Advertisement

Renukaswamy Case: ನಟ ದರ್ಶನ್‌ ವಿರುದ್ಧದ ಸಾಕ್ಷ್ಯಗಳು ಸಿಐಡಿ ತಾಂತ್ರಿಕ ಘಟಕಕ್ಕೆ ರವಾನೆ

10:13 AM Jul 16, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಘಟನೆ ದಿನ ನಟ ದರ್ಶನ್‌, ಪ್ರೇಯಸಿ ಪವಿತ್ರಾಗೌಡ ಹಾಗೂ ಅವರ ಸಹಚರರ ಯಾವೆಲ್ಲ  ಸ್ಥಳಗಳಲ್ಲಿದ್ದರು, ಯಾವ ಮಾರ್ಗದಲ್ಲಿ ಸಂಚರಿಸಿದ್ದಾರೆ ಎಂಬುದರ ಕುರಿತು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯ  ಹಾಗೂ ಸಿಐಡಿಯ ತಾಂತ್ರಿಕ ಘಟಕಕ್ಕೆ ರವಾನಿಸಿದ್ದಾರೆ.

Advertisement

ಕೃತ್ಯಕ್ಕೆ ಮುನ್ನ ಆರೋ ಪಿಗಳು ಪಾರ್ಟಿ ಮಾಡಿದ್ದ ಆರ್‌.ಆರ್‌.ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ನಿಂದ ಪಟ್ಟಣಗೆರೆ ಶೆಡ್‌ ಮಾರ್ಗದಲ್ಲಿರುವ ರಸ್ತೆಯ ಅಕ್ಕಪಕ್ಕದ ಸಿಸಿ ಕ್ಯಾಮೆರಾ ದೃಶ್ಯಗಳು, ಪಟ್ಟಣಗೆರೆ ಶೆಡ್‌ನ‌ಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು, ಮೃತದೇಹ ಸಾಗಿಸಿರುವ ಸುಮನಹಳ್ಳಿ ರಾಜಕಾಲುವೆ ಮಾರ್ಗದಲ್ಲಿನ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ದರ್ಶನ್‌, ಪವಿತ್ರಾಗೌಡ ಸೇರಿ ಪ್ರಮುಖ ಆರೋಪಿಗಳ ಮನೆಗಳು, ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸೇರಿ ಇದುವರೆಗೂ 70ಕ್ಕೂ ಅಧಿಕ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಲಿರುವ ಸಿಸಿ ಕ್ಯಾಮೆರಾ ದೃಶ್ಯಗಳ ಟೈಮ್‌ಲೈನ್‌ ಹೊಂದಾಣಿಕೆ, ಕೂಲಂಕಷವಾದ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಲಯ ಹಾಗೂ ಸಿಐಡಿಯ ತಾಂತ್ರಿಕ ಘಟಕಕ್ಕೆ ರವಾನಿಸಲಾಗಿದೆ. ಈ ವಿವರ ಬಂದ ಕೂಡಲೇ ಮತ್ತೂಮ್ಮೆ ಪರಿಶೀಲಿಸಿ, ಬಳಿಕ ಈ ಸಾಕ್ಷ್ಯಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಭೇಟಿಯಾದ ಪತ್ನಿ, ಸಹೋದರ:

ಕಳೆದೊಂದು ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ ಅವರನ್ನು ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್‌ ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್‌ ಜತೆ ಮಾತನಾಡಿದ ಪತ್ನಿ ಮತ್ತು ಸಹೋದರ ಜಾಮೀನು ವಿಚಾರ ಚರ್ಚಿಸಿದ್ದಾರೆ. ಈ ವೇಳೆ ಸದ್ಯಕ್ಕೆ ಜಾಮೀನು ಸಿಗುವುದು ಕಷ್ಟ. ಸ್ವಲ್ಪ ದಿನಗಳ ಕಾಲ ಸಮಾಧಾನದಿಂದ ಇರುವಂತೆ ದರ್ಶನ್‌ಗೆ ಸಲಹೆ ನೀಡಿದ್ದಾರೆ. ಜತೆಗೆ ಇದೇ ಜುಲೈ 18ರಂದು ಮನೆ ಊಟದ ನೀಡುವ ಕುರಿತು ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿ ತೆರಳಿದ್ದಾರೆ.

Advertisement

ಪವಿತ್ರಾಗೌಡ ಭೇಟಿಯಾದ ಪೋಷಕರು: ಇದೇ ವೇಳೆ ಪವಿತ್ರಾಗೌಡಳನ್ನು ಆಕೆಯ ತಂದೆ, ತಾಯಿ ಹಾಗೂ ಚಿಕ್ಕಮ್ಮ ಭೇಟಿಯಾಗಿ ಧೈರ್ಯ ತುಂಬಿದ್ದಾರೆ. ಈ ಹಿಂದೆ ಜೈಲಿನ ಊಟ ಸೇವಿಸಿ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಅದರಿಂದ ಮನೆ ಊಟದ ಬಗ್ಗೆ ಕೋರ್ಟ್‌ಗೆ ಮನವಿ ಮಾಡುತ್ತೇವೆ. ಅದುವರೆಗೂ ಜೈಲಿನ ಊಟ ಸೇವಿಸುವಂತೆ ಸಲಹೆ ನೀಡಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪವಿತ್ರಾಗೌಡ ಸ್ನೇಹಿತೆ ಸಮತಾ ವಿಚಾರಣೆ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಾಗಿರುವ ಪವಿತ್ರಾ ಗೌಡ ಗೆಳತಿ ಸಮತಾರನ್ನು ತನಿಖಾಧಿಕಾರಿ ಸೋಮವಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ. ನೋಟಿಸ್‌ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಎಸಿಪಿ ಚಂದನ್‌ ಕುಮಾರ್‌ ಎದುರು ಸಮತಾ ಹಾಜರಾಗಿದ್ದರು. ಕೇಸ್‌ ಸಂಬಂಧ,  ಆರೋಪಿ ಧನರಾಜ್‌ಗೆ ಹಣ  ನೀಡಿದ ಬಗ್ಗೆ ತನಿಖಾಧಿಕಾರಿ ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.   ಕೊಲೆ ನಡೆದ ಮರುದಿನ ಸಮತಾ, ಪವಿತ್ರಾಗೌಡ ಮನೆಗೆ ಭೇಟಿ ನೀಡಿದ್ದರು. ಆಗ ಆರೋಪಿ ಧನರಾಜ್‌ಗೆ ಫೋನ್‌ ಪೇ ಮೂಲಕ 3 ಸಾವಿರ ರೂ.ಹಾಕಿದ್ದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಯು ಸಮತಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಪವಿತ್ರಾಗೌಡ ನಿಮಗೆ ಎಷ್ಟು ವರ್ಷದಿಂದ ಪರಿಚಯ, ರೇಣುಕಸ್ವಾಮಿ ಕೊಲೆ ಬಗ್ಗೆ ನಿಮ್ಮಗೆ ಗೊತ್ತಿತ್ತೇ, ಕೊಲೆ ಘಟನೆ ದಿನ ಆರೋಪಿ ಧನರಾಜ್‌ 3 ಸಾವಿರ ರೂ. ಫೋನ್‌ ಪೇ ಮೂಲಕ ವರ್ಗಾಯಿಸಿದ್ದು ಏಕೆ ಎಂಬುದು ಸೇರಿ ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಲಾಗಿದೆ.

ಪವಿತ್ರಾಗೌಡ ನನ್ನ ಆತ್ಮೀಯ ಗೆಳತಿ. ಕೆಲ ವರ್ಷಗಳಿಂದ ಆರೋಪಿ ಧನರಾಜ್‌ ತಮಗೆ ಪರಿಚಯವಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಅವರು ನನ್ನಿಂದ ಹಣ ಪಡೆದು ವಾಪಸ್‌ ನೀಡಿದ್ದರು. ಅದರಂತೆ ಅಂದು ತುರ್ತಿದೆ ಎಂದು ನನ್ನಿಂದ ಮೂರು ಸಾವಿರ ರೂ. ಪಡೆದಿದ್ದರು ಎಂದು ಸಮತಾ ತನಿಖಾಧಿಕಾರಿ ಎದುರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next