Advertisement

Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ

12:38 PM Dec 18, 2024 | Team Udayavani |

ಬೆಟ್ಟಂಪಾಡಿ: ಶಾಲಾ ಮಕ್ಕಳಲ್ಲಿ ಕೃಷಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಸುಳ್ಯಪದವು ವಿಜಯ ಗ್ರಾಮ ಸಮಿತಿ ವತಿಯಿಂದ ನಡೆದ ಭತ್ತ ಕೃಷಿ ಅಭಿಯಾನ ಯಶಸ್ವಿಗೊಂಡಿದೆ. ಶಾಲೆಯಲ್ಲಿ ನೀಡಿದ ನೇಜಿಯನ್ನು ಮನೆಗೆ ಕೊಂಡೊಯ್ದ ಮಕ್ಕಳು ಮನೆಯ ಆವರಣದಲ್ಲಿ ಪುಟ್ಟದೊಂದು ಗದ್ದೆ ನಿರ್ಮಿಸಿ ಬೇಸಾಯ ಮಾಡಿ, ಪೈರು ಕತ್ತರಿಸಿ ಶಾಲೆಗೆ ಮರಳಿ ತಂದು ಸಂಭ್ರಮಿಸಿದ್ದಾರೆ.

Advertisement

ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ವಿಜಯ ಗ್ರಾಮ ಸಮಿತಿ ಸುಳ್ಯಪದವು ಇದರ ವತಿಯಿಂದ ಆಗಸ್ಟ್‌ನಲ್ಲಿ ಈ ಅಭಿಯಾನ ಆರಂಭಿಸಲಾಗಿತ್ತು. ಗಡಿ ಭಾಗದ 10 ಶಾಲೆಗಳನ್ನು ಆಯ್ಕೆ ಮಾಡಿ, ಅದರಲ್ಲಿದ್ದ 1000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ನೇಜಿಯನ್ನು ನೀಡಲಾಗಿತ್ತು. ಅವುಗಳನ್ನು ಮನೆಯ ಆವರಣದಲ್ಲಿ ಬೆಳೆಸಿ ಭತ್ತವನ್ನು ಮರಳಿ ತರುವಂತೆ ಸೂಚಿಸಲಾಗಿತ್ತು. ಅದರಂತೆ ಈಗಾಗಲೇ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಭತ್ತವನ್ನು ಶಾಲೆಗೆ ತಂದಿದ್ದಾರೆ. ಉಳಿದವರ ಮನೆಯಲ್ಲಿ ಕಟಾವು ನಡೆಯುತ್ತಿದೆ. ಈ ನಡುವೆ, ಶಾಲೆಯ ಶಿಕ್ಷಕರು ಶಾಲೆಯ ಆವರಣದಲ್ಲೇ ಭತ್ತದ ಬೇಸಾಯ ಮಾಡಿ ಮಕ್ಕಳಿಗೆ ಮಾದರಿಯಾಗಿದ್ದು ವಿಶೇಷ. 400 ಮಕ್ಕಳಿಂದ ಈಗಾಗಲೇ ಸಂಗ್ರಹವಾಗಿರುವ ಭತ್ತದ ಪ್ರಮಾಣ ಸುಮಾರು 35ರಿಂದ 40 ಕೆಜಿ.

ಅಭಿಯನ ನಡೆದಿದ್ದು ಹೇಗೆ?
-ಆಗಸ್ಟ್‌ನಲ್ಲಿ ಪ್ರತೀ ಮಗುವಿನ ಕೈಗೆ ನೇಜಿಯನ್ನು ನೀಡಿ ಮನೆಯ ಅಂಗಳದಲ್ಲಿ ಗದ್ದೆ ಮಾಡಿ ನಾಟಿ ಮಾಡುವಂತೆ ಸೂಚಿಸಲಾಗಿತ್ತು.
-ಸಂಪನ್ಮೂಲ ವ್ಯಕ್ತಿಗಳು ಭತ್ತ ಬೆಳೆಸುವ ವಿಧಾನ,ಪೋಷಣೆ,ಪೋಷಕಾಂಶ ಮತ್ತು ರೋಗಗಳ ನಿರ್ವಹಣೆಯ ಮಾಹಿತಿ ನೀಡಿದ್ದರು.
-ಆಯಾ ಶಾಲೆಯ ಮುಖ್ಯಸ್ಥರ ಮೂಲಕ ಪ್ರತಿ ತಿಂಗಳು ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಗ್ರಾಮ ಸಮಿತಿ ಮೂಲಕ ನಡೆಯಿತು.
-ಹಿರಿಯರ ಸಹಾಯದಿಂದ ಭತ್ತ ಬೆಳೆದ ಮಕ್ಕಳು ಈಗ ಕಟಾವು ಮಾಡಿ, ಭತ್ತ ಬೇರ್ಪಡಿಸಿ ಶಾಲೆಗೆ ತಂದಿದ್ದಾರೆ.
-ಗ್ರಾಮ ಸಮಿತಿಯು ಮೌಲ್ಯ ಮಾಪನ ಮಾಡಿ ಪ್ರತೀ ಶಾಲೆಯ ಮೂರು ಮಂದಿಗೆ ಬಹುಮಾನ, ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಿದೆ.
-ಉತ್ತಮ ರೀತಿಯಲ್ಲಿ ನಿರ್ವಹಿಸಿ ಪ್ರೋತ್ಸಾಹ ನೀಡಿದೆ ಶಾಲೆಯನ್ನು ಗುರುತಿಸಿ ಗೌರವಿಸಲಾಗುತ್ತದೆ.

ಅಭಿಯಾನದ ಶಾಲೆಗಳು
-ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆ
-ಸುಬೋಧ ಪಾಣಾಜೆ
-ನವೋದಯ ಬೆಟ್ಟಂಪಾಡಿ
-ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ
-ಪ್ರಿಯದರ್ಶಿನಿ ಆಂ.ಮಾ. ಶಾಲೆ,
-ಪ್ರತಿಭಾ ಶಿಕ್ಷಣ ಸಂಸ್ಥೆ, ಪಟ್ಟೆ
-ನೆಟ್ಟಣಿಗೆ ಮುಟ್ನೂರು ಪ್ರೌಢಶಾಲೆ
-ಹನುಮಗಿರಿ ಗಜಾನನ ಶಾಲೆ
-ಈಶ್ವರಮಂಗಲ ಪಂಚಲಿಂಗೇಶ್ವರ ಪ್ರೌಢಶಾಲೆ
-ಸರ್ವೋದಯ ಪ್ರೌಢಶಾಲೆ ಸುಳ್ಯಪದವು

ಮುಂದಿನ ವರ್ಷ ಹೊಸ ಅಕ್ಕಿ ಊಟ
ಕೇವಲ ಒಂದೆರಡು ಶಾಲೆಯಲ್ಲಿ ನೇಜಿ ವಿತರಿಸುವ ಯೋಜನೆ ಯನ್ನು ಗಡಿ ಭಾಗದ ಪ್ರೌಢ ಶಾಲೆಗಳಿಗೆ ವಿಸ್ತರಿಸಿದೆವು. ಭತ್ತ ಎಷ್ಟು ಸಿಗುತ್ತದೆ ಎಂಬುದು ಮುಖ್ಯವಲ್ಲ. ಮಕ್ಕಳು ಭಾಗವಹಿಸುವಂತೆ ಮಾಡುವುದು ಮುಖ್ಯ. ಮುಂದಿನ ವರ್ಷ ಭತ್ತವನ್ನು ಅಕ್ಕಿ ಮಾಡಿ ಹೊಸ ಅಕ್ಕಿ ಊಟವನ್ನು ಶಾಲೆಯಲ್ಲಿ ಮಾಡಲಾಗುವುದು.
– ಗೋವಿಂದ್‌ ಭಟ್‌, ಅಧ್ಯಕ್ಷರು ವಿಜಯ ಗ್ರಾಮ ಸಮಿತಿ ಸುಳ್ಯಪದವು

Advertisement

ತುಂಬ ಖುಷಿಯ ಅನುಭವ
ಮನೆಯಲ್ಲಿ ಅಡಿಕೆ, ತೆಂಗು ಮತ್ತಿತರ ವಾಣಿಜ್ಯ ಬೆಳೆಗಳನ್ನು ಬೆಳೆಸುತ್ತಾರೆ. ಆದರೆ ಪ್ರಧಾನ ಆಹಾರ ಬೆಳೆ ಭತ್ತದ ಮಾಹಿತಿ ಇರಲಿಲ್ಲ. ಈಗ ಮನೆಯವರ ಸಹಕಾರದಿಂದ ಮನೆಯ ಮುಂದೆ ಗದ್ದೆ ಮಾಡಿ ನೇಜಿ ನೆಟ್ಟು ಬೆಳೆಸಿದೆ. ಪೈರು ಕಟಾವು ಮಾಡಿ ಭತ್ತವನ್ನು ಶಾಲೆಗೆ ನೀಡಿದ್ದೇನೆ. ತುಂಬ ಖುಷಿಯ ಅನುಭವ ಆಗುತ್ತಿದೆ.
– ಅನಘ ಕೆ. ಗಜಾನನ ಶಾಲೆ ಈಶ್ವರಮಂಗಲ

ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next