Advertisement

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

09:22 PM Jan 05, 2025 | Esha Prasanna |

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಇರುತ್ತದೆ. ಈಗಿರುವುದು ಹಂಗಾಮಿ ಅಧ್ಯಕ್ಷರು. ಇದು ಅಡ್ಹಾಕ್‌ ಮಾತ್ರ ಸಮಿತಿ, ಮುಂದೆ ಶಾಶ್ವತ ಚುನಾಯಿತ ಅಧ್ಯಕ್ಷರು ಬರುತ್ತಾರೆ. ಅದು ಯಾರು ಆಗುತ್ತಾರೆ ಗೊತ್ತಿಲ್ಲ. ಆಯ್ಕೆಗೆ ರಾಜ್ಯ ಘಟಕವು ಹೈಕಮಾಂಡ್‌ಗೆ ಅಧಿಕಾರ ಕೊಡುತ್ತದೆ. ರಾಷ್ಟ್ರೀಯ ಅಧ್ಯಕ್ಷರು ರಾಜ್ಯಾಧ್ಯಕ್ಷರ ಘೋಷಿಸುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ವಿವಾದವಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿರುವುದರಲ್ಲಿ ತಪ್ಪೇನಿಲ್ಲ. ಪಕ್ಷದ ನಿಯಮವನ್ನು ಅವರು ಹೇಳಿದ್ದಾರೆ. ಆದರೆ, ಚುನಾವಣೆ ಆಗುವುದಿಲ್ಲ. ಸಹಮತ ಮಾಡಿಕೊಂಡು ರಾಜ್ಯಾಧ್ಯಕ್ಷ ಆಯ್ಕೆ ಮಾಡುವ ಪದ್ಧತಿ ಇದೆ. ಏಕೆಂದರೆ ಚುನಾವಣಾ ಪ್ರಕ್ರಿಯೆಗೆ ಕೆಲವು ಷರತ್ತುಗಳಿವೆ ಎಂದರು.

ಸಾಮೂಹಿಕ ನಾಯಕತ್ವ ಹೇಗಿದೆ ಗೊತ್ತಾಗುತ್ತದೆ:
ವಿಜಯೇಂದ್ರ ತಮ್ಮ ನೇತೃತ್ವದಲ್ಲಿ ಎಲ್ಲೆಡೆ ಪ್ರತಿಭಟನೆ ಎಂದು ಹೇಳಿಕೊಂಡಿದ್ದರು. ಪಾಪಾ ಅವರಿಗೆ ಏನು ಕೆಲಸ ಇತ್ತು ಗೊತ್ತಿಲ್ಲ. ಆದರೆ, ಒಂದು ದಿನ ಮೂರು ಕಡೆ ಹೋರಾಟ ಆಗಿದೆ. ಒಂದು ಕಡೆ ವಕ್ಫ್, ಮತ್ತೊಂದೆಡೆ ಪ್ರಿಯಾಂಕ್‌ ಖರ್ಗೆ ವಿರುದ್ಧ ಹೋರಾಟ, ಇನ್ನೊಂದು ಬಾಣಂತಿಯರ ಸಾವು ಕುರಿತು ಹೋರಾಟವಾಗಿದೆ. ಆ ಪೈಕಿ ವಿಜಯೇಂದ್ರ ಬಾಣಂತಿಯರ ಸಾವಿನ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ನಮ್ಮಲ್ಲಿ ಸಾಮೂಹಿಕ ನಾಯಕತ್ವ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಅವರು ಅಲ್ಲಿ ಮಾಡಿದ್ದಾರೆ, ನಾವು ಇಲ್ಲಿ ಮಾಡಿದ್ದೇವೆ ಅಷ್ಟೇ ಎಂದರು.

ವಿಪಕ್ಷ ನಾಯಕರ ಮೇಲೆ ನಮ್ಮ ಆರೋಪವಿಲ್ಲ: 

ವಿಪಕ್ಷ ನಾಯಕ ಆರ್‌.ಅಶೋಕ್‌ ಬಗ್ಗೆ ಯಾವುದೇ ರೀತಿಯಲ್ಲೂ ನಮ್ಮ ಆರೋಪಗಳಿಲ್ಲ. ಅವರು ಎಲ್ಲರನ್ನೂ ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ಹಿರಿಯ ಶಾಸಕರ ಸಲಹೆ, ವಿಚಾರಗಳನ್ನು ಕೇಳಿದ್ದರು. ಸದನದಲ್ಲಿ ಕೇವಲ ಧರಣಿ ಮಾಡಬಾರದು, ಚರ್ಚೆ ಮಾಡಬೇಕು ಎಂದು ಹೇಳಿದ್ದೆವು. ಅದರಂತೆ ಅವರು ನಡೆದುಕೊಂಡು ಎಲ್ಲರಿಗೂ ಅವಕಾಶ ಕೊಟ್ಟಿದ್ದಾರೆ ಎಂದರು.

ಗಂಡಸರು ಏನು ಪಾಪ ಮಾಡಿದ್ದಾರೆ?

ಹೆಣ್ಣು ಮಕ್ಕಳಿಗೆ ಬಸ್‌ ಉಚಿತ ಕೊಟ್ಟು, ಗಂಡಸರಿಗೆ ಹೆಚ್ಚಿನ ದುಡ್ಡು ಹಾಕಿದ್ದಾರೆ. ಗಂಡಸರು ಏನು ಪಾಪ ಮಾಡಿದ್ದಾರೆ? ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬಾರದು. ಇದು ಹೆಣ್ಣು ಮಕ್ಕಳಿಗೂ ಅನ್ಯಾಯವಾಗುತ್ತದೆ. ಮಕ್ಕಳು, ಯಜಮಾನರಿಗೂ ಅನ್ಯಾಯವಾಗುತ್ತದೆ. ಹೆಣ್ಣು ಮಕ್ಕಳು ಸಹ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next