ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ(Renukaswamy case) ಕೊಲೆ ಪ್ರಕರಣದ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, 2-3 ದಿನಗಳಲ್ಲಿ ನಟ ದರ್ಶನ್ (Actor Darshan) ಸೇರಿ 17 ಮಂದಿ ವಿರುದ್ಧ ಆರೋಪಿಗಳ ವಿರುದ್ಧ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸುಮಾರು 4,500ಕ್ಕೂ ಅಧಿಕ ಪುಟಗಳನ್ನೊಳಗೊಂಡ ಆರೋಪಪಟ್ಟಿಯಲ್ಲಿ 220ಕ್ಕೂ ಹೆಚ್ಚು ಸಾಕ್ಷ್ಯಗಳು ಹಾಗೂ 45ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ಉಲ್ಲೇಖಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂನ್ 8ರಂದು ಪಟ್ಟಣ ಗೆರೆಯ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಕೊಲೆ ನಡೆದಿತ್ತು. ಬಳಿಕ ತನಿಖೆ ವೇಳೆ ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೈವಾಡ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೈಸೂರಿನಲ್ಲಿ ನಟ ದರ್ಶನ್, ಬೆಂಗಳೂರಿನಲ್ಲಿ ಪವಿತ್ರಾಗೌಡ ಹಾಗೂ ಇತರರೆ ಆರೋಪಿಗಳನ್ನು ಬಂಧಿಸಲಾಗಿತ್ತು. ಸೆ.9ಕ್ಕೆ ಕೃತ್ಯ ನಡೆದು ಮೂರು ತಿಂಗಳು ಪೂರ್ಣಗೊಳ್ಳಲಿದ್ದು, ಅದರ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ.
ಆದರಿಂದ ಬಹುತೇಕ ತನಿಖೆ ಪೂರ್ಣಗೊಳಿಸಿರುವ ತನಿಖಾಧಿಕಾರಿಗಳು ಇನ್ನು 2-3 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆ ಆರೋಪದಡಿ ನಟ ದರ್ಶನ್ ಹಾಗೂ ಪ್ರೇಯಸಿ ಪವಿತ್ರಾಗೌಡ ಸೇರಿ 17 ಮಂದಿಯನ್ನು ಬಂಧಿಸಲಾಗಿತ್ತು. ತನಿಖೆ ಹಂತದಲ್ಲಿ ಲಭಿಸಿದ ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದ ತನಿಖಾಧಿಕಾರಿಗಳು ಹೈದರಾಬಾದ್ ಹಾಗೂ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ರವಾನಿಸಿದ್ದರು. ಎಲ್ಲ ವರದಿಗಳೂ ಪೊಲೀಸರ ಕೈಸೇರಿದ್ದು, 4,500ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಿದ್ಧ ಮಾಡಿಕೊಂಡಿದ್ದಾರೆ.
ಬಳ್ಳಾರಿ ಕೇಂದ್ರ ಕಾರಾಗೃಹ ದಲ್ಲಿರುವ ನಟ ದರ್ಶನ್ ಇದುವರೆಗೂ ಜಾಮೀನು ಕೋರಿ ಅರ್ಜಿ ಸಲ್ಲಿಸಿಲ್ಲ. ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಅರ್ಜಿ ಸಲ್ಲಿಸಲಾಗುವುದು. ಪವಿತ್ರಾಗೌಡ ಅವರ ಜಾಮೀನು ಅರ್ಜಿಯನ್ನು 57ನೇ ನಗರ ಸಿವಿಲ್ ನ್ಯಾಯಾಲಯವು ವಜಾಗೊಳಿಸಿದೆ.
ಇನ್ನು ಸೋಮವಾರ ಪ್ರಕರಣದ ಇತರೆ ಆರೋಪಿಗಳಾದ ಕೇಶವಮೂರ್ತಿ ಮತ್ತು ವಿನಯ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.