Advertisement

ಇಂದಿನಿಂದ ರೇವಣಸಿದ್ದೇಶ್ವರ ಶ್ರೀ ಷಷ್ಟ್ಯಬ್ದಿ

10:05 AM Jan 30, 2019 | |

ಬಂಕಾಪುರ: ಸಾವಿರಾರು ವರ್ಷಗಳ ಇತಿಹಾಸ ಹೊಂದಿ, ನೂರಾರು ದಾರ್ಶನಿಕ ಮಠಾಧೀಶರನ್ನು ಕಂಡ ಪಟ್ಟಣದ ಭಾವಿಸ್‌ ಮಹಲ್‌ ಕಟ್ಟಿಮನಿ ಅರಳೆಲೆ ಹಿರೇಮಠದ ನೂರನೇ ಪೀಠಾಧಿಪತಿಗಳಾದ ರೇವಣಸಿದ್ದೇಶ್ವರ ಶಿವಾಚಾರ್ಯರು ಜೀವನಿಗೆ ದೇವದರ್ಶನ ಭಾಗ್ಯವನು ಕರುಣಿಸಿ ಮುಕ್ತಿ ತೋರಬಲ್ಲ ಶಕ್ತಿ ಪಡೆದವರಾಗಿದ್ದಾರೆ.

Advertisement

ಅಂತಹ ಮಹಾ ಧರ್ಮ, ಕೃಷಿ ಕಾಯಕ ಯೋಗಿಗಳಾದ ರೇವಣಸಿದ್ದೇಶ್ವರ ಶ್ರೀಗಳವರ 60ನೇ ಜನ್ಮ ದಿನೋತ್ಸವ ಅಂಗವಾಗಿ ಜ.30, 31 ರಂದು ನಡೆಯಲಿರುವ ಲಿಂ.ರುದ್ರಮುನಿಶ್ವರ ಸ್ವಾಮೀಜಿಗಳವರ 45 ನೇ ಪುಣ್ಯಾರಾಧನೆ ಸಮಾರಂಭದಲ್ಲಿ ಭಕ್ತರೆ ಶ್ರೀ ಮಠಕ್ಕೆ ಶಕ್ತಿಯಾಗಿ ನಿಂತು ಪ್ರಸ್ತುತ ಶ್ರೀಗಳವರ ಷಷ್ಟ್ಯಬ್ದಿ ಸಮಾರಂಭವನ್ನು ಬೆಳ್ಳಿ ತುಲಾಭಾರ ಸೇವೆ ಸಲ್ಲಿಸುವ ಮೂಲಕ ಆಚರಿಸಲು ಸನ್ನದ್ಧರಾಗಿದ್ದಾರೆ. ಸರ್ವ ಜನಾಂಗದವರಿಗೆ ಶಾಂತಿಯ ದೂತರಾಗಿ ಧರ್ಮದ ದಾರಿ ತೋರಿಸುತ್ತಿರುವ ಶ್ರೀಗಳವರಿಗೆ ಬೆಳ್ಳಿ ತುಲಾಭಾರ ಸೇವೆ ಸಲ್ಲಿಸಲು ಸರ್ವ ಜನಾಂಗದವರು ತಮ್ಮ ಮನೆಗಳಿಗೆ ಶ್ರೀಗಳವರನ್ನು ಪಾದ ಪೂಜೆಗೆ ಆಹ್ವಾನಿಸಿ ಬೆಳ್ಳಿ, ಧನ, ಧಾನ್ಯಗಳನ್ನು ದೇಣಿಗೆ ನೀಡಿ ಗುರು ಕೃಪೆಗೆ ಪಾತ್ರರಾಗುತ್ತಿದ್ದಾರೆ.

ತಾತ್ವಿಕ, ಸಾತ್ವಿಕ ನೆಲೆಗಟ್ಟಿನ ಮೇಲೆ ಶ್ರೀಮಠ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿ ವೀರಶೈವ, ಲಿಂಗಾಯತ ಧರ್ಮದ ಬೇರುಗಳನ್ನು ಗಟ್ಟಿ ಗೊಳಿಸುವ ಮೂಲಕ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ತತ್ವದಡಿ ಇಡೀ ಮಾನವ ಕುಲಕ್ಕೆ ಧರ್ಮ ಬೋಧನೆ ಮಾಡುವ ಮೂಲಕ ಭಕ್ತರ ಬಾಳಿಗೆ ಬೆಳಕಾಗಿರುವ ಅರಳೆಲೆಮಠ ಶ್ರೀ ರಂಭಾಪುರಿ ಪೀಠದ ಪ್ರಮುಖ ಶಾಖಾ ಮಠಗಳಲ್ಲೊಂದಾಗಿದೆ.

ಸದಾ ಕ್ರಿಯಾಶೀಲತೆ ಮೈಗೂಡಿಸಿಕೊಂಡ ಶ್ರೀಮಠದ ರೇವಣಸಿದ್ದೇಶ್ವರ ಶ್ರೀಗಳವರಿಗೆ ಪಂಚ ಪೀಠಾಧೀಶ್ವರರಿಂದ ಅನೇಕ ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಪ್ರಮುಖವಾಗಿ ಶಿವಾಚಾರ್ಯ ರತ್ನ, ವೃತ್ತಿ ಚೈತನ್ಯ ರತ್ನ, ಸಾಧನಾಚಾರ್ಯ, ವಿಕಾಶ ದೀಪ್ತಿ, ಸದ್ಧರ್ಮ ಪರಿಪಾಲನಾಚಾರ್ಯ, ಮಹಾಚಾರ್ಯ ತತ್ವ ಪ್ರಚಾರಕ ಸೇರಿದಂತೆ ಕೃಷಿ ವಲಯದಲ್ಲಿ ಮಾಡಿದ ಶ್ರೀಗಳವರ ಸಾಧನೆಗೆ ಹತ್ತು ಹಲವಾರು ಪ್ರಶಸ್ತಿಗಳು ಶ್ರೀಗಳವರನ್ನು ಅರಸಿ ಬಂದಿರುವುದು ಶ್ರೀಗಳವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿ ನಿಂತಿವೆ.

ಲಿಂ.ರುದ್ರಮುನಿ ಶ್ರೀಗಳು: ಲಿಂಗೈಕ್ಯ ರುದ್ರಮುನಿ ಶ್ರೀಗಳು ಶ್ರೀಮಠದ 99ನೇ ಪೀಠಾಧಿಪತಿಗಳಾಗಿ ಶ್ರೀಮಠದ ಇತಿಹಾಸದಲ್ಲಿಯೇ ಧಾರ್ಮಿಕ ಜಾಗೃತಿಗೊಳಿಸಿದ ತಪಸ್ವಿಯಾಗಿ ವಾಹನ ಸಂಚಾರ ವಿಲ್ಲದ ಕಾಲದಲ್ಲಿಯೂ ಕೂಡಾ ಪ್ರತಿಯೊಂದು ಹಳ್ಳಿಗಳಿಗೆ ಕಾಲ್ನಡಿಗೆ ಮೂಲಕ ಸಂಚರಿಸಿ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡುವ ಮೂಲಕ ನಡೆದಾಡುವ ದೇವರೆಂದೇ ಖ್ಯಾತನಾಮ ಹೊಂದಿದವರಾಗಿದ್ದರು. ಭಕ್ತರಿಗೆ ಧರ್ಮದ ಸವಿಜೇನನ್ನು ಉಣಬಡಿಸಿ ಭಕ್ತರಲ್ಲಿ ಆಚಾರ, ವಿಚಾರ, ಪದ್ಧತಿ, ರೀತಿ, ನೀತಿ, ಧರ್ಮದ ದಾರಿಯನ್ನು ತೋರಿಸಿ, ಭಕ್ತರ ರೋಗ ರುಜಿನುಗಳಿಗೆ ಗಿಡಮೂಲಿಕೆ ಔಷಧವನ್ನು ನೀಡುವ ಮೂಲಕ ಭಕ್ತರ ಬಾಳಿಗೆ ಸಂಜೀವಿನಿಯಾಗಿ ಜ್ಞಾನ ದಾಸೋಹದೊಂದಿಗೆ ಅನ್ನದಾಸೋಹ ನಡೆಸುವ ಮೂಲಕ ಸತ್ವಶಾಲಿ, ತತ್ವ ಬದ್ಧ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶಿವರೂಪಿಗಳಾಗಿದ್ದರು.

Advertisement

ಬಂಕಾಪುರ: ಅರಳೆಲೆಮಠದ ಲಿಂ. ರುದ್ರಮುನಿ ಸ್ವಾಮೀಜಿ 45ನೇ ಪುಣ್ಯಾರಾಧನೆ
ಹಾಗೂ ಪ್ರಸ್ತುತ ರೇವಣಸಿದ್ದೇಶ್ವರ ಶ್ರೀಗಳವರ ಷಷ್ಟ್ಯಬ್ದಿ ಸಮಾರಂಭ ಕಾರ್ಯಕ್ರಮಗಳು
ಜ.30 ಮತ್ತು 31 ರಂದು ಜಗದ್ಗುರು ಪಂಚಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯಲಿವೆ.
ಜ.30 ಬುಧವಾರ ವೀರಭದ್ರ ಗುಗ್ಗಳ ಮಹೋತ್ಸವ ಸಿದ್ದೇಶ್ವರ ದೇವಸ್ಥಾನದಿಂದ
ಪ್ರಾರಂಭಗೊಳ್ಳಲಿದೆ. ಸಂಜೆ 6 ಗಂಟೆಯಿಂದ ರುದ್ರಮುನೀಶ್ವರ ಸಂಗೀತ ಪಾಠ ಶಾಲೆಯ
ಮಕ್ಕಳಿಂದ ಸಂಗೀತ ಸೇವೆ, ಉತ್ತರ ಕರ್ನಾಟಕ ಕನ್ನಡ ಕಲಾವಿದರ ಸಂಘ ಹಾವೇರಿ
ಇವರಿಂದ ಸಾಂಸ್ಕೃತಿಕ ಸಮಾರಂಭ ನಡೆಯಲಿದೆ. ಜ.31 ಗುರುವಾರ ಪ್ರಾಥಃಕಾಲ
ಷಷ್ಟ್ಯಬ್ಧಿ ಸಮಾರಂಭದ ಪೂಜಾ ಸಂಸ್ಕಾರಯುಕ್ತ ಹೋಮ ಹವನಾದಿಗಳು ನಡೆಯಲಿವೆ.
ಬೆಳಗ್ಗೆ 11ರಿಂದ ನಡೆಯಲಿರುವ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ರಂಭಾಪುರಿ
ಡಾ.ವೀರಸೋಮೇಶ್ವರ ಶಿವಾಚಾರ್ಯರು, ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ
ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಶ್ರೀಶೈಲ ಡಾ.ಚನ್ನಸಿದ್ಧರಾಮ
ಪಂಡಿತಾರಾಧ್ಯ ಶಿವಾಚಾರ್ಯರು, ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ
ನಾಡಿನ ಹರ ಗುರು ಚರಮೂರ್ತಿಗಳು, ರಾಜಕೀಯ ಧುರೀಣರು ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸುವರು ಎಂದು ಮಠದ ಪ್ರಕಟಣೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next