Advertisement

ಅ.15ರೊಳಗೆ ಮರಳು ಸಮಸ್ಯೆ ನಿವಾರಣೆ

12:41 PM Sep 26, 2018 | |

ಬೆಂಗಳೂರು: ಕರಾವಳಿ ಜಿಲ್ಲೆಗಳ ಮರಳಿನ ಸಮಸ್ಯೆ ನಿಗಿಸಲು ಅ.15 ರೊಳಗೆ ಎಲ್ಲ ನಿಯಮ ಸಡಿಲಗೊಳಿಸಿ ಸಾರ್ವಜನಿಕರಿಗೆ ಮರಳು ಸಿಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಮುಖ್ಯಮಂತ್ರಿಯವರು, ಎರಡೂ ಜಿಲ್ಲೆಯ ಜನತೆಗೆ ಅ.15 ರ ನಂತರ ಸುಗಮವಾಗಿ ಮರಳು ದೊರೆಯಲಿದೆ ಎಂದು ಭರವಸೆ ನೀಡಿದರು.

ಕರಾವಳಿ ನಿಯಂತ್ರಣ ವಲಯ (ಸಿಆರ್‌ ಝಡ್‌) ದಲ್ಲಿ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ತಡೆಯೊಡ್ಡಿರುವುದರಿಂದ ಎರಡೂ ಜಿಲ್ಲೆಗಳಲ್ಲಿ ಮರಳಿನ ಕೊರತೆಯುಂಟಾಗಿದೆ. ಆದ್ದರಿಂದ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ. ಖಾಸಗಿ ಯೋಜನೆಗಳಷ್ಟೇ ಅಲ್ಲದೆ ಸರ್ಕಾರದ ವಸತಿ ಯೋಜನೆಗಳಿಗೂ ಮರಳು ಸಿಗುತ್ತಿಲ್ಲ ಎಂದು ಶಾಸಕರ ನಿಯೋಗ ಮುಖ್ಯಮಂತ್ರಿಯವರ ಗಮನಕ್ಕೆ ತಂದಿತು.

 ಈ ಹಿನ್ನೆಲೆಯಲ್ಲಿ ಗಣಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸ್ಥಳದಲ್ಲೇ ಸೂಚನೆ ನೀಡಿದರು. ಸಿಆರ್‌ಝಡ್‌ ಪ್ರದೇಶದ ಸಮೀಕ್ಷೆ ನಡೆಸಲಾಗಿದ್ದು, ಮರಳು ದೊರೆಯುವ ಕುರಿತಂತೆ ಸುರತ್ಕಲ್‌ ಎನ್‌ಐಟಿಕೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ರಾಜ್ಯ ಸರ್ಕಾರ ಈಗಾಗಲೇ ಸಾಂಪ್ರದಾಯಿಕ ಮರಳುಗಣಿಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಮರಳು ತೆಗೆಯಲು ಅನುಮತಿ ನೀಡಲಿದೆ ಎಂದು ಹೇಳಿದರು.

ನಾನ್‌ ಸಿಆರ್‌ಝಡ್‌ ಪ್ರದೇಶದಲ್ಲಿಯೂ ಟೆಂಡರ್‌ ಪ್ರಕ್ರಿಯೆ ಕೈ ಬಿಟ್ಟು ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅವಕಾಶ ನೀಡುವಂತೆ ಜನಪ್ರತಿನಿಧಿಗಳು ಮನವಿ ಮಾಡಿದ್ದು ಅದಕ್ಕೂ ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

Advertisement

ಪ್ರಸ್ತುತ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ನಿರ್ಬಂಧ ಹೇರಿರುವುದರಿಂದ ಪ್ರತಿ ಲೋಡ್‌ಗೆ 28 ರಿಂದ 30 ಸಾವಿರ ರೂ. ನೀಡಬೇಕಾಗುತ್ತಿದೆ. ಸರ್ಕಾರ ಸಾಂಪ್ರದಾಯಿಕ ಮರಳು ಗಣಿಗಾರಿಕೆಗೆ ಅನುಮತಿ ನೀಡಿದರೆ ಎರಡೂ ಜಿಲ್ಲೆಗಳಲ್ಲಿ ಮೂರರಿಂದ ನಾಲ್ಕು ಸಾವಿರ ರೂ.ಗೆ ಒಂದು ಲೋಡ್‌ ಮರಳು ಸಿಗುವಂತಾಗುತ್ತದೆ ಎಂದು ಶಾಸಕರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು.

ಸಚಿವರಾದ ಯು.ಟಿ.ಖಾದರ್‌, ಜಯಮಾಲಾ, ಪರಿಷತ್‌ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ, ಶಾಸಕರಾದ ಹರೀಶ್‌ ಪೂಂಜಾ, ಸುಕುಮಾರಶೆಟ್ಟಿ, ಅಂಗಾರಾ, ರಮೇಶ್‌ ನಾಯ್ಕ, ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಅ. 15 ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿಯವರು ಭರವಸೆ ನೀಡಿದ್ದಾರೆ. ನಿಯಮ ಸಡಿಲಿಸಿ ಮರಳುಗಾರಿಕೆಗೆ ಅವಕಾಶ ಸಿಗುವ ವಿಶ್ವಾಸವಿದೆ.
-ಯು.ಟಿ.ಖಾದರ್‌

ಅ. 15 ರೊಳಗೆ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಜನ ರೊಚ್ಚಿಗೇಳುವುದು ಖಚಿತ. ಕರಾವಳಿಯ ಮರಳು ಸಮಸ್ಯೆಯೇ ಬೇರೆ ಇದೆ. ಅದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ.
-ಹರೀಶ್‌ ಪೂಂಜಾ, ಬೆಳ್ತಂಗಡಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next