕಾರ ಸದಾ ಸಿದ್ಧವಾಗಿರಬೇಕು. ಇದಕ್ಕಾಗಿ ಅಧಿಕಾರಿಗಳ ತಂಡ ಸನ್ನದ್ಧವಾಗಿರಬೇಕು. ವಿಶೇಷವಾಗಿ ಅಗ್ನಿಶಾಮಕ ದಳದ ಸಿಬಂದಿ ಇಲ್ಲಿ ಹೆಚ್ಚು ಕಾರ್ಯನಿರ್ವಹಿಸಬೇಕಾಗುತ್ತದೆ. ಹೀಗಾಗಿ ಈ ಭಾಗದಲ್ಲಿ ಪ್ರತ್ಯೇಕವಾಗಿ ಔಟ್‌ಪೋಸ್ಟಿಂಗ್ ವ್ಯವಸ್ಥೆಯನ್ನು ಮಳೆಗಾಲದ ಸಂದರ್ಭ ಆಯೋಜಿಸಿದರೆ ಉತ್ತಮ. ‘ಸಂಭವನೀಯ ಸ್ಥಳಗಳ ವಿವರ ಸಂಗ್ರಹ’
ಕಡಲ್ಕೊರೆತ ನಿವಾರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಪೂರ್ವಸಿದ್ಧತೆಗಳನ್ನು ಈಗಾಗಲೇ ಮಾಡಲಾಗುತ್ತಿದೆ. ಮಳೆಗಾಲದ ಸಂದರ್ಭ ಹೆಚ್ಚು ಸಂಭವನೀಯ ಕಡಲ್ಕೊರೆತ ನಡೆಯುವ ಸ್ಥಳವನ್ನು ಪಟ್ಟಿ ಮಾಡಿ ನೀಡುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗುವುದು.
-ಸಸಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ — ದಿನೇಶ್ ಇರಾ