ಸಾರ್ಕ್ ಸಮ್ಮೇಳನಕ್ಕೆ ಭಾರತವನ್ನು ಆಹ್ವಾನಿಸಬೇಕೆಂಬ ಪಾಕಿಸ್ಥಾನದ ನಿರ್ಧಾರವನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರಕಾರ ಸಕಾಲಿಕ ಮತ್ತು ಸಮುಚಿತವಾದ ನಡೆ ಇಟ್ಟಿದೆ. ಮೊದಲಾಗಿ ದಿಢೀರ್ ಎಂದು ಪಾಕಿಸ್ಥಾನ ಸಾರ್ಕ್ ಶೃಂಗದ ವಿಚಾರವನ್ನು ಎತ್ತಿರುವುದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಾರ್ಕ್ ಸಮ್ಮೇಳನ ನಡೆಯಬೇಕಿದ್ದರೆ ಎಲ್ಲ ಸದಸ್ಯ ದೇಶಗಳ ಒಮ್ಮತದಿಂದ ದಿನಾಂಕ ನಿರ್ಧಾರವಾಗಬೇಕು. ಅನಂತರ ಸಮ್ಮೇಳನದ ಆತಿಥ್ಯ ವಹಿಸುವ ದೇಶ ಸದಸ್ಯ ದೇಶಗಳಿಗೆ ಆಹ್ವಾನ ಕಳುಹಿಸಬೇಕು. ಆದರೆ ಪ್ರಸ್ತುತ ಸಮ್ಮೇಳನದ ದಿನಾಂಕವೇ ನಿಗದಿಯಾಗಿಲ್ಲ. ಪಾಕಿಸ್ಥಾನ ಪ್ರಧಾನಿ ಕಚೇರಿ ಮೋದಿಗೆ ವಿಶೇಷ ಆಹ್ವಾನ ನೀಡಲು ಬಯಸಿದೆ. ಹೀಗೆ ವಿಶೇಷ ಆಹ್ವಾನ ನೀಡಲು ಭಾರತವೇನೂ ಆಹ್ವಾನಿತ ದೇಶವಲ್ಲ, ಸಾರ್ಕ್ ಒಕ್ಕೂಟದ ಸದಸ್ಯ ರಾಷ್ಟ್ರ ಎನ್ನುವ ಮೂಲಕ ವಿದೇಶಾಂಗ ಇಲಾಖೆ ಪಾಕ್‌ಗೆ ತಕ್ಕ ಉತ್ತರ ನೀಡಿದೆ.
ಪಾಕಿಸ್ಥಾನದ ಈ ದಿಢೀರ್ ನಡೆಯ ಹಿಂದೆ ಎರಡು ಕಾರಣ ಊಹಿಸಬಹುದು. ಒಂದು ಕರ್ತಾರ್‌ಪುರ ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಭಾರತದ ಜತೆಗಿನ ಸ್ನೇಹ ಚಿಗುರಿದೆಯೆಂದು ಇಮ್ರಾನ್ ಸರಕಾರ ಭಾವಿಸಿರ ಬಹುದು. ಎರಡನೆಯದ್ದು ನಾವು ಸ್ನೇಹ ಹಸ್ತ ಚಾಚಿದರೂ ಭಾರತ ಒಪ್ಪುತ್ತಿಲ್ಲ ಎಂದು ಜಗತ್ತಿನೆದುರು ಬಿಂಬಿಸಿಕೊಳ್ಳುವುದು. ಕಾರಿಡಾರ್ ಶಂಕುಸ್ಥಾಪನೆಗೆ ಉಭಯ ದೇಶಗಳ ಪತ್ರಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ವಿದೇಶಗಳ ಪತ್ರಕರ್ತರೂ ಇರುತ್ತಾರೆ. ಇವರ ಮುಂದೆ ತಾನು ಎಲ್ಲ ಕಹಿಯನ್ನು ಮರೆತು ಸ್ನೇಹದ ಹಸ್ತ ಚಾಚಿದ್ದೇನೆ. ಆದರೆ ಭಾರತದ ಕಡೆಯಿಂದ ಸಕಾರಾತ್ಮಕ ಪ್ರತಿಸ್ಪಂದನೆ ಸಿಗುತ್ತಿಲ್ಲ ಎಂದು ತೋರಿಸಿಕೊಟ್ಟು ಆ ಮೂಲಕ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಂತಾರಾಷ್ಟ್ರೀಯ ಅನುಕಂಪ ಪಡೆದುಕೊಳ್ಳುವ ಕುಟಿಲ ಹಂಚಿಕೆ ಇದು ಎನ್ನುವುದೇ ಈ ಸಂದರ್ಭದಲ್ಲಿ ಹೆಚ್ಚು ಸೂಕ್ತ. ಪಾಕಿನಲ್ಲಿ ನಡೆಯಬೇಕಿದ್ದ 2016ರ ಸಾರ್ಕ್ ಸಮ್ಮೇಳನವನ್ನು ಭಾರತ ಭಯೋತ್ಪಾದನೆ ನಿರ್ಮೂಲನೆಯಾಗುವ ತನಕ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿ ಬಹಿಷ್ಕರಿಸಿತ್ತು. ಉರಿ ಸೇನಾ ನೆಲೆಯ ಮೇಲೆ ಪಾಕಿಸ್ಥಾನದ ಉಗ್ರರು ದಾಳಿ ನಡೆಸಿದ ಬೆನ್ನಿಗೆ ನಡೆಯಬೇಕಿದ್ದ ಸಮ್ಮೇಳನವನ್ನು ಬಹಿಷ್ಕರಿಸುವ ಮೂಲಕ ಪಾಕಿಗೆ ಸರಿಯಾಗಿ ಬಿಸಿ ಮುಟ್ಟಿಸಲಾಗಿತ್ತು. ಭಾರತದ ನಿರ್ಧಾರವನ್ನು ಬಾಂಗ್ಲಾ ದೇಶ, ಅಫ್ಘಾನಿಸ್ಥಾನ, ಭೂತಾನ್, ಮಾಲ್ದೀವ್ಸ್ ಮತ್ತು ಶ್ರೀಲಂಕಾ ಕೂಡ ಬೆಂಬಲಿಸಿದ್ದವು. ಹೀಗೆ 8 ಸದಸ್ಯ ದೇಶಗಳ ಪೈಕಿ ಐದು ದೇಶಗಳು ಹಿಂದೆಗೆದ ಕಾರಣ 2016ರಲ್ಲಿ ಸಾರ್ಕ್ ಸಮ್ಮೇಳನವೇ ನಡೆಯಲಿಲ್ಲ.
ಪಾಕಿಸ್ಥಾನ ಜತೆಗೆ ಮಾತುಕತೆ ನಡೆಸಬೇಕಾದರೆ ಆ ದೇಶ ಭಯೋತ್ಪಾದನೆಗೆ ಬೆಂಬಲ ಮತ್ತು ನೆರವು ನೀಡುವುದನ್ನು ನಿಲ್ಲಿಸಬೇಕೆನ್ನುವುದು ನಮ್ಮ ನಿಲುವು. ಆದರೆ ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿನ ನಿಲುವಿನಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎನ್ನುವುದು ಢಾಳಾಗಿಯೇ ಗೋಚರವಾಗುತ್ತಿದೆ. ಈಗಲೂ ಪಾಕ್ ಉಗ್ರರು ನಿತ್ಯ ಗಡಿದಾಟಿ ಬಂದು ಕಾಶ್ಮೀರದಲ್ಲಿ ದಾಳಿ ನಡೆಸುತ್ತಿದ್ದಾರೆ. ಭಾರತ ಮಾತ್ರವಲ್ಲದೆ ಒಟ್ಟಾರೆಯಾಗಿ ಜಾಗತಿಕ ಶಾಂತಿಗೆ ಪಾಕಿಸ್ಥಾನ ದೊಡ್ಡ ಅಡ್ಡಿ ಎನ್ನುವುದು ಈಗ ಎಲ್ಲರಿಗೂ ಮನವರಿಕೆಯಾಗಿದೆ. ಅಲ್ ಕಾಯಿದಾ, ಜೈಶ್, ಹಕ್ಕಾನಿ ಜಾಲ, ಲಷ್ಕರ್ ಸೇರಿದಂತೆ 90ಕ್ಕೂ ಹೆಚ್ಚು ಭಯೋತ್ಪಾದಕ ಸಂಘಟನೆಗಳು ಪಾಕಿಸ್ಥಾನದಲ್ಲಿವೆ. ಕುಟಿಲ ಉದ್ದೇಶವನ್ನು ಈಡೇರಿಸಿಕೊಳ್ಳುವ ಸಲುವಾಗಿಯೇ ಪಾಕ್ ಸರಕಾರ, ಸೇನೆ ಮತ್ತು ಗುಪ್ತಚರ ಪಡೆ ಭಯೋತ್ಪಾದಕ ಸಂಘಟನೆಗಳನ್ನು ಹುಟ್ಟುಹಾಕಿ ಪೋಷಿಸಿವೆ ಎಂಬುದು ಪರ್ವೇಜ್ ಮುಷÅಪ್, ಅಸಿಫ್ ಅಲಿ ಜರ್ದಾರಿ, ಸರ್ತಾಜ್ ಅಜೀಜ್ ಸೇರಿದಂತೆ ಆ ದೇಶವನ್ನಾಳಿಗೆ ಕೆಲವು ನಾಯಕರೇ ಒಪ್ಪಿಕೊಂಡಿರುವ ಸತ್ಯ. ಹೀಗಿರುವಾಗ ಆ ದೇಶದಲ್ಲಿ ಸಾರ್ಕ್ ಸಮ್ಮೇಳನ ನಡೆಸುವುದೇ ಒಂದು ರೀತಿಯಲ್ಲಿ ತಪ್ದು ನಿರ್ಧಾರ.
ಇದರೊಂದಿಗೆ ಸಾರ್ಕ್ ಸಂಘಟನೆಯಂಥ ವೇದಿಕೆ ಇರುವುದು ಸದಸ್ಯ ರಾಷ್ಟ್ರಗಳಲ್ಲಿನ ಪರಸ್ಪರ ಸಮನ್ವಯ ಸುಧಾರಣೆಗೆ, ಆರ್ಥಿಕ ವ್ಯವಹಾರದಿಂದ ಹಿಡಿದು ಎಲ್ಲ ರೀತಿಯ ಸಹಕಾರಕ್ಕಾಗಿ ಎನ್ನುವುದು ಸ್ಪಷ್ಟ. ಇಂಥ ವೇದಿಕೆಯು ಯಾವುದೇ ರಾಷ್ಟ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಕಂಟಕವಾಗುವಂಥ ಭಯೋತ್ಪಾದನೆಯನ್ನು ಹತ್ತಿಕ್ಕುವ ದನಿಯೂ ಆಗಿರಬೇಕು ಎಂಬುದು ನಿರ್ವಿವಾದವಾದ ಸಂಗತಿ. ಸದಾಶಯದ ನೆಲೆಯಲ್ಲಿ ಯೋಚಿಸುವುದಾದರೆ ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಪಾಕಿಸ್ಥಾನದಲ್ಲಿ ತನ್ನ ಶೃಂಗ ಸಭೆಯನ್ನು ಆುೂàಜಿಸಿದರೆ ಜಗತ್ತಿಗೆ ಯಾವ ಬಗೆಯ ಸಂದೇಶ ರವಾನೆಯಾಗುತ್ತದೆ ಎಂಬುದನ್ನೂ ಸಾರ್ಕ್ ಸಂಘಟನೆ ಯೋಚಿಸಬೇಕಾದ ಹೊತ್ತಿದು. ಈ ದೃಷ್ಟಿಕೋನದಲ್ಲಿ ಭಾರತ ತನ್ನ ನಿಲುವಿಗೆ ಅಂಟಿಕೊಂಡಿರುವುದು ಸ್ವಾಗತಾರ್ಹ. ಸಾರ್ಕ್ ಸಂಘಟನೆಯೂ ಮುಂದಿನ ದಿನಗಳಲ್ಲಿ ತನ್ನ ನಿರ್ಧಾರಗಳನ್ನು ಕೈಗೊಳ್ಳುವಾಗ ಇಂಥ ಸೂಕ್ಷ್ಮ ಸಂಗತಿಗಳನ್ನೂ ಗಮನದಲ್ಲಿಟ್ಟುಕೊಳ್ಳುವುದು ತೀರಾ ಅವಶ್ಯ.