Advertisement

Mangaluru: 10ಕ್ಕೂ ಅಧಿಕ ಅಪಾಯಕಾರಿ ಕ್ರಾಸಿಂಗ್‌

04:16 PM Jan 08, 2025 | Team Udayavani |

ಮಹಾನಗರ: ಮಂಗಳೂರು ನಗರದಿಂದ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮುಖ್ಯರಸ್ತೆಯ ಯೆಯ್ನಾಡಿಯಿಂದ ಪದವಿನಂಗಡಿವರೆಗಿನ ರಸ್ತೆ ದಿನೇ ದಿನೇ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದು ಸುರಕ್ಷಿತ ಸಂಚಾರ ದೊಡ್ಡ ಸವಾಲಾಗಿದೆ.

Advertisement

ಸರಿಸುಮಾರು 2.5 ಕಿ.ಮೀ. ಉದ್ದದ ಈ ರಸ್ತೆ ದ್ವಿಪಥವಾಗಿದ್ದರೂ ಪದೇ ಪದೇ ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗುತ್ತಿದೆ. ವಾಹನ ಚಾಲಕರಲ್ಲಿ ಆತಂಕ ಮೂಡಿಸಿದೆ. ಯೆಯ್ನಾಡಿಯಿಂದ ಪದವಿನಂಗಡಿವರೆಗೆ 10ಕ್ಕೂ ಅಧಿಕ ಕ್ರಾಸಿಂಗ್‌ಗಳಿವೆ. ಎಲ್ಲವೂ ಕೂಡ ದೊಡ್ಡ ಮತ್ತು ಅಪಾಯಕಾರಿ ಜಂಕ್ಷನ್‌ಗಳಾಗಿ ಮಾರ್ಪಟ್ಟಿವೆ. ಒಂದಲ್ಲಾ ಒಂದು ಕ್ರಾಸಿಂಗ್‌ನಲ್ಲಿ ಪ್ರತಿದಿನವೆಂಬಂತೆ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ. ಒಂದು ವರ್ಷದಲ್ಲಿ ಇಲ್ಲಿನ ಕ್ರಾಸಿಂಗ್‌ಗಳಲ್ಲಿ 30ಕ್ಕೂ ಅಧಿಕ ಅಪಘಾತಗಳು ಸಂಭವಿಸಿ 5ಕ್ಕೂ ಅಧಿಕ ಮಂದಿ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ದ್ವಿಚಕ್ರ ವಾಹನ ಸವಾರರೇ ಅಧಿಕ.

ಕಾರಣವೇನು?
ಇಲ್ಲಿನ ಕ್ರಾಸಿಂಗ್‌ಗಳು ಅಪಾಯಕಾರಿಯಾಗಲು ಅತೀ ವೇಗ, ನಿಯಮ ಪಾಲನೆ ನಿರ್ಲಕ್ಷ್ಯ, ಇಲಾಖಾಧಿಕಾರಿಗಳು ಯಾವುದೇ ಸುರಕ್ಷತಾ ಸೂಚನೆ ಅಳವಡಿಸದಿರುವುದು, ಇತರೆ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳ ದಿರುವುದು ಮುಖ್ಯ ಕಾರಣಗಳು. ರಸ್ತೆ ದ್ವಿಪಥವಾಗಿರುವುದರಿಂದ ಮುಖ್ಯ ರಸ್ತೆ ಯಲ್ಲಿ ಬರುವ ವಾಹನಗಳು ಸಹಜವಾ ಗಿಯೇ ವೇಗವಾಗಿ ಧಾವಿಸುತ್ತವೆ. ಒಳ ರಸ್ತೆಗಳಿಂದ ಬರುವ ವಾಹನಗಳು ಕೂಡ ವೇಗ, ನಿರ್ಲಕ್ಷ್ಯದಿಂದ ಮುಖ್ಯರಸ್ತೆ ಸೇರು ವುದು ಹಲವಾರು ಅಪಘಾತಗಳಿಗೆ ಕಾರಣವಾಗಿದೆ.

ರಸ್ತೆ ಬದಿ ವಾಹನ ಪಾರ್ಕಿಂಗ್‌
ಹಲವು ಜಂಕ್ಷನ್‌ಗಳ ಬಳಿ ರಸ್ತೆಯ ಅಂಚಿನಲ್ಲಿ, ಇನ್ನು ಕೆಲವೆಡೆ ರಸ್ತೆಯ ಲ್ಲಿಯೇ ವಾಹನಗಳನ್ನು ಪಾರ್ಕಿಂಗ್‌ ಮಾಡಲಾಗುತ್ತಿದೆ. ರಾತ್ರಿ ವೇಳೆ ಟಿಪ್ಪರ್‌ ಲಾರಿಗಳನ್ನು ಕೂಡ ರಸ್ತೆಯ ಅಂಚಿನಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ. ಇದರಿಂದಾಗಿಯೂ ಅಪಘಾತಗಳು ಸಂಭವಿಸುತ್ತಿವೆ. ಇತ್ತೀಚೆಗೆ ರಾತ್ರಿ ವೇಳೆ ಟಿಪ್ಪರ್‌ ಲಾರಿ ಢಿಕ್ಕಿ ಯಾಗಿ ಬೈಕ್‌ ಸವಾರರು ಮೃತಪಟ್ಟಿದ್ದರು.

Advertisement

ಪೊಲೀಸ್‌ ಕಣ್ಗಾವಲು ಇಲ್ಲ
ಮೂರು ಕ್ರಾಸಿಂಗ್‌ಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದೆ. ಆದರೆ ಈ ರಸ್ತೆಯಲ್ಲಿ ಪೊಲೀಸ್‌ ನಿಗಾ ಇಲ್ಲ. ಸಂಜೆ ವೇಳೆ ಅತಿಯಾದ ವಾಹನ ದಟ್ಟಣೆ ಇದ್ದರೂ ಪೊಲೀಸರು ನಿರ್ವಹಣೆ ಮಾಡುವುದಿಲ್ಲ ಎಂಬುದು ಸ್ಥಳೀಯ ಸಾರ್ವಜನಿಕರ ದೂರು.

ಹಂಪ್ಸ್‌ ಬೇಡಿಕೆ
ಮುಖ್ಯರಸ್ತೆ ವಿಮಾನ ನಿಲ್ದಾಣ ಸಂಪರ್ಕದ ರಸ್ತೆಯಾಗಿರುವುದರಿಂದ ಇಲ್ಲಿ ಹಂಪ್ಸ್‌ಗಳನ್ನು ಹಾಕಲು ಪೊಲೀಸರು ಒಪ್ಪುತ್ತಿಲ್ಲ. ಆದರೆ ಒಳರಸ್ತೆಗಳಿಗಾದರೂ ಹಂಪ್ಸ್‌ ಹಾಕಬಹುದು. ಇದನ್ನು ಕೂಡ ಮಾಡಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ಜಂಕ್ಷನ್‌ ಇದೆ ಎಂಬುದೇ ತಿಳಿಯುವುದಿಲ್ಲ
ದೂರದಿಂದ ಬರುವ ವಾಹನ ಚಾಲಕರಿಗೆ ಯೆಯ್ನಾಡಿಯಿಂದ ಪದವಿನಂಗಡಿವರೆಗೆ ಇರುವ ಕ್ರಾಸಿಂಗ್‌ಗಳ ಸುಳಿವು ಕೂಡ ಸಿಗುವುದಿಲ್ಲ. ಸೂಕ್ತ ಸೂಚನ ಫ‌ಲಕಗಳನ್ನು ಅಳವಡಿಸಿಲ್ಲ. ಹಂಪ್ಸ್‌ ಕೂಡ ಇಲ್ಲ. ಹಾಗಾಗಿ ಅವರು ಅತೀ ವೇಗದಿಂದ ಮುನ್ನುಗ್ಗುತ್ತವೆ. ಯಾವುದಾದರೊಂದು ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸುತ್ತದೆ. ರಸ್ತೆ ದಾಟುವ ಪಾದಚಾರಿಗಳಿಗೂ ಅಪಾಯ ಉಂಟಾಗುತ್ತಿದೆ. ಯು-ಟರ್ನ್ ಮಾಡುವುದು ಕೂಡ ಭಾರೀ ಅಪಾಯಕರ ಎನ್ನುತ್ತಾರೆ ಯೆಯ್ನಾಡಿ ಕ್ರಾಸ್‌ನ ರಿಕ್ಷಾ ಚಾಲಕ ಸಂತೋಷ್‌ ಅವರು.

ಅಪಾಯಕಾರಿ ಜಂಕ್ಷನ್‌ಗಳು
– ಯೆಯ್ನಾಡಿ ಜಂಕ್ಷನ್‌(ಶ್ರೀ ಜಯರಾಮ ಭಜನ ಮಂದಿರದ ಬಳಿ): ಇದು ತೀರಾ ಅಪಾಯಕಾರಿಯಾಗಿದೆ. ಇಲ್ಲಿ ಶಕ್ತಿನಗರ, ಬಾರೆಬೈಲು ಸಂಪರ್ಕ ರಸ್ತೆಗಳು ಕೂಡ ಸಂಧಿಸುತ್ತವೆ. ಯಾವುದೇ ಸೂಚನ ಫ‌ಲಕಗಳು ಇಲ್ಲಿಲ್ಲ. ಪದೇ ಪದೇ ಅಪಘಾತಗಳು ಸಂಭವಿಸುವ ತಾಣವಿದು.
– ಹರಿಪದವು ಕ್ರಾಸ್‌: ಶಾಲೆ, ವಾಣಿಜ್ಯ ಸಂಕೀರ್ಣಗಳು ಹೆಚ್ಚಿನ ಸಂಖ್ಯೆಯ ಲ್ಲಿವೆ. ಸಿಸಿ ಕೆಮರಾ ಕೂಡ ಇದೆ. ಆದರೆ ಸೂಚನಾ ಫ‌ಲಕ, ಹಂಪ್ಸ್‌ ಇಲ್ಲ. ಇತ್ತೀ ಚೆಗೆ ಇಲ್ಲಿ ಟಿಪ್ಪರ್‌ ಲಾರಿ ಢಿಕ್ಕಿ ಹೊಡೆದು ಬೈಕ್‌ ಸವಾರರು ಮೃತಪಟ್ಟಿದ್ದರು.
– ಮೇರಿಹಿಲ್‌ ಜಂಕ್ಷನ್‌: ಮತ್ತೂಂದು ಅಪಾಯಕಾರಿ ಜಂಕ್ಷನ್‌. ನಾಲ್ಕು ಕಡೆಗಳಿಂದ ವಾಹನಗಳು ಬಂದು ಸೇರುವ ಜಾಗವಿದು. ಬಸ್‌ಗಳು ಬಸ್‌ ನಿಲ್ದಾಣದಲ್ಲಿ ನಿಲುಗಡೆಯಾಗದೆ ಜಂಕ್ಷನ್‌ನಲ್ಲೇ ನಿಲುಗಡೆಯಾಗುತ್ತಿವೆ.
– ಪೆರ್ಲಗುರಿ ಜಂಕ್ಷನ್‌(ಮುಗ್ರೋಡಿ): ಅವೈಜ್ಞಾನಿಕ ಕ್ರಾಸಿಂಗ್‌ ಇದು. ಡಿವೈಡರ್‌ ನಡುವೆ ಮೂರು ಕಡೆ ಕ್ರಾಸಿಂಗ್‌ ನೀಡಲಾಗಿತ್ತು. ಒಂದು ಶಾಶ್ವತ ಕ್ರಾಸಿಂಗ್‌, ಉಳಿದೆರಡು ತಾತ್ಕಾಲಿಕ. ಬ್ಯಾರಿಕೇಡ್‌ ಹಾಕಿ ಒಮ್ಮೊಮ್ಮೆ ಒಂದು ಕ್ರಾಸಿಂಗ್‌ ಮುಚ್ಚಲಾಗುತ್ತದೆ. ಹಾಗಾಗಿ ಗೊಂದಲವುಂಟಾಗುತ್ತದೆ. ಇಲ್ಲಿಯೂ ಅತೀವೇಗ, ರಸ್ತೆ ಪಕ್ಕದಲ್ಲಿಯೇ ವಾಹನಗಳ ಪಾರ್ಕಿಂಗ್‌ನಿಂದಾಗಿ ಹೆಚ್ಚು ಅಪಾಯ.
– ಗುರುನಗರ ಜಂಕ್ಷನ್‌, ಲ್ಯಾಂಡ್‌ ಲಿಂಕ್ಸ್‌(ಶ್ರೀ ರವಿಶಂಕರ ಗುರೂಜಿ ಶಿಕ್ಷಣ ಸಂಸ್ಥೆ) ಕ್ರಾಸಿಂಗ್‌ಗಳು ಕೂಡ ತೀರಾ ಅಪಾಯಕಾರಿಯಾಗಿವೆ.

ಸೂಚನಫ‌ಲಕ ಅಳವಡಿಸಲು ಕ್ರಮ
ಏರ್‌ಪೋರ್ಟ್‌ ರಸ್ತೆಯಾಗಿರುವುದರಿಂದ ವಿಐಪಿ ಓಡಾಟ ಹೆಚ್ಚಿರುವುದರಿಂದ ಹಂಪ್ಸ್‌ ರಚಿಸಲು ಅವಕಾಶವಿಲ್ಲ. ಕೆಲವೆಡೆ ಬ್ಯಾರಿಕೇಡ್‌ ಅಳವಡಿಸಿದ್ದೇವೆ. ಮೀಡಿಯನ್ಸ್‌(ಕ್ರಾಸಿಂಗ್‌)ಗಳನ್ನು ಮುಚ್ಚಿದರೆ ಸ್ಥಳೀಯ ವಾಹನಗಳ ಓಡಾಟಕ್ಕೆ ಅಡ್ಡಿಯಾಗುತ್ತದೆ. ಯು-ಟರ್ನ್ನಿಂದ ಟ್ರಾಫಿಕ್‌ ಜಾಮ್‌ ಕೂಡ ಉಂಟಾಗುತ್ತದೆ. ಕೆಲವರು ಬ್ಯಾರಿಕೇಡ್‌ಗಳನ್ನು ಇಟ್ಟ ಸ್ಥಳದಿಂದ ಬೇರೆಡೆ ಸ್ಥಳಾಂತರಿಸುತ್ತಿರುವುದು ಕೂಡ ಗಮನಕ್ಕೆ ಬಂದಿದೆ. ಸೋಲಾರ್‌ ಬ್ಲಿಂಕರ್, ರಿಫ್ಲೆಕ್ಟ್ ಸ್ಟಡ್ಸ್‌, ಸೈನ್‌ಬೋರ್ಡ್‌ಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆಯವರಿಗೆ ಸೂಚಿಸಲಾಗಿದೆ.
-ನಜ್ಮಾ ಫಾರೂಕಿ ಎಸಿಪಿ, ಸಂಚಾರ ವಿಭಾಗ ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next