Advertisement
ಶನಿವಾರ ಸುಯೇಜ್‌ಫಾರ್ಮ್ಗೆ ಭೇಟಿ ನೀಡಿ ಕಸದ ರಾಶಿ ಹಾಗೂ ಘನತ್ಯಾಜ್ಯ ಸಂಸ್ಕರಣ ಘಟಕಗಳನ್ನು ವೀಕ್ಷಿಸಿದ ನಂತರ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಆಲಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ನೇತೃತ್ವದ ಈ ಸಮಿತಿಯಲ್ಲಿ ನಗರ ವ್ಯಾಪ್ತಿಯ ನಾಲ್ವರು ಶಾಸಕರು, ಸಂಸದ ಪ್ರತಾಪ್ ಸಿಂಹ, ಮಹಾ ನಗರಪಾಲಿಕೆ ಮೇಯರ್, ಉಪ ಮೇಯರ್ ಇರಲಿದ್ದು, ಇಂದಿನಿಂದಲೇ ಕಾರ್ಯಾರಂಭ ಮಾಡುವಂತೆ ತಿಳಿಸಿದರು.
Related Articles
Advertisement
ಸುತ್ತಮುತ್ತಲಿನ ನಾಗರಿಕರು ಹಾಗೂ ವಿದ್ಯಾರಣ್ಯಪುರಂ ಡಿಎವಿ ಪಬ್ಲಿಕ್ ಶಾಲೆಯ ಮಕ್ಕಳು ಸಚಿವರಿಗೆ ಇಲ್ಲಿನ ಕಸದ ರಾಶಿಯಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ಮೇಯರ್ ಪುಷ್ಪಲತಾ, ಉಪ ಮೇಯರ್ ಶಫೀ ಅಹಮದ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಶೌಚಾಲಯದೊಳಗೆ ಎಂಜಿನಿಯರ್ ಕೂಡಿ ಹಾಕಿದ್ದನ್ನು ನೆನಪಿಸಿದ ಸೋಮಣ್ಣ: ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನ ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಶೌಚಾಲಯ ನಿರ್ವಹಣೆ ಸರಿ ಇಲ್ಲ ಎಂಬ ಕಾರಣಕ್ಕೆ ಸಂಬಂಧಪಟ್ಟ ಎಂಜಿನಿಯರ್‌ರನ್ನು ಶೌಚಾಲಯದೊಳಗೆ ಕೂಡಿ ಹಾಕಿದ ಪ್ರಸಂಗವನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚ್ಯವಾಗಿ ಹೇಳಿದರು.
ನಗರಪಾಲಿಕೆಯ ಆರೋಗ್ಯಾಧಿಕಾರಿಗಳಾದ ನಾಗರಾಜ್ ಮತ್ತು ಜಯಂತ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಿಮ್ಮ ಇಚ್ಛಾಶಕ್ತಿ ಕೊರತೆಯಿಂದ ಈ ಸಮಸ್ಯೆ ಉಲ್ಬಣಿಸಿದೆ. ನಾವು ಪರಿಶೀಲನೆಗೆ ಬರುತ್ತೇವೆ ಎಂಬ ಕಾರಣಕ್ಕೆ ಇಂದು ಒಂದಷ್ಟು ಕೆಲಸ ಮಾಡಲು ಹೊರಟಿದ್ದೀರಿ, 200 ಎಕರೆ ಇರುವ ಈ ಘಟಕವನ್ನು ನಿಮ್ಮಿಂದ ನಿರ್ವಹಿಸಲಾಗುತ್ತಿಲ್ಲ. 25 ವರ್ಷದ ಹಿಂದಿನ ವ್ಯವಸ್ಥೆಯಲ್ಲೇ ಇದೆ ಈ ಘಟಕ. ಈ ರೀತಿ ಎಲ್ಲಾ ಸುಳ್ಳು ಮಾಹಿತಿ ಕೊಡಬೇಡಿ ಎಂದು ತರಾಟೆಗೆ ತೆಗೆದುಕೊಂಡರು.
ಪ್ರವಾಸಿಗರಿಗೆ ಮುಜುಗರ ತರಬೇಡಿ: ಸ್ವಚ್ಛ ಭಾರತ ಯೋಜನೆಯಡಿ ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕಸದ ಜೊತೆಗೆ ಇಲ್ಲಿಗೆ ಪ್ಲಾಸ್ಟಿಕ್ ಬರದಿದ್ದರೆ ಅರ್ಧ ಸಮಸ್ಯೆ ಇತ್ಯರ್ಥವಾಗಲಿದೆ. ಅಧಿಕಾರಿಗಳು ತಪ್ಪು ಮಾಹಿತಿ ಕೊಟ್ಟರೆ ಸಮಸ್ಯೆ ಬಗೆಹರಿಯುವುದಿಲ್ಲ. ಎಲ್ಲರೂ ಮುಖವಾಡ ಹಾಕಿಕೊಂಡಿದ್ದಾರೆ. ಈ ಅವ್ಯವಸ್ಥೆಯನ್ನು ಮೊದಲು ಸರಿಪಡಿಸಿ ಎಂದು ಸಚಿವ ವಿ.ಸೋಮಣ್ಣ ತಾಕೀತು ಮಾಡಿದರು. ವಿಶ್ವದ ಎಲ್ಲೆಡೆಯಿಂದ ಮೈಸೂರಿಗೆ ನಿತ್ಯ ಪ್ರವಾಸಿಗರು ಬರುತ್ತಾರೆ. ದಸರೆಯ ಹತ್ತು ದಿನಗಳಲ್ಲಿ 55 ರಿಂದ 60 ಲಕ್ಷ ಪ್ರವಾಸಿಗರು ಬಂದು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಮೈಸೂರಿಗೆ ಬಂದ ಪ್ರವಾಸಿಗರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ತರಬೇಡಿ ಎಂದು ಸಲಹೆ ನೀಡಿದರು.