ಕುಣಿಗಲ್: ಪ.ಜಾತಿ, ಪಂಗಡದ ಸಮುದಾಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅನುದಾನ ನೀಡುವಲ್ಲಿ ಬಿಜೆಪಿ ಸರ್ಕಾರ ತಾರತಮ್ಯಮಾಡುತ್ತಿದ್ದು, ಈ ಸಂಬಂಧ ಸದನದಲ್ಲಿ ಕಾಂಗ್ರೆಸ್‌ಪ್ರಶ್ನೆ ಮಾಡಲಿದೆ ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ತಿಳಿಸಿದರು.
ಪಟ್ಟಣದ ಸಿದ್ದಾರ್ಥ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡಿದ್ದ ಎಸ್‌ಸಿಪಿ, ಟಿಎಸ್‌ಪಿ ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದ ಅವಧಿಯಲ್ಲಿ ಸರ್ಕಾರ ವಾರ್ಷಿಕ ಅನುದಾನದಲ್ಲಿ ಶೇ 24.1 ಮೊತ್ತವನ್ನು (ಎಸ್‌ಸಿಪಿ, ಟಿಎಸ್‌ಸಿ) ಪರಿಶಿಷ್ಟ ಫಲಾನುಭವಿಗಳಿಗೆ ಮೀಸಲಿಡುವ ಹಾಗೂ ವೆಚ್ಚ ಮಾಡಲು ಕಡ್ಡಾಯಗೊಳಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆ ಅಧಿನಿಯಮವನ್ನು 2013ರಲ್ಲಿಜಾರಿಗೆ ತಂದು 25 ಸಾವಿರ ಕೋಟಿ ರೂ. ಹಣ ಮೀಸಲಿಟ್ಟಿತ್ತು ಎಂದರು.
ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅಗತ್ಯಕ್ಕೆ ಅನುಗುಣ ವಾಗಿ ಸಾಕಷ್ಟು ಅನುದಾನವನ್ನು ನೀಡಿತ್ತು. ಆ ಸಮುದಾಯಗಳ ಕಾಲೋನಿಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳು ಕಲ್ಪಿಸಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ ತನ್ನ ವಾರ್ಷಿಕ ಬಜೆಟ್‌ನಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಕಡಿತಗೊಳಿಸಿ ಪ.ಜಾತಿ, ಪಂಗಡದ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದ ಎಚ್ಚರಿಕೆ: ಮಾರ್ಚ್ ತಿಂಗಳಲ್ಲಿ ನಡೆಯುವ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಪ.ಜಾತಿ, ಪಂಗಡಗಳ ಸಮುದಾಯಗಳ ಅಭಿವೃದ್ಧಿಗೆ 30 ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟು ಆ ಸಮುದಾಯಗಳು ವಾಸಿಸುವ ಕಾಲೋನಿಗೆ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸದನದೊಳಗೆಹಾಗೂ ಹೊರಗೆ ಕಾಂಗ್ರೆಸ್ ಪಕ್ಷ ಹೋರಾಟ ನಡೆಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕಾಮಗಾರಿಗೆ ಚಾಲನೆ: ತಾಲೂಕಿನ ರಾಗಿಹಳ್ಳಿ, ಬಸವನ ಮತ್ತಿಕೆರೆ, ನಾಗನಹಳ್ಳಿ ತಾಂಡ್ಯ, ಕಿಚ್ಚಾ ವಾಡಿ,ಹೆಗ್ಗಡತಿಹಳ್ಳಿ, ಚನ್ನತಿಮ್ಮನಪಾಳ್ಯ, ರಂಗಮ್ಮನ ಪಾಳ್ಯ,ಸೀಗೇಪಾಳ್ಯ, ಅಮೃತೂರು, ಅಣ್ಣಯ್ಯನ ಪಾಳ್ಯ,ಈಡಿಗರ ಪಾಳ್ಯ, ಪಲ್ಲೇರಾಯನಹಳ್ಳಿ, ರಾಜಪ್ಪನ ದೊಡ್ಡಿ, ಮುದ್ದಹನುಮನಪಾಳ್ಯ ಹಾಗೂ ಕುಣಿಗಲ್‌ಟೌನ್ ಸಿದ್ದಾರ್ಥ ಕಾಲೋನಿ, ಮಲ್ಲಾ ಘಟ್ಟ ದಲ್ಲಿ 2.19 ಕೋಟಿ ರೂ. ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಪುರಸಭಾ ಅಧ್ಯಕ್ಷ ರಂಗಸ್ವಾಮಿ, ಸದಸ್ಯ ಬಿ.ಎನ್. ಅರುಣ್‌ಕುಮಾರ್, ಮಲ್ಲಿ ಪಾಳ್ಯ ಶ್ರೀನಿವಾಸ್, ದೇವರಾಜ್, ಲೋಕೋಪಯೋಗಿ ಇಲಾಖೆ ಎಇಇ ಗುರುಸಿದ್ದಪ್ಪ, ಎಇ ಗಿರಿ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್. ರಂಗಣ್ಣಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಬೇಗೂರು ನಾರಾಯಣ್, ದಲಿತ ಮುಖಂಡ ವರದರಾಜು, ಚಲುವರಾಜು ಹಾಗೂ ಮತ್ತಿತರರು ಇದ್ದರು.