Advertisement

Police Chargesheet: ರೇಣುಕಾಸ್ವಾಮಿ ದೇಹದ ಮೇಲೆ 39 ಗಾಯ!

01:06 AM Sep 05, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಮೃತನ ವೃಷಣ ಸೇರಿ ದೇಹದ 39 ಕಡೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಭೀಕರವಾಗಿ ಹತ್ಯೆಯಾಗಿದೆ ಎಂದು ಉಲ್ಲೇಖೀಸಲಾಗಿದೆ. ಅಲ್ಲದೆ, ಪ್ರಕರಣದ ಪ್ರತಿಯೊಬ್ಬ ಆರೋಪಿಗಳ ಪಾತ್ರವೇನು? ಜತೆಗೆ ಏನೆಲ್ಲ ಸಾಕ್ಷಿಗಳು ದೊರಕಿವೆ ಎಂಬುದನ್ನು ದಾಖಲಿಸಲಾಗಿದೆ.

Advertisement

ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿಯ ವೃಷಣಗಳಿಗೆ ಎಲೆಕ್ಟ್ರಿಕ್‌ ಶಾಕ್‌ ನೀಡಿದ್ದಾರೆ. ಜತೆಗೆ ಅವುಗಳ ಮೇಲೆ ಕಾಲಿನಿಂದ ಒತ್ತಿ ಹಾನಿಗೊಳಿಸಿರುವುದು ಪತ್ತೆಯಾಗಿದೆ. ಹೀಗಾಗಿ ಅವುಗಳ ಮೇಲಿನ ಚರ್ಮ ಕಿತ್ತು ಬಂದಿದೆ. ಅಲ್ಲದೆ, ಆತನ ಎದೆ, ಹೊಟ್ಟೆ, ಬೆನ್ನು ಹಾಗೂ ತಲೆಯ ಭಾಗಕ್ಕೆ ಕೈ, ಕಾಲು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿದ ಪರಿಣಾಮ ಆಂತರಿಕ ಮತ್ತು ಬಾಹ್ಯವಾಗಿ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಈ ವೇಳೆ ಆತನ ಎದೆಮೂಳೆ ಮುರಿತವಾಗಿದೆ. ಹೀಗೆ ಆತನ ದೇಹದ 39 ಕಡೆಗಳಲ್ಲಿ ತೀವ್ರ ಗಾಯಗಳಾಗಿವೆ ಎಂದು ದಾಖಲಿಸಲಾಗಿದೆ. ಅದನ್ನೇ ಆರೋಪಪಟ್ಟಿಯಲ್ಲೂ ಉಲ್ಲೇಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದರ್ಶನ್‌ ಸೇರಿ ಎಲ್ಲ 14 ಮಂದಿ ಆರೋಪಿಗಳು ಕೃತ್ಯದ ಸಂದರ್ಭದಲ್ಲಿ ಘಟನೆ ನಡೆದ ಸ್ಥಳದಲ್ಲಿದ್ದ ಬಗ್ಗೆ ಮೊಬೈಲ್‌ ಲೊಕೇಶನ್‌, ಪಟ್ಟಣಗೆರೆ ಶೆಡ್‌ನ‌ ಸಿಸಿ ಕೆಮೆರಾದಲ್ಲಿ ದರ್ಶನ್‌, ಪವಿತ್ರಾಗೌಡ ಕೆಲವು ಬಾರಿ ಬಂದು ಹೋಗಿರುವ ದೃಶ್ಯಗಳು ಸೆರೆಯಾಗಿವೆ. ಕೃತ್ಯದ ದಿನ ದರ್ಶನ್‌ ಮತ್ತು ಇತರ ಆರೋಪಿಗಳು ಧರಿಸಿದ್ದ ಬಟ್ಟೆಗಳ ಮೇಲಿನ ರಕ್ತದ ಕಲೆಗಳು ರೇಣುಕಾಸ್ವಾಮಿಯದ್ದೆ ಎಂಬುದು ದೃಢವಾಗಿದೆ. ಎಫ್ಎಸ್‌ಎಲ್‌ ವರದಿಗಳು ಕೂಡ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ರೇಣುಕಾಸ್ವಾಮಿ ಹಲ್ಲೆ ನಡೆಸಿರುವ ಕುರಿತು ಸಾಕಷ್ಟು ಸಾಕ್ಷಗಳನ್ನು ನೀಡಿವೆ. ಎಲ್ಲ ಆರೋಪಿಗಳ ಮೊಬೈಲ್‌ ರಿಟ್ರೈವ್‌ ಮಾಡಲಾಗಿದೆ.

ಹಲ್ಲೆ ವೀಡಿಯೋ ಪತ್ತೆ
ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಆರೋಪಿಗಳ ಪೈಕಿ ಒಬ್ಬ ವೀಡಿಯೋ ಮಾಡಿಕೊಂಡಿರುವುದು ಆರೋಪಿಗಳ ಮೊಬೈಲ್‌ಗ‌ಳ ರಿಟ್ರೈವ್‌ನಿಂದ ಪತ್ತೆಯಾಗಿದೆ. ಈ ವೇಳೆ ತನ್ನ ಮೇಲೆ ಪವಿತ್ರಾಗೌಡ ಮತ್ತು ದರ್ಶನ್‌ ಹಾಗೂ ಇತರರು ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾನೆ. ಆದರೂ ಆರೋಪಿಗಳು ಕಾಲಿನಿಂದ ಒದ್ದು ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಈ ಅಂಶವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

ಲುಮಿನಲ್‌ ಟೆಸ್ಟ್‌ ಮಾಡಿ, ರಕ್ತದ ಮಾದರಿ ಪತ್ತೆ
ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್‌ ಧರಿಸಿದ್ದ ಬಟ್ಟೆಯನ್ನು ತೊಳೆಯಲಾಗಿತ್ತು. ಆದರೂ ಬಟ್ಟೆಗಳನ್ನು ವಶಪಡಿಸಿಕೊಂಡು ಲುಮಿನಲ್‌ ಟೆಸ್ಟ್‌ ನಡೆಸಿದಾಗ ದರ್ಶನ್‌ ಬಟ್ಟೆ ಮೇಲಿರುವುದು ರೇಣುಕಾಸ್ವಾಮಿ ರಕ್ತ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಈ ಮೂಲಕ ಘಟನೆ ವೇಳೆ ದರ್ಶನ್‌ ಧರಿಸಿದ್ದ ಬ್ಲೂ ಜೀನ್ಸ್‌ ಹಾಗೂ ಟೀಶರ್ಟ್‌ ಮೇಲೆ ರಕ್ತದ ಕಲೆಗಳು ಇರುವುದು ದೃಢವಾಗಿದೆ.

Advertisement

“ಪ್ರಕರಣ ಸಂಬಂಧ 3,991 ಪುಟಗಳನ್ನೊಳಗೊಂಡ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಾಗೆಯೇ ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪನೆಗೆ ಸರಕಾರಕ್ಕೆ ಮನವಿ ಸಲ್ಲಿಸುವುದಕ್ಕೆ ಕಾನೂನು ತಜ್ಞರ ಜತೆಗೆ ಚರ್ಚಿಸಲಾಗುವುದು.”
-ಬಿ.ದಯಾನಂದ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ

ಪತ್ನಿ ಜತೆ 5 ನಿಮಿಷ ಮಾತಾಡಿದ ದರ್ಶನ್‌
ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸದಲ್ಲಿರುವ ಕೊಲೆ ಆರೋಪಿ ನಟ ದರ್ಶನ್‌ ಪತ್ನಿ ಜತೆ 5 ನಿಮಿಷ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ವಾರದಿಂದ ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌, ಬೆನ್ನುನೋವಿನಿಂದ ಸರ್ಜಿಕಲ್‌ ಚೇರ್‌, ಒಂಟಿತನದಿಂದ ಟಿವಿ ಕೇಳಿದ್ದರು. ಸರ್ಜಿಕಲ್‌ ಚೇರ್‌ ನೀಡಿದ್ದು, ಟಿವಿಯನ್ನು ಶೀಘ್ರವೇ ನೀಡುವ ಸಾಧ್ಯತೆಯಿದೆ. ಇದೀಗ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಅವಕಾಶ ಕೇಳಿದ್ದರು. ಇದನ್ನು ಪುರಸ್ಕರಿಸಿರುವ ಜೈಲು ಅಧಿಕಾರಿಗಳು, “ಪ್ರಿಸನ್‌ ಕಾಲ್‌ ಸಿಸ್ಟಮ್‌’ ಪದ್ಧತಿಯಡಿ ಅವಕಾಶ ನೀಡಿದ್ದಾರೆ.

ಪತ್ನಿಯ ಮೊಬೈಲ್‌ ನಂಬರ್‌ ನೀಡಿ, ಜೈಲಿನ ಎಸ್‌ಟಿಡಿ ಬೂತ್‌ನಂತಿರುವ ಲ್ಯಾಂಡ್‌ಲೈನ್‌ನಲ್ಲಿ ನೋಂದಣಿ ಮಾಡಿಸಿದ್ದಾರೆ. ಮಧ್ಯಾಹ್ನ 2.30ರಿಂದ 2.35ರ ವರೆಗೆ ಪತ್ನಿ ಜತೆ ಮಾತನಾಡಿದ್ದಾರೆ. ಒಂದು ವೇಳೆ ತುರ್ತು ಅಗತ್ಯವಿದ್ದರೆ 2ನೇ ಬಾರಿಗೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ.

ಈ ವೇಳೆ ಕೊಲೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಸಲ್ಲಿಕೆಯಾಗಲಿರುವ ಚಾರ್ಜ್‌ಶೀಟ್‌ ಸೇರಿ ಬೆಂಗಳೂರಿನಲ್ಲಿ ಬುಧವಾರ ನಡೆದಿರುವ ಎಲ್ಲ ಬೆಳವಣಿಗೆಗಳ ಕುರಿತು ಮಾಹಿತಿ ಪಡೆದಿದ್ದಾರೆ. ನಾಳೆ ಅಥವಾ ನಾಡಿದ್ದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಮತ್ತವರ ನ್ಯಾಯವಾದಿ ಮತ್ತೂಮ್ಮೆ ಜೈಲಿಗೆ ಬರುವ ಸಾಧ್ಯತೆಯಿದೆ.

ದರ್ಶನ್‌ ಖಾತೆಯಲ್ಲಿದೆ 35 ಸಾವಿರ ರೂ. ಹಣ
ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಪಿಪಿಸಿ (ಪ್ರಿಸನರ್ಸ್‌ ಪ್ರೈವೇಟ್‌ ಕ್ಯಾಶ್‌) ಖಾತೆ ನೀಡಲಾಗುತ್ತದೆ. ಅದನ್ನು ಆರೋಪಿ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೇ ನೀಡಲಾಗಿದ್ದು ಅದನ್ನು ಬಳ್ಳಾರಿ ಜೈಲಿಗೂ ಕಳುಹಿಸಲಾಗಿದೆ. ಆ ಖಾತೆಯಲ್ಲಿ ಸುಮಾರು 30ರಿಂದ 35 ಸಾವಿರ ರೂ. ಇದೆ. ದರ್ಶನ್‌ಗೂ ಗುರುವಾರ ಆರೋಗ್ಯ ತಪಾಸಣೆ ಮಾಡಲಾಯಿತು. ಆರೋಗ್ಯ ಸ್ಥಿರವಾಗಿದ್ದು ಬಿಪಿ, ಶುಗರ್‌ ಯಾವುದೂ ಇಲ್ಲ. ಎಲ್ಲವೂ ನಾರ್ಮಲ್‌ ಆಗಿದೆ ಎಂದು ಜೈಲಿನ ಮೂಲ ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.