Advertisement

Renukaswamy Case ನಟ ದರ್ಶನ್‌ಗೆ 7 ತಾಸು ತೀವ್ರ ವಿಚಾರಣೆ !

12:43 AM Aug 29, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಅವರನ್ನು ಜೈಲಿನ ನಿಯಮ ಉಲ್ಲಂಘನೆ ಆರೋಪದಡಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣಗಳಲ್ಲಿ ಸತತ ಆರೇಳು ಗಂಟೆಗಳ ಕಾಲ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದು, ಲಿಖಿತ ಹಾಗೂ ಮೌಖಿಕ ಹೇಳಿಕೆ ಪಡೆದುಕೊಂಡಿದ್ದಾರೆ.

Advertisement

ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನಿಂದ ವಿಶೇಷ ಆತಿಥ್ಯ ಸ್ವೀಕರಿಸಿದ ಸಂಬಂಧ ದರ್ಶನ್‌ ವಿರುದ್ಧ 2 ಪ್ರತ್ಯೇಕ ಎಫ್ಐಆರ್‌ ದಾಖಲಾಗಿದೆ. ಈ ಸಂಬಂಧ ಹುಳಿಮಾವು ಮತ್ತು ಬೇಗೂರು ಠಾಣಾಧಿಕಾರಿಗಳು ಗುರುವಾರ ಬೆಳಗ್ಗೆಯಿಂದ ಸಂಜೆವರೆಗೂ ದರ್ಶನ್‌, ರೌಡಿಶೀಟರ್‌ ಧರ್ಮ, ರೌಡಿಶೀಟರ್‌ ಜಾನಿ ಪುತ್ರ ಸತ್ಯ ಹಾಗೂ ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನಾ, ದರ್ಶನ್‌ ಮ್ಯಾನೆಜರ್‌ ನಾಗರಾಜ್‌ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ದರ್ಶನ್‌, ಕೆಲವು ದಿನಗಳ ಹಿಂದೆಯೇ ಒಮ್ಮೆ ವಿಲ್ಸನ್‌ ಗಾರ್ಡನ್‌ ನಾಗನನ್ನು ಭೇಟಿಯಾಗಿದ್ದೆ. ಆ ನಂತರ ಆ.22ರಂದು ನಾನಿರುವ ಬ್ಯಾರಕ್‌ಗೆ ವ್ಯಕ್ತಿಯೊಬ್ಬ ಬಂದು, ನಮ್ಮ ಬಾಸ್‌ ನಾಗ ನಿಮಗೆ ಬರಲು ಹೇಳಿದ್ದಾರೆ ಎಂದರು. ನಾನು ಎದ್ದು ಹೋದೆ. ಆಗ ಆವರಣದಲ್ಲಿ 4 ಚೇರ್‌, ಟೀಪಾಯಿ ರೆಡಿ ಇತ್ತು. ಹೋಗುತ್ತಿದ್ದಂತೆ ನಾಗ ಪರಿಚಯಿಸಿಕೊಂಡು, ಕುಳಿತುಕೊಳ್ಳಲು ಹೇಳಿದ. ಅಂತೆಯೇ ಕುಳಿತುಕೊಂಡಾಗ ಟೀ ತಗೊಳ್ಳಿ, ಸಿಗರೇಟ್‌ ತಗೊಳ್ಳಿ ಅಂತಾ ಕೊಟ್ಟ. ಕೆಲ ಹೊತ್ತು ಅಲ್ಲಿಯೇ ಕುಳಿತು ಮಾತಾಡಿದ್ದೇವೆ. ಆದರೆ, ನಾನು ಯಾರಿಗೂ ಸಿಗರೇಟ್‌, ಟೀ ಬೇಕೆಂದು ಕೇಳಿಲ್ಲ. ಅದರಿಂದ ಇಷ್ಟು ದೊಡ್ಡಮಟ್ಟಕ್ಕೆ ಸಮಸ್ಯೆ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಇನ್ನು ಅಧಿಕಾರಿ-ಸಿಬಂದಿ ಅಮಾನತುಗೊಂಡಿರುವುದಕ್ಕೆ ದರ್ಶನ್‌ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಧರ್ಮ ಯಾರೆಂದು ಗೊತ್ತಿಲ್ಲ
ಇನ್ನು ಮೊಬೈಲ್‌ನಲ್ಲಿ ರೌಡಿಶೀಟರ್‌ ಪುತ್ರನ ಜತೆ ವೀಡಿಯೋ ಕಾಲ್‌ ಮಾಡಿರುವ ಸಂಬಂಧ ದರ್ಶನ್‌ ಧರ್ಮ ಯಾರೆಂಬುದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ನನ್ನ ಕೋಣೆಗೆ ಬಂದವರು ಯಾರು? ಕರೆ ಮಾಡಿದವರು ಯಾರು ಎಂಬುದು ಗೊತ್ತಿಲ್ಲ. ವೀಡಿಯೋ ಕಾಲ್‌ ಮಾಡಿಕೊಂಡು ದರ್ಶನ್‌ ಸರ್‌ ಇದ್ದಾರೆ ಅಂತ ಹೇಳಿಕೊಂಡು ಬಂದ, ಹಾಗೆಯೇ ನನ್ನ ಕಡೆ ಮೊಬೈಲ್‌ ತಿರುಗಿಸಿದ. ಆಗ ಆ ಕಡೆಯಿಂದ ಯುವಕನೊಬ್ಬ ಮಾತಾಡಿದಾಗ, ನಾನು ಸೌಜನ್ಯಕ್ಕೆ ಹಾಯ್‌ ಎಂದು ಪ್ರತಿಕ್ರಿಯೆ ಕೊಟ್ಟೆ. ಆತ ಕೂಡ ಹಾಯ್‌ ಎಂದು ಊಟ ಆಯಿತಾ ಎಂದು ಪ್ರಶ್ನಿಸಿದ. ನಾನು ಕೂಡ ಸನ್ನೆ ಮೂಲಕವೇ ಊಟ ಆಯಿತು ಎಂದು ಹೇಳಿದೆ ಹೊರತು, ನಾನೇ ಬೇಕೆಂದು ವೀಡಿಯೋ ಕಾಲ್‌ ಮಾಡಿಲ್ಲ, ಮೊಬೈಲ್‌ ತಂದವನು, ಮಾತಾಡಿದವ ಯಾರೆಂದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್‌ಗಾಗಿ ಶೋಧ
ಮತ್ತೊಂದೆಡೆ ಸತ್ಯನ ಮೊಬೈಲ್‌ ಜಪ್ತಿ ಮಾಡಲಾಗಿದ್ದು, ಆತ ಮೊಬೈಲ್‌ನಲ್ಲಿ ರುವ ಡೇಟಾಗಳನ್ನು ಡಿಲೀಟ್‌ ಮಾಡಿಕೊಂಡಿದ್ದಾನೆ. ಧರ್ಮನ ಒಂದು ಮೊಬೈಲ್‌ ಪತ್ತೆಯಾಗಿದ್ದು, ವೀಡಿಯೋ ಕರೆ ಮಾಡಿರುವ ಮೊಬೈಲ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next