Advertisement

Sanapur: ಗೊಂದಲಗಳ ಮಧ್ಯೆ ಜಿಪಿಎಸ್ ಸರ್ವೇಗೆ ಮುಂದಾಗಿರುವ ಅರಣ್ಯ ಇಲಾಖೆ

07:52 PM Nov 24, 2023 | Team Udayavani |

ಗಂಗಾವತಿ: ತಾಲೂಕಿನ ಸಾಣಾಪೂರ ಹಾಗೂ ಸುತ್ತಲಿನ ಪ್ರದೇಶದ ಸರ್ವೇ ನಂಬರ್ 01-02 ಮತ್ತು 13 ರಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂಬ ಕಾರಣ ನೀಡಿ ಅರಣ್ಯ ಇಲಾಖೆಯ ಕಾರ್ಯಯೋಜನೆ ಮೋಜಿಣಿ ವಿಭಾಗದ ಅಧಿಕಾರಿಗಳು ಕಳೆದೆರಡು ದಿನಗಳಿಂದ ಜಿಪಿಎಸ್ ಸರ್ವೇ ಕಾರ್ಯ ಮಾಡುತ್ತಿದ್ದು ಇದು ಸಾಣಾಪೂರ ಹಾಗೂ ಸುತ್ತಲಿನ ಪ್ರದೇಶದಲ್ಲಿ 1980 ದಶಕದಲ್ಲಿ ಸರಕಾರದಿಂದ ಭೂಮಿ ಪಡೆದು ಕೃಷಿ ಮಾಡುತ್ತಿರುವ ಸಣ್ಣಪುಟ್ಟ ರೈತರಲ್ಲಿ ಆತಂಕ ಮೂಡಿಸಿದೆ.

Advertisement

ಸಾಣಾಪೂರ ಸೀಮೆಯ ಸರ್ವೇ ನಂಬರ್ -01 ರಲ್ಲಿ ಸುಮಾರು 450 ಎಕರೆ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶ ಹಾಗೂ ಅಲ್ಲಲ್ಲಿ ಭೂಮಿ ಇದ್ದು 1980 ದಶಕದಲ್ಲಿ ಸುಮಾರು 125 ಎಕರೆ ಭೂಮಿಯನ್ನು 80ಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಿಗೆ ರಾಜ್ಯ ಸರಕಾರ ಮಂಜೂರಿ ಮಾಡಿ ಸಾಗುವಳಿ ಚೀಟಿಗಳನ್ನು ಹಂಚಿಕೆ ಮಾಡಿತ್ತು. ಸಾಣಾಪೂರ ಹಾಗೂ ಪ್ರಸ್ತುತ ಕಿಷ್ಕಿಂಧಾ ರೆಸಾರ್ಟ್ ಇರುವ ಪ್ರದೇಶದಲ್ಲಿ 125 ಎಕರೆ ಸಾಗುವಳಿ ಚೀಟಿ ಹಂಚಿಕೆಯಾದ ಭೂಮಿ ಇದ್ದು ಇದರಲ್ಲಿ ಅರಣ್ಯ ಇಲಾಖೆ ಭೂಮಿ ಇದೆ ಎನ್ನುವುದು ಅರಣ್ಯ ಇಲಾಖೆಯ ವಾದವಾಗಿದೆ.ಇದರಿಂದ ಆಗಾಗ ಅರಣ್ಯ ಇಲಾಖೆಯವರು ಗಡಿ ಗುರುತಿಸಿ ಕಲ್ಲುಗಳನ್ನು ಹಾಕುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ಮಾಡುವಂತೆ ರೈತರು ಹಲವು ಭಾರಿ ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದರು.

ಈಗ ಏಕಾಏಕಿ ಬಳ್ಳಾರಿ ವಿಭಾಗದ ಅರಣ್ಯ ಇಲಾಖೆಯ ಕಾರ್ಯ ಯೋಜನೆ ಮತ್ತು ಮೋಜಿಣಿ ವಿಭಾಗದ ಅಧಿಕಾರಿಗಳು ಜಿಪಿಎಸ್ ಮೂಲಕ ಇಡೀ ಸರ್ವೇ ನಂಬರ್ -01 ಮತ್ತು 02ರಲ್ಲಿ ಸ್ವಲ್ಪ ಭಾಗದ ಗಡಿಗಳನ್ನು ಗುರುತಿಸಿ ಶಾಶ್ವತ ಕಾಂಕ್ರೀಟ್ ಮೂಲಕ ಕಂಬಗಳನ್ನು ಹಾಕಿ ಸರಹದ್ದು ನಿರ್ಮಿಸಲು ಮುಂದಾಗಿದೆ. ಇದರಿಂದ 125 ಎಕರೆ ಸರಕಾರಿ ಭೂಮಿ ಪಡೆದು ಕೃಷಿ ಮತ್ತಿತರ ಚಟುವಟಿಕೆ ಮಾಡುತ್ತಿರುವವರು ಹಾಗೂ ಬೆಂಚಿಕುಟ್ರಿಯಲ್ಲಿ ರಾಘವೇಂದ್ರ ಕಾಲೋನಿಯಲ್ಲಿ ವಾಸಿಸುವವರು ತೀವ್ರ ಆತಂಕಗೊಂಡಿದ್ದಾರೆ. ಕೂಡಲೇ ಕಂದಾಯ ಇಲಾಖೆಯವರು ಮಧ್ಯೆ ಪ್ರವೇಶ ಮಾಡಿ ಜಂಟಿ ಸರ್ವೇ ಕಾರ್ಯ ಮಾಡುವ ಮೂಲಕ ಬಡ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ಕೃಷಿಕರನ್ನು ಸಂರಕ್ಷಣೆ ಮಾಡಬೇಕೆಂದು ಸಾಗುವಳಿದಾರರ ಅಭಿಪ್ರಾಯವಾಗಿದೆ.

ಸಾಣಾಪೂರ ಸರ್ವೇ ನಂಬರ -01 ರಲ್ಲಿ ಸರಕಾರ 125 ಎಕರೆ ಭೂಮಿಯನ್ನು ಬಡವರಿಗೆ ಅಲಾಟ್ ಮಾಡಿ 40 ವರ್ಷಗಳು ಕಳೆದಿವೆ. ಪದೇ ಪದೇ ಅರಣ್ಯ ಇಲಾಖೆಯವರು ಗಡಿ ನಿಗದಿ ಮಾಡುವ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಸರಕಾರ ಬಡವರಿಗೆ ಭೂಮಿ ಅಲಾಟ್ ಮಾಡಿದ ನಂತರ ಯಾವುದೇ ಕಾರಣಕ್ಕೂ ಏಕಪಕ್ಷೀಯ ವಾಗಿ ಸರ್ವೇ ಮಾಡಲು ಅರಣ್ಯ ಇಲಾಖೆಗೆ ಅವಕಾಶವಿಲ್ಲ. ಜಂಟಿ ಸರ್ವೇ ಮಾಡಬೇಕು.
ಜಿಲ್ಲಾಡಳಿತ ಕೂಡಲೇ ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೇ ಮಾಡಬೇಕು. ಏಕಪಕ್ಷೀಯವಾಗಿ ಅರಣ್ಯ ಇಲಾಖೆಯವರು ಜಿಪಿಎಸ್ ಮೂಲಕ ಸರ್ವೇ ನಡೆಸಿ ಗಡಿ ನಿಗದಿ ಮಾಡಿದರೆ ರೈತರಿಗೆ ಅನ್ಯಾಯವಾಗಲಿದೆ.
-ವೈ.ರಮೇಶ(ಯೇಸಣ್ಣ) ಮಾಜಿ ಸದಸ್ಯರು ತಾ.ಪಂ.

ಸಾಣಾಪೂರ ಸರ್ವೇ ನಂಬರ್ -01 ಮತ್ತು 02 ರಲ್ಲಿ ಅರಣ್ಯ ಇಲಾಖೆಯ ಭೂಮಿ ಒತ್ತುವರಿಯಾಗಿದ್ದು ಇಲಾಖೆಯಿಂದ ಸರ್ವೇ ನಡೆಸಿ ಶಾಶ್ವತ ಗಡಿ ನಿರ್ಮಿಸಲಾಗುತ್ತದೆ. ಸರಕಾರ 125 ಎಕರೆ ಭೂಮಿ ಡಿನೋಟಿಫೈ ಮಾಡಿ ಹಂಚಿಕೆ ಮಾಡಿದ ರೈತರಿಗೆ ಅರಣ್ಯ ಇಲಾಖೆ ಯಾವುದೇ ಕಿರುಕುಳ ನೀಡಿಲ್ಲ. ಜಂಟಿ ಸರ್ವೇ ಬಗ್ಗೆ ಮಾಹಿತಿ ಇಲ್ಲ. ಈಗಾಗಲೇ ಅರಣ್ಯ ಇಲಾಖೆಯಿಂದ ಸರ್ವೇ ಮಾಡಿ ಕಲ್ಲುಗಳನ್ನು ಹಾಕಲಾಗಿತ್ತು ಅವುಗಳನ್ನು ಧ್ವಂಸ ಮಾಡಲಾಗಿದ್ದು ಈಗ ಶಾಶ್ವತ ಕಾಂಕ್ರೀಟ್ ಕಂಬ ಹಾಕಿ ಬೇಲಿ ಹಾಕುವ ಯೋಜನೆ ಇದೆ. ಜಿಪಿಎಸ್ ಸರ್ವೇ ಮಾಡಿ ಗಡಿ ನಿಗದಿಗೊಳಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ.
-ಚಂದ್ರಶೇಖರ ಆರ್‌ಎಫ್‌ಓ ಕಾರ್ಯಯೋಜನೆ ಮೋಜಿಣಿ ವಿಭಾಗ ಬಳ್ಳಾರಿ

Advertisement

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next