ಬೆಂಗಳೂರು : ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ರೂಪಾಯಿ ಮೌಲ್ಯ ತಿಳಿಸಿಕೊಡುತ್ತಿದ್ದಾರೆ ಹೊರತು ಮಾನವೀಯ ಮೌಲ್ಯ ಹಾಗೂ ಸಮಾಜಿಕ ಕಳಕಳಿ ಕಲಿಸುತ್ತಿಲ್ಲ ಎಂದು ನಿವೃತ್ತಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾರ್ಮಿಕರ ಒಕ್ಕೂಟದಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಂಗಳೂರು ನಗರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ತೃಪ್ತಿ ಮತ್ತು ಮಾನವೀಯತೆ ಅತಿ ಮುಖ್ಯ ಎಂದು ಹೇಳಿದರು.
ಶಾಂತಿ, ಸೌಹಾರ್ದತೆಯ ಬದುಕಿಗಾಗಿ ಹಿರಿಯರು ಕಟ್ಟಿಕೊಟ್ಟ ಮೌಲ್ಯವೇ ಮಾನವೀಯತೆ. ಶಾಲಾ ವಿದ್ಯಾರ್ಥಿಗಳ ಪಠ್ಯದಲ್ಲಿ ಜೀವನ ಮೌಲ್ಯದ ಬಗ್ಗೆ ಇಲ್ಲ. ರೂಪಾಯಿ ಮೌಲ್ಯ ಕಲಿಸುತ್ತಾರೆ, ಸಾಮಾಜಿಕ ಮೌಲ್ಯ ಕಲಿಸುತ್ತಿಲ್ಲ ಎಂದು ಹೇಳಿದರು.
ಸಾಮಾಜಿಕ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಭ್ರಷ್ಟರನ್ನು ಕರೆಸಿ ಹಾರ ಹಾಕುತ್ತೇವೆ. ಪ್ರಾಮಾಣಿಕರ ನಿಂದನೆ ಮಾಡುತ್ತೇವೆ. ದೇಶದಲ್ಲಿ ಧರ್ಮ, ಸಂಸ್ಕೃತಿ, ಭಾಷೆ ಎಲ್ಲವೂ ಭಿನ್ನವಾಗಿದೆ. ಆದರೆ, ಸಾಂಸ್ಕೃತಿಕವಾಗಿ ಬಂದಿರುವ ಯಾವ ಮೌಲ್ಯಗಳನ್ನು ನಾವು ಉಳಿಸಿಕೊಳ್ಳುತ್ತಿಲ್ಲ. ವಿವಿಧ ಹಗರಣಗಳಿಂದ ದೇಶಕ್ಕೆ ಕೋಟ್ಯಾಂತರ ರೂ.ಗಳು ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಕಟ್ಟಡ ಕಾರ್ಮಿಕರು ಇನ್ನೂ ಅಸಂಘಟಿತರಾಗಿದ್ದಾರೆ. ನಾಗರಿಕತೆಯ ಅಭಿವೃದ್ಧಿ ಹಾಗೂ ಆಧುನಿಕ ಭಾರತ ನಿರ್ಮಾಣಕ್ಕೆ ಅಸಂಘಟಿತ ಕಟ್ಟಡ ಕಾರ್ಮಿಕರು ಬೂನಾದಿಯಾಗಿದ್ದರು. ಬಸವ ತತ್ವವನ್ನು ಕಟ್ಟಡ ಕಾರ್ಮಿಕರು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ಭದ್ರತೆ ಹಾಗೂ ಸುರಕ್ಷತೆಗೆ ಬೇಕಾದ ಕ್ರಮವಾಗಬೇಕು. ಸರ್ಕಾರದಿಂದ ಈಗ ಇರುವ ಕಾರ್ಯಕ್ರಮಗಳ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ. ಅನುದಾನ ಇದ್ದರೂ ಬಳಕೆಯಾಗುತ್ತಿಲ್ಲ. ಎಲ್ಲ ರೀತಿಯ ಸೌಲಭ್ಯ ಕಟ್ಟಡ ಕಾರ್ಮಿಕರಿಗೆ ಸಿಗುವಂತಾಗಬೇಕು ಎಂದರು.
ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ದೇವರಾಜ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ವೆಂಕಟೇಶ್ ಉಪಸ್ಥಿತರಿದ್ದರು. ರಾಜೀವ್ ಗಾಂಧಿ ಆರೋಗ್ಯ ಸಂಸ್ಥೆಯ ಹೃದ್ಯೋಗ ವಿಭಾಗದ ಡಾ.ಸಿ.ನಾಗರಾಜ್, ಭಾರತೀಯ ವಿಶ್ವಕರ್ಮ ಸೇವಾ ಪರಿಷತ್ ಅಧ್ಯಕ್ಷ ಈಶ್ವರ ವಿಶ್ವಕರ್ಮ ಅವರನ್ನು ಸನ್ಮಾನಿಸಲಾಯಿತು.