Advertisement

ನಕಾಶೆ ರಸ್ತೆಗೆ 60ಕ್ಕಿಂತ ಹೆಚ್ಚು ಅಡಕೆ ಗಿಡಗಳು ಬಲಿ

03:40 PM Jul 17, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿ ಯಾವುದೇ ನೋಟಿಸ್‌ ನೀಡದೆ ನಕಾಶೆ ರಸ್ತೆಗಾಗಿ ಅರವತ್ತಕ್ಕೂ ಹೆಚ್ಚು ಅಡಕೆ ಗಿಡಗಳನ್ನು ಅಧಿಕಾರಿಗಳು ಜೆಸಿಬಿ ಮೂಲಕ ಕಿತ್ತು ಹಾಕಲಾಗಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ರೈತ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

Advertisement

ಸರ್ಕಾರಿ ಹಳ್ಳವನ್ನು ಮುಚ್ಚಿ ನಕಾಶೆ ರಸ್ತೆ ನಿರ್ಮಿಸುವುದರಿಂದ ಎಂಎಸ್‌ಜಿಪಿ ಘಟಕದ ತ್ಯಾಜ್ಯ ನೀರು ಹಾಗೂ ಮಳೆ ನೀರಿನ ಹರಿವಿಗೆ ಅಡ್ಡಿಯಾಗಲಿದೆ. ಆ ನೀರೆಲ್ಲ ರೈತರ ಜಮೀನುಗಳಲ್ಲಿ ಸಂಗ್ರಹವಾಗಲಿದೆ ಎಂದು ನಾರಾಯಣಸ್ವಾಮಿ ಸೇರಿ ಹಲವು ರೈತರು ದೂರಿದ್ದಾರೆ.

ತೋಟದಲ್ಲಿ ವಾಸಿಸುವ ಒಂಭತ್ತಕ್ಕೂ ಹೆಚ್ಚು ಕುಟುಂಬಗಳ ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲ. ಈಗಿರುವ ಅನುಮತಿ ರಸ್ತೆಯಲ್ಲಿ ಸಂಚರಿಸಲು ಕೆಲ ಭೂಮಾಲೀಕರು ಅಡ್ಡಿ ಪಡಿಸುತ್ತಿದ್ದು, ನಮಗೆಶಾಶ್ವತ ಪರಿಹಾರವಾಗಿ ನಕಾಶೆ ರಸ್ತೆ ನಿರ್ಮಿಸಿಕೊಡಬೇಕು ಎಂಬುದು ಗೋವಿಂದರಾಜು ಸೇರಿ ಹಲವು ರೈತರ ಆಗ್ರಹವಾಗಿದೆ.

ರೈತರಿಗೆ ಅನುಕೂಲ: “ಮನೆಗೆ ಹೋಗಲು ದಾರಿ ಇಲ್ಲ. ಕುಡಿಯುವ ನೀರು ತರಬೇಕಾದರೂ ತಲೆ ಮೇಲೆ ಹೊತ್ತು ತರಬೇಕು. ನಕಾಶೆ ರಸ್ತೆ ತೆರವು ಮಾಡಿಕೊಟ್ಟರೆ ಎಲ್ಲ ರೈತರಿಗೆ ಅನುಕೂಲ ಆಗಲಿದೆ ಎಂದು ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದ್ದೆವು.

2007ರಲ್ಲಿ ಅನುಮತಿ ರಸ್ತೆಗೆ ಒಪ್ಪಿಗೆ ಸೂಚಿಸಿದ್ದರಿಂದ ಕೆಲವರಿಗೆ ಅನುಕೂಲ ಆಗಿತ್ತು. ಆದರೆ, ಕಾಲಾನಂತರ ದಾರಿಗೆ ಅಡ್ಡ ಹಾಕುತ್ತಿದ್ದರು. ಹೀಗಾಗಿ, ಯಾರಿಗೂ ತೊಂದರೆ ಆಗದಂತೆ ಶಾಶ್ವತವಾಗಿ ರಸ್ತೆ ನಿರ್ಮಿಸಿ ಕೊಡಿ ಎಂದು ಮನವಿ ಮಾಡಿದ್ದೇವೆ ಎಂದು ಗ್ರಾಮದ ನವೀನ್‌ ಕುಮಾರ್‌ ಹೇಳಿದರು.

Advertisement

ನೋಟಿಸ್‌ ನೀಡದೆ ಏಕಾಏಕಿ ತೆರವು: ನಕಾಶೆ ರಸ್ತೆಗೆ ಜಾಗ ಬಿಟ್ಟು ಕೊಡಲು ನಮ್ಮ ವಿರೋಧವಿಲ್ಲ. ಆದರೆ, ಯಾವುದೇ ನೋಟಿಸ್‌ ನೀಡದೆ ಏಕಾಏಕಿ ತೆರವು ಮಾಡಿದ್ದಾರೆ. ಅಡಕೆ ಗಿಡ ನಾಶ ಮಾಡಿದ್ದಾರೆ. ಕಂದಾಯ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು. ಮಳೆ ಹಾಗೂ ಹಳ್ಳದ ನೀರು ಜಮೀನುಗಳಿಗೆ ನುಗ್ಗದಂತೆ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಜಮೀನು ಮಾಲೀಕ ನಾರಾಯಣಸ್ವಾಮಿ ಹೇಳಿದರು.

ಪರಿಹಾರ ನೀಡಲು ಕ್ರಮ: ನಕಾಶೆ ರಸ್ತೆಗಾಗಿ ಸಲ್ಲಿಸಿದ್ದ ಅರ್ಜಿ ಆಧರಿಸಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಈ ಹಿಂದೆ ಪರಸ್ಪರ ಒಪ್ಪಿ ಅನುಮತಿ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಆದರೆ, ಪಹಣಿಯಲ್ಲಿ ಅದು ನಮೂದಾಗಿಲ್ಲ. ಗೋವಿಂದರಾಜು ಸೇರಿ ಹಲವು ರೈತರು ನಕಾಶೆ ರಸ್ತೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಸರ್ವೆ ಮಾಡಿ, ರೈತರ ಒಪ್ಪಿಗೆ ಮೇರೆಗೆ ನಿರ್ಮಿಸಲಾಗುತ್ತಿದೆ. ಅಡಕೆ ಮರಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು. ತಹಶೀಲ್ದಾರ್‌ ನೇತೃತ್ವದಲ್ಲಿ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ದೊಡ್ಡಬೆಳವಂಗಲ ಉಪತಹಶೀಲ್ದಾರ್‌ ರಾಜೇಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next