Advertisement
ಈ ರಸ್ತೆಗೆ ಈಗಾಗಲೇ ಸಂತ ಅಲೋಶಿಯಸ್ ಕಾಲೇಜು ರಸ್ತೆ ಎಂಬುದಾಗಿ ಹೆಸರಿದ್ದು ಇದಕ್ಕೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂಬುದಾಗಿ ಮರು ನಾಮಕರಣ ಮಾಡಬಾರದು ಎಂದು ಸಂತ ಅಲೋಶಿಯಸ್ ಸಮೂಹ ಸಂಸ್ಥೆ ಆಕ್ಷೇಪ ವ್ಯಕ್ತ ಪಡಿಸಿರುವ ಹಿನ್ನೆಲೆಯಲ್ಲಿ ಆದೇಶಕ್ಕೆ ಸರಕಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದು ವಿವಾದವನ್ನು ಸೌಹಾರ್ದ ಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರ ವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ರಸ್ತೆಗೆ ಈದ್ಗಾ ಮಸೀದಿ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ದ.ಕ. ಮುಸ್ಲಿಂ ಸಂಘಟನೆಗಳ ಒಕ್ಕೂಟ ಹಾಗೂ ಬಾವುಟಗುಡ್ಡೆ ರಸ್ತೆ ಎಂದು ನಾಮಕರಣ ಮಾಡಬೇಕು ಎಂಬುದಾಗಿ ಸುಳ್ಯದ ಅಮರಸುಳ್ಯ ಸ್ವಾತಂತ್ರ್ಯ ಹೋರಾಟ ಆಚರಣಾ ಸಮಿತಿ ಕೂಡ ಆಗ್ರಹಿಸಿದೆ.
ವಿಜಯ ಬ್ಯಾಂಕ್ ವರ್ಕರ್ ಆರ್ಗನೈಜೇಶನ್, ಅಲೋಶಿಯಸ್ ಸಮೂಹ ಸಂಸ್ಥೆ , ದ.ಕ. ಮುಸ್ಲಿಂ ಸಂಘಟನೆಗಳ ಒಕ್ಕೂಟ, ಸುಳ್ಯದ ಅಮರಸುಳ್ಯ ಸ್ವಾತಂತ್ರ್ಯ ಹೋರಾಟ ಆಚರಣಾ ಸಮಿತಿ ತಮ್ಮ ಬೇಡಿಕೆಗಳಿಗೆ ಪೂರಕವಾಗಿ ವಾದಗಳನ್ನು ಹಾಗೂ ದಾಖಲೆಗಳನ್ನು ಮಂಡಿಸಿ ತಮ್ಮ ಬೇಡಿಕೆಯನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿತು. ಒಮ್ಮತದ ನಿರ್ಧಾರ ಮೂಡಿಬರದ ಹಿನ್ನೆಲೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲ ದಾಖಲೆಗಳನ್ನು ಹಾಗೂ ವಾಸ್ತವಿಕ ಅಂಶಗಳನ್ನು ಅಧ್ಯಯನ ಮಾಡಿ ಜಿಲ್ಲಾಡಳಿತಕ್ಕೆ ವರದಿ ನೀಡಲು ಸಮಿತಿಯೊಂದನ್ನು ರಚಿಸುವುದಾಗಿ ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್ ಅವರು ಪ್ರಕಟಿಸಿದರು. ಬೇಡಿಕೆಗಳ ಪರವಾಗಿ ಸಮರ್ಥನೆ
ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ಪರವಾಗಿ ಮಾತನಾಡಿದ ರೆಕ್ಟರ್ ಫಾ| ಡೈನೀಶಿಯಸ್ ವಾಝ್, ಕುಲಸಚಿವ ಪ್ರೊ | ನರಹರಿ, ಹಳೆ ವಿದ್ಯಾರ್ಥಿ ಸಂಘದ ಎನ್.ಜಿ. ಮೋಹನ್ ಅವರು, 1976ರಲ್ಲೇ ಈ ರಸ್ತೆಗೆ ಸಂತ ಅಲೋಶಿಯಸ್ ರಸ್ತೆ ಎಂದು ನಾಮಕರಣವಾಗಿದ್ದು ಇದಕ್ಕೆ ಸಂಬಂಧಪಟ್ಟಂತೆ ಪೂರಕ ದಾಖಲೆಗಳಿವೆ ಎಂದರು.
Related Articles
Advertisement
ದ.ಕ. ಮುಸ್ಲಿಂ ಸಂಘಟನೆಗಳ ಪರವಾಗಿ ಮಾತ ನಾಡಿದ ಮಾಜಿ ಮೇಯರ್ ಕೆ.ಅಶ್ರಫ್ ಅವರು, ಇಲ್ಲಿ ಬಹಳ ಹಿಂದಿನ ಕಾಲದಿಂದಲೂ ಈದ್ಗಾ ಮಸೀದಿ ಇದೆ. ಆದುದರಿಂದ ಇದಕ್ಕೆ ಈದ್ಗಾ ಮಸೀದಿ ರಸ್ತೆ ಎಂದು ನಾಮಕರಣ ಮಾಡಬೇಕು ಎಂಬುದಾಗಿ ನಾವು ಈಗಾಗಲೇ ಮನವಿ ನೀಡಿದ್ದೇವೆ ಎಂದರು.
ಸುಳ್ಯದ ಅಮರಸುಳ್ಯ ಸ್ವಾತಂತ್ರ್ಯ ಹೋರಾಟ ಆಚರಣಾ ಸಮಿತಿ ಪರವಾಗಿ ಮಾತನಾಡಿದ ಸಮಿತಿ ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಸಂಪಾಜೆ ಹಾಗೂ ಗೋಪಾಲ ಪೇರಾಜೆ ಅವರು, ಬ್ರಿಟಿಷರ ವಿರುದ್ದ 1837ರಲ್ಲಿ ಬಂಡಾಯವೆದ್ದು ಸ್ವಾತಂತ್ರ್ಯ ಹೋರಾಟ ಕಿಚ್ಚು ಹಚ್ಚಿದ, ಬ್ರಿಟಿಷರನ್ನು ಸೋಲಿಸಿದ ಸಂಕೇತವಾಗಿ ಹಾರಿಸಿದ ಬಾವುಟದ ನೆನಪಿಗಾಗಿ ಪ್ರಚಲಿತದಲ್ಲಿರುವ ಬಾವುಟಗುಡ್ಡೆ ಎಂಬ ಹೆಸರನ್ನು ಯಥಾವತ್ತಾಗಿ ಉಳಿಸಿ ಇದಕ್ಕೆ ಬಾವುಟಗುಡ್ಡೆ ರಸ್ತೆ ಎಂದು ನಾಮಕರಣ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಚಿವ ಬಿ. ರಮಾನಾಥ ರೈ ಅವರು ಈ ವಿವಾದಕ್ಕೆ ಸೌಹಾರ್ದ ಯತ ಪರಿಹಾರ ರೂಪಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಶಾಸಕ ಜೆ.ಆರ್. ಲೋಬೋ ಮಾತ ನಾಡಿ, ಸಂಘರ್ಷದ ವಾತಾವರಣ ನಿರ್ಮಾಣ ವಾಗದೆ ಸಮಸ್ಯೆ ಸೌಹಾರ್ದಯುತವಾಗಿ ಬಗೆ ಹರಿಯ ಬೇಕು ಎಂಬ ನಿಟ್ಟಿನಲ್ಲಿ ಇದಕ್ಕೆ ತಾತ್ಕಾಲಿಕ ತಡೆಯಾಜ್ಞೆ ತರಲಾಗಿದೆ. ಎಲ್ಲರೂ ಒಮ್ಮತದಿಂದ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು. ಮೇಯರ್ ಕವಿತಾ ಸನಿಲ್, ಪಾಲಿಕೆ ಆಯುಕ್ತ ಮಹಮ್ಮದ್ ನಜೀರ್ ಉಪಸ್ಥಿತರಿದ್ದರು.
ಪಾಲಿಕೆ ಎಚ್ಚರ ವಹಿಸಬೇಕುಮುಂದಿನ ದಿನಗಳಲ್ಲಿ ಯಾವುದೇ ರಸ್ತೆಗೆ ನಾಮಕರಣಗಳ ವಿಚಾರ ಬಂದಾಗ ಮಹಾ ನಗರ ಪಾಲಿಕೆ ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವ ಹಿಸಬೇಕು. ಇಲ್ಲದಿದ್ದಲ್ಲಿ ಇದರಿಂದ ಬಹಳಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇಂತಹ ಉದಾ ಹರಣೆಗಳು ಈಗಾಗಲೇ ಸಾಕಷ್ಟಿವೆ. ರಸ್ತೆಗೆ ನಾಮ ಕರಣವನ್ನು ಯಾರೂ ಕೂಡ ಒಂದು ಹಕ್ಕು ಎಂದು ಭಾವಿಸಬಾರದು. ಇದು ಸರಕಾರ ನೀಡುವ ಒಂದು ಅವಕಾಶ ಮಾತ್ರ ಎಂದು ಸಚಿವ ರಮಾನಾಥ ರೈ ಅವರು ಹೇಳಿದರು. ಪರಿಶೀಲನ ಸಮಿತಿ
ಮಂಗಳೂರು ವಿಶ್ವವಿದ್ಯಾನಿಲಯದ ಕುಲ ಸಚಿವರು, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ದ.ಕ. ಅಪರ ಜಿಲ್ಲಾಧಿಕಾರಿಯವರು ಹಾಗೂ ಮಂಗಳೂರು ವಿವಿ ಇತಿಹಾಸ ವಿಭಾಗದ ಪ್ರೊಫೆಸರ್ ಅವರು ಈ ಸಮಿತಿಯಲ್ಲಿರುತ್ತಾರೆ. ಸಮಿತಿ ಎಲ್ಲ ಅಂಶಗಳನ್ನು ಅಧ್ಯಯನ ನಡೆಸಿ ಮುಂದಿನ ಸಭೆಗೆ ಮೊದಲು ವರದಿ ಮಂಡಿಸಲಿದೆ. ಇದರ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ತನ್ನ ನಿರ್ಧಾರ ವನ್ನು ಪ್ರಕಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ| ಕೆ.ಜೆ. ಜಗದೀಶ್ ಅವರು ತಿಳಿಸಿದರು.