Advertisement
ಪಡುಬಿದ್ರಿ ಜಂಕ್ಷನ್‌ನಲ್ಲಿ ಮೂರು ಕಡೆಗಳಿಂದ ವಾಹನಗಳು ನುಗ್ಗಿ ಬರುತ್ತವೆ. ಈ ಸಂದರ್ಭದಲ್ಲಿ ರಸ್ತೆ ದಾಟುವುದು ಕೂಡಾ ದುಸ್ತರವಾಗುತ್ತಿದೆ. ವಾಹನಗಳನ್ನು ಎಲ್ಲಿ ಚಲಾಯಿಸಬೇಕು ಎನ್ನುವ ಅಯೋಮಯ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಯಾವುದೇ ರೀತಿಯ ಮಾರ್ಗಸೂಚಿಗಳು, ಚಿಹ್ನೆಗಳು ಇಲ್ಲದಿರುವುದು.
45 ಮೀಟರ್‌ಗಳ ಹೆದ್ದಾರಿ ವ್ಯಾಪ್ತಿಯನ್ನಷ್ಟೇ ಬಳಸಿಕೊಂಡು ನಿರ್ಮಾಣವಾಗಿರುವ ಹೆದ್ದಾರಿಯಲ್ಲೂ ಪಾದಚಾರಿಗಳಿಗೆ ನಡೆದಾಡಲು ಸರಿಯಾದ ಫುಟ್ ಪಾತ್ ಕೂಡ ಇಲ್ಲ. ಇರುವ ಫುಟ್‌ಪಾತ್ ಮೇಲೆ ಅಗಾಧ ಪ್ರಮಾಣದಲ್ಲಿ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇದರಿಂದಾಗಿ ಪಾದಚಾರಿಗಳು ರಸ್ತೆಯ ಮೇಲೆಯೇ ನಡೆದುಕೊಂಡು ಹೋಗಬೇಕಾಗಿದೆ. ಇದರಿಂದಾಗಿ ಹಿಂದೆ ಮುಂದಿನಿಂದ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತವೆ. ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರು ಮತ್ತು ಮೃತಪಟ್ಟವರು ಎಲ್ಲರೂ ಪಾದಚಾರಿಗಳೇ ಆಗಿದ್ದಾರೆ.
Related Articles
ಪಡುಬಿದ್ರಿಯಲ್ಲಿ ನಾನಾ ಕಾರ್ಯಕ್ರಮಗಳ, ಜಾತ್ರೆಯ ಫ್ಲೆಕ್ಸ್‌ಗಳನ್ನು ಹೆದ್ದಾರಿಯ ಉದ್ದಕ್ಕೂ ಹಾಕಲಾಗುತ್ತದೆ. ಅನೇಕ ಸಂಘ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳ ಫ್ಲೆಕ್ಸ್ ಗಳೂ ಇವೆ. ಈ ರೀತಿ ಫ್ಲೆಕ್ಸ್ ಹಾಕುವವರಲ್ಲಿ ಕೆಲವರಷ್ಟೇ ಪಂಚಾಯತ್‌ನಿಂದ ಅನುಮತಿ ಪಡೆಯುತ್ತಾರೆ ಮತ್ತು ನಿಗದಿತ ಅವಧಿಯೊಳಗೆ ಅವುಗಳನ್ನು ತೆರವುಗೊಳಿಸುತ್ತಾರೆ. ಫ್ಲೆಕ್ಸ್ ಹಾಕುವ ಮೊದಲು ನಿಗದಿತ ಮೊತ್ತ ಪಾವತಿಸಿ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಈ ನಿಯಮ ಪಾಲನೆ ಆಗದಿರುವುದರಿಂದ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗುತ್ತಿದೆ.
Advertisement
ಈ ಕುರಿತಾಗಿ ಪಿಡಿಒ ಮಂಜುನಾಥ ಶೆಟ್ಟಿ, ಈ ಫ್ಲೆಕ್ಸ್ ವಿಚಾರದಲ್ಲಿ ಕೊಂಚ ಎಡವಿದ್ದೇವೆ. ಪ್ರಭಾವ ಬಳಸಿ ಇದನ್ನು ಹಾಕಿಸಿಕೊಳ್ಳುವವರೂ ಇದ್ದಾರೆ. ಉತ್ಸವಗಳ ಹೆಸರಲ್ಲೂ ಕೆಲವೊಂದು ಬಾರಿ ಇವು ಪ್ರತ್ಯಕ್ಷಗೊಳ್ಳುತ್ತವೆ. ಹಿಂದೊಮ್ಮೆ ಫ್ಲೆಕ್ಸ್‌ನಲ್ಲಿ ಪರವಾನಿಗೆ ಸಂಖ್ಯೆಯನ್ನು ನಮೂದಿಸಲೂ ಸೂಚಿಸಿದ್ದೆವು. ಈಗ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಪ್ರಕಟನೆಯ ಮೂಲಕ ಜನರಿಗೆ ಅರಿವು ಮೂಡಿಸಿ ಪರವಾನಿಗೆ ಪಡೆದೇ ಅಳವಡಿಸುವಂತೆ ಜನಜಾಗೃತಿ ಮೂಡಿಸಲಾಗುವುದು ಎಂದಿದ್ದಾರೆ.