Advertisement

ಎಸ್‌ಸಿ,ಎಸ್ಟಿ ಮೀಸಲು ಹೆಚ್ಚಳಕ್ಕೆ ಶಿಫಾರಸು

03:01 AM Jul 03, 2020 | Sriram |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿಯನ್ನು ಕ್ರಮವಾಗಿ ಶೇ.17ಕ್ಕೆ ಮತ್ತು ಶೇ.7ಕ್ಕೆ ಹೆಚ್ಚಳ ಮಾಡಬಹುದು ಎಂದು ನಿವೃತ್ತ ನ್ಯಾ| ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.

Advertisement

ಪ.ಜಾತಿಯವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಶೇ.2 ಹಾಗೂ ಪ. ಪಂಗಡದ ಮೀಸಲಾತಿಯನ್ನು ಶೇ.4ರಷ್ಟು ಹೆಚ್ಚಳ ಮಾಡಬಹುದೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ರಾಜ್ಯ ಸರಕಾರ ಆಯೋಗ ರಚಿಸಿತ್ತು. ನಿವೃತ್ತ ನ್ಯಾ| ನಾಗಮೋಹನ್‌ ದಾಸ್‌ ಗುರುವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ವರದಿ ನೀಡಿದರು.

ಸದ್ಯ ಪ.ಜಾತಿಗೆ ಶೇ.15 ಮತ್ತು ಪ. ಪಂಗಡಕ್ಕೆ ಶೇ.3ರಷ್ಟು ಶೈಕ್ಷಣಿಕ ಮತ್ತು ಉದ್ಯೋಗ ಮೀಸಲಾತಿ ಇದೆ.

ಶೇ.50 ಮೀರಲು ಶಿಫಾರಸು?
ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂಬುದಾಗಿ ಸುಪ್ರೀಂ ಕೋರ್ಟ್‌ ಆದೇಶವಿದೆ. ಆದರೂ ಮೀಸಲಾತಿ ಅಂಶವನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ಪ್ರಮಾಣ ಹೆಚ್ಚಳಕ್ಕೆ ಅವಕಾಶವಿದ್ದು, ಈ ಬಗ್ಗೆ ಸರಕಾರ ಪರಿಶೀಲಿಸಬಹುದು ಎಂದು ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.

ದೇಶದಲ್ಲೇ ಮೊದಲ ಆಯೋಗ
ಮೀಸಲಾತಿ ಹೆಚ್ಚಳ ವಿಚಾರದಲ್ಲಿ ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಆಯೋಗ ರಚನೆ ಯಾಗಿತ್ತು. ಅನ್ಯ ರಾಜ್ಯಗಳಲ್ಲಿ ಕೇವಲ ಆದೇಶಗಳ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಆದರೆ ಹೆಚ್ಚಳ ಬೇಕೇ, ಬೇಡವೇ ಎಂಬುದನ್ನು ತಿಳಿಯಲು ಆಯೋಗ ರಚಿಸಿರುವುದರಲ್ಲಿ ರಾಜ್ಯವೇ ಮೊದಲು ಎಂದು ಎಚ್‌.ಎನ್‌. ನಾಗಮೋಹನ್‌ ದಾಸ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಒಳಮೀಸಲಾತಿ ಕಲ್ಪಿಸಿ
ಅಲೆಮಾರಿ, ಅರೆ ಅಲೆಮಾರಿ, ಅರಣ್ಯವಾಸಿಗಳು, ಬುಡಕಟ್ಟು ಜನರ ಅಭಿವೃದ್ಧಿಗೆ ಪ್ರತ್ಯೇಕ ಆಯೋಗ ಸ್ಥಾಪಿಸಬೇಕು. ಒಳಮೀಸಲಾತಿ ಅಗತ್ಯ. ಆದರೆ ಆಳ ಅಧ್ಯಯನದ ಜತೆಗೆ ವೈಜ್ಞಾನಿಕವಾಗಿ ಜಾತಿ ಗಣತಿ ನಡೆದು ಒಳಮೀಸಲಾತಿ ಸೌಲಭ್ಯ ಕಲ್ಪಿಸಬಹುದು ಎಂದೂ ಶಿಫಾರಸಿನಲ್ಲಿದೆ ಎಂದು ತಿಳಿದುಬಂದಿದೆ.

ನಾನು ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಬೆಳೆದ‌ವನು. ತಳ ಸಮುದಾಯದವರ ಬದುಕು, ಕಷ್ಟ ಗೊತ್ತಿದೆ. ಆದರೆ ಅವರಿಂದಲೇ ಅದನ್ನು ಕೇಳಿದ್ದು ವಿಶೇಷ ಅನುಭವ ನೀಡಿತು.
– ನ್ಯಾ| ನಾಗಮೋಹನ್‌ದಾಸ್‌
ನಿವೃತ್ತ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next