Advertisement

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

12:55 AM Dec 21, 2024 | Team Udayavani |

ಕುಂದಾಪುರ: ಧಾರ್ಮಿಕ ಮುಂದಾಳು, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರಿಗೆ ಡಿ. 24ರಂದು 90 ವರ್ಷ ತುಂಬಲಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬವನ್ನು ಸಾರ್ವಜನಿಕರ ಭಾಗೀದಾರಿಕೆಯೊಂದಿಗೆ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯ ಬಯಲು ಆವರಣದಲ್ಲಿ ಆ ದಿನ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮ ದಿನೋತ್ಸವ ಸಮಿತಿ ಅಧ್ಯಕ್ಷ ಡಾ| ಮೋಹನ್‌ ಆಳ್ವ ಹೇಳಿದರು.

Advertisement

ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಅಜಾತಶತ್ರು ಬಿ. ಅಪ್ಪಣ್ಣ ಹೆಗ್ಡೆ ಅವರ 90ರ ಹುಟ್ಟು ಹಬ್ಬವನ್ನು ಸಂಭ್ರಮವನ್ನಾಗಿಸುವ ಕಲ್ಪನೆಯೊಂದಿಗೆ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಇದೊಂದು ವಿಭಿನ್ನ ಹಾಗೂ ದಾಖಲೆಯಾಗಿ ಉಳಿಯಬೇಕು ಅನ್ನುವ ಸದುದ್ದೇಶದಿಂದ ಈಗಾಗಲೇ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬೆಂಗಳೂರು, ಬ್ರಹ್ಮಾವರ, ಬೈಂದೂರು, ಮುಂಬಯಿ, ಕುಂದಾಪುರ ಸಹಿತ ಹಲವು ಕಡೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದವರು ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೌರವ ಸಮರ್ಪಣೆ
ಡಿ. 24ರ ಸಂಜೆ 6.30ರ ಸಭಾ ಕಾರ್ಯಕ್ರಮದಲ್ಲಿ ಅಪ್ಪಣ್ಣ ಹೆಗ್ಡೆಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೆಂದ್ರ ಹೆಗ್ಗಡೆ ಅವರು ಸಾರ್ವಜನಿಕ ಗೌರವ ಸಮರ್ಪಿಸಲಿದ್ದಾರೆ.

ವಿಶ್ರಾಂತ ಕುಲಪತಿ ಡಾ| ಬಿ. ಎ. ವಿವೇಕ ರೈ ಅವರಿಗೆ ಬಸ್ರೂರುಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅವಿಭಜಿತ ಕುಂದಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ 10 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ, ಅಶಕ್ತರಿಗೆ ನೆರವು ಹಸ್ತಾಂತರ ನಡೆಯಲಿದೆ. ಬಳಿಕ ಉಪವೇದಿಕೆಯಲ್ಲಿ ಸಮ್ಮಾನ, ಶುಭಾಶಯ, ಅಭಿನಂದನೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಸಂಜೆ 4ರಿಂದ ಭಜನ ಸಂಕೀರ್ತನೆ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಗುರುಕುಲ ಪಬ್ಲಿಕ್‌ ಸ್ಕೂಲ್‌ ಜಂಟಿ ಕಾರ್ಯನಿರ್ವಾಹಕ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ ತಿಳಿಸಿದರು.

Advertisement

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ, ಸಮಿತಿಯ ಉದಯ್‌ ಪಡುಕರೆ, ವಸಂತ ಗಿಳಿಯಾರು ಉಪಸ್ಥಿತರಿದ್ದರು.

ವರ್ಷವಿಡೀ ಸಮಾಜಮುಖಿ ಕಾರ್ಯಕ್ರಮ
ಈ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಅನ್ನುವ ನೆಲೆಯಲ್ಲಿ ವರ್ಷವಿಡೀ ಹತ್ತಾರು ಸಮಾಜಮುಖೀ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಉದ್ದೇಶವಿದೆ. 90 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ದೇವವೃಕ್ಷ ಅಭಿಯಾನ, ಗ್ರಾಮೀಣ ಪ್ರದೇಶದಲ್ಲಿ ರಂಗ ಮಂಟಪ ನಿರ್ಮಾಣ ಸಹಿತ ಹಲವು ಜನಪರ ಕಾರ್ಯಕ್ರಮ ಚಿಂತನೆಯಿದೆ. ಈಗಾಗಲೇ ಗೋಳಿಹೊಳೆಯ ಎಲ್ಲೂರಿನಲ್ಲಿ ಕಂಬಳ ಹಾಗೂ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಡಾ| ಮೋಹನ್‌ ಆಳ್ವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next