ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ “ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ’ ಆಯೋಜಿಸಿರುವುದು ವಿಶೇಷವಾಗಿದೆ.
ವಿಶೇಷಚೇತನರು ಹಾಗೂ ದೃಷ್ಟಿಚೇತನ ಕವಿಗಳಿಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಅವಕಾಶ ಸಿಗುತ್ತಿರಲಿಲ್ಲ. ತಮ್ಮ ಪ್ರತಿಭೆಗೆ ತಕ್ಕ ವೇದಿಕೆಗಳು ಸೃಷ್ಟಿಯಾಗುತ್ತಿರಲಿಲ್ಲ. ಅಂಥವರಿಗೆ ಕನ್ನಡ ಸಾಹಿತ್ಯ ಪರಿಷತ್ತು ವೇದಿಕೆ ಕಲ್ಪಿಸಿದೆ.
ದೃಷ್ಟಿಚೇತನ ವಿಶೇಷ ಕವಿಗೋಷ್ಠಿಯಿಂದ ಸಮ್ಮೇಳನಕ್ಕೆ ವಿಶೇಷತೆಯೂ ಬರಲಿವೆ. ಪ್ರಧಾನ ವೇದಿಕೆಯಲ್ಲಿಯೇ ಗೋಷ್ಠಿ ನಡೆಯಲಿದೆ. ಪ್ರಧಾನ ಹಾಗೂ ಸಮಾನಾಂತರ ಎರಡು ವೇದಿಕೆಗಳಿಂದ ಒಟ್ಟು 30 ಗೋಷ್ಠಿಗಳು ನಡೆಯಲಿದ್ದು, ಸಮ್ಮೇಳನದ ಉದ್ಘಾಟನೆಯಾಗುತ್ತಿದ್ದಂತೆ ಮಧ್ಯಾಹ್ನ 2ರಿಂದ 3.30ರವರೆಗೆ ಮೊದಲ ಗೋಷ್ಠಿ ನಡೆಯಲಿದ್ದು, ನಂತರ 3.30ರಿಂದ 4.30ರ ಎರಡನೇ ಗೋಷ್ಠಿಯಲ್ಲಿ ಮೊದಲ ಕವಿಗೋಷ್ಠಿಯೇ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ ನಡೆಯಲಿದೆ. ಮೊದಲಿನಿಂದಲೂ ಯಾವ ಯಾವ ಗೋಷ್ಠಿಗಳು ಇರಬೇಕು ಎಂಬ ಚರ್ಚೆಗಳು, ಸಲಹೆಗಳು, ಚಿಂತಕರು, ವಿಚಾರವಂತರು, ಸಾಹಿತಿಗಳಿಂದ ಕೇಳಿ ಬರುತ್ತಲೇ ಇತ್ತು. ಅದರಲ್ಲಿ ವಿಕಲ ಹಾಗೂ ದೃಷ್ಟಿಚೇತನರ ಗೋಷ್ಠಿಯೂ ಒಂದಾಗಿತ್ತು. ಅದರಂತೆ ಸಾಹಿತ್ಯ ಪರಿಷತ್ತು ದೃಷ್ಟಿಚೇತನರ ವಿಶೇಷ ಕವಿಗೋಷ್ಠಿಗೆ ಅವಕಾಶ ನೀಡಿರುವುದು ಸಾಕಷ್ಟು ದೃಷ್ಟಿಚೇತನ ಕವಿಗಳಿಗೆ ಸೂ ರ್ತಿ ತುಂಬಿದಂತಾಗಿದೆ.
ವಿಶೇಷ ಕವಿಗೋಷ್ಠಿಗೆ ಸಾಕಷ್ಟು ಮಂದಿ ದೃಷ್ಟಿಚೇತನ ಕವಿಗಳು ಭಾಗವ ಹಿಸುವ ನಿರೀಕ್ಷೆ ಇದೆ. ಆದರೆ, 10 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ವೇದಿಕೆ ಸಿಗದ ಕವಿಗಳಿಗೆ ನಿರಾಶೆಯಾಗಲಿದೆ ಎಂಬ ವಾದವೂ ಕೇಳಿ ಬರುತ್ತಿದೆ.
ಕವಿಗೋಷ್ಠಿಗೆ ಭಾಗವಹಿಸುವ ಪ್ರತಿಯೊಬ್ಬ ಕವಿಗೂ ಕವಿತೆ ಮಂಡಿಸಲು ತಲಾ 3 ನಿಮಿಷ ಕಾಲಾವಕಾಶ ನೀಡಲಾಗುತ್ತಿದೆ. ದೃಷ್ಟಿಚೇತನರ ವಿಶೇಷ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ.ಶಿವ ರಾಜ ಶಾಸ್ತ್ರೀ ಹೇರೂರ ವಹಿಸುವರು. ಸಾಹಿತಿ ಮುದಿಗೆರೆ ರಮೇಶ್ಕುಮಾರ್ ಆಶಯ ನುಡಿಯುವರು.
ದೃಷ್ಟಿಚೇತನ ಕವಿಗಳಾದ ಬಾಪುಖಾಡೆ, ಹೇಮಂತಕುಮಾರ್, ರಮಾ ಫಣಿಭಟ್ ಗೋಪಿ, ಶಿವಸ್ವಾಮಿ ಚೀನಕೇರ, ಡಾ.ಕೃಷ್ಣ ಹೊಂಬಳ, ಸಿ.ಹರೀಶ್, ಜಯನಂದಾ ಟೋಪುಗೋಳು, ಸೋಮಶೇಖರ್ ಬಳೆಗಾರ್, ಟಿ.ಎಂ.ತೋಟಯ್ಯ, ಡಾ.ಆನಂದ್ ಇಂದೂರಾ ಭಾಗವಹಿಸಲಿದ್ದಾರೆ.
ದೃಷ್ಟಿಚೇತನ ಕವಿಗಳು ಬರುವುದೇ ಅಪರೂಪವಾಗಿರುವ ಇಂಥ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನದಂಥ ದೊಡ್ಡ ವೇದಿಕೆಯಲಿ ದೃಷ್ಟಿಚೇತನ ಕವಿಗಳಿಗೂ ಅವಕಾಶ ಕಲ್ಪಿಸಿರುವುದು ಸಾರ್ವಜನಿಕ ವಲಯದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.