Advertisement

ಹಳ್ಳ ಹಿಡಿದ ಒಳಚರಂಡಿ ಯೋಜನೆ ಕಾಮಗಾರಿ : ಕೆಸರು ಗದ್ದೆಗಳಂತಾದ ರಸ್ತೆಗಳು

10:42 AM Oct 13, 2020 | sudhir |

ಹಳಿಯಾಳ: ಕೆಲವರು ಬಹುಕೋಟಿ ಒಳಚರಂಡಿ ಯೋಜನೆ ಪರವಾಗಿದ್ದು ಹೋರಾಟ ನಡೆಸಿದರು ಇನ್ನೂ ಕೆಲವರು ಭಾರಿ ವಿರೋಧ ಮಾಡಿ ತಣ್ಣಗಾದರು. ಆದರೆ ಯೋಜನೆ ಕಾಮಗಾರಿ ಮಾತ್ರ ಸಾರ್ವಜನಿಕರಿಗೆ ದಿನನಿತ್ಯ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿರುವುದು, ಉತ್ತಮ ರಸ್ತೆಗಳು ಹೊಂಡಮಯ, ಕೆಸರುಗದ್ದೆ ಆಗುತ್ತಿರುವುದುಕ್ಕೆ ಜನ ಪ್ರತಿದಿನ ಹಿಡಿಶಾಪ ಹಾಕುವಂತಾಗಿದೆ.

Advertisement

ಹಳಿಯಾಳಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಪೊಲೀಸ್‌ ರಕ್ಷಣೆಯಲ್ಲಿ ಆರಂಭವಾಗಿದ್ದ ಒಳಚರಂಡಿ ಯೋಜನೆ ಕಾಮಗಾರಿ ಹಲವಾರು ಬಡಾವಣೆ, ಗಲ್ಲಿಗಳ ಜನರ ನೆಮ್ಮದಿಯನ್ನೇ ಹಾಳುಗೆಡವಿದ್ದು ಪ್ರತಿನಿತ್ಯ ಹಿಡಿಶಾಪ ಹಾಕುವಂತಾಗಿದೆ. ಕಾಮಗಾರಿ
ಆರಂಭಕ್ಕೂ ಮುನ್ನ ಅಧಿಕಾರಿಗಳು ನೀಡಿದ ಭರವಸೆಗಳು ಸುಳ್ಳಾಗಿವೆ.

76.20 ಕೋಟಿ ರೂ. ಬೃಹತ್‌ ಮೊತ್ತದ ಒಳಚರಂಡಿ ಕಾಮಗಾರಿಯನ್ನು ಧಾರವಾಡದ ಸುಪ್ರದಾ ಕನ್‌ ಸ್ಟ್ರಕ್ಷನ್‌ ಕಂಪೆನಿಯವರು ನಡೆಸುತ್ತಿದ್ದು ಮನಸೋ ಇಚ್ಛೆ ಕಾಮಗಾರಿ ನಡೆಸಿ ರಸ್ತೆಗಳನ್ನು ಹೊಂಡ ಮತ್ತು ಕೆಸರಿನ ಆಗರವಾಗಿಸಿದ್ದಾರೆ. ಅಧಿಕಾರಿಗಳು ಜನರ ಸಮಸ್ಯೆಗೆ ಕ್ಯಾರೇ ಎನ್ನುವುದಿಲ್ಲ.

ಕಾಮಗಾರಿ ಪ್ರಾರಂಭವಾಗಿ 7 ತಿಂಗಳು ಕಳೆದಿವೆ. ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಿಂದ ಆರಂಭವಾದ ಕಾಮಗಾರಿ ಚವ್ಹಾಣ ಪ್ಲಾಟ್‌, ಬಸವನಗರ, ಸದಾಶಿವನಗರ, ತಾನಾಜಿಗಲ್ಲಿ, ಕೆಎಚ್‌ಬಿ ಕಾಲೋನಿ (ಆನೆಗುಂದಿ ಬಡಾವಣೆ), ಗುತ್ತಿಗೇರಿಗಲ್ಲಿ, ಗೌಳಿಗಲ್ಲಿ, ದುರ್ಗಾನಗರ, ಬಿಕೆ ಹಳ್ಳಿ ರಸ್ತೆ ಸೇರಿದಂತೆ ಇನ್ನು ಹಲವು ಕಡೆಗಳಲ್ಲಿ ನಡೆಸಲಾಗುತ್ತಿದ್ದು ಇಲ್ಲಿ ಒಳಚರಂಡಿ ಪೈಪ್‌ಲೈನ್‌ ಗಾಗಿ ಅಗೆದ ರಸ್ತೆಗಳೆಲ್ಲ ಕೆಸರಿನ ಕಚ್ಚಾ ರಸ್ತೆಗಳಾಗಿ, ಹೊಂಡಗಳ ಆಗರವಾಗಿವೆ.

ಪ್ರಸಕ್ತ ಮಳೆಗಾಲದಲ್ಲಂತೂ ಸಾಕಷ್ಟು ಜನ ಕಾಮಗಾರಿ ನಡೆಸುವ ಸ್ಥಳದಲ್ಲೇ ಬಿದ್ದು ಯಾತನಾಮಯ ದಿನ ಕಳೆಯುತ್ತಿದ್ದಾರೆ. ಕೆಲವೆಡೆ ಕಾಟಾಚಾರಕ್ಕೆ ಎಂಬಂತೆ ಜಲ್ಲಿಕಲ್ಲು(ಖಡಿ) ಗಳನ್ನು ಹಾಕಲಾಗಿದ್ದು ಪ್ರತಿನಿತ್ಯ ಈ ಭಾಗದ ಜನು ಮನೆಯಿಂದ ಹೊರಗೆ ಕಾಲಿಡಲು ಭಯಪಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next