Advertisement

State Budget Meeting: ಇಂದಿನಿಂದ ಸಿಎಂ ಬಜೆಟ್‌ ಪೂರ್ವಭಾವಿ ಸರಣಿ ಸಭೆ

12:43 AM Jan 07, 2025 | Team Udayavani |

ಬೆಂಗಳೂರು: ಮಾರ್ಚ್‌ ಎರಡು ಅಥವಾ ಮೂರನೇ ವಾರದಲ್ಲಿ 2025-26ನೇ ಸಾಲಿನ ಬಜೆಟ್‌ ಮಂಡನೆ ಮಾಡಲು ಉದ್ದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರದಿಂದ ಪೂರ್ವಭಾವಿ ಸಭೆಗಳನ್ನು ನಡೆಸಲಿದ್ದಾರೆ.

Advertisement

ಹೊಸ ವರ್ಷದ ಮೊದಲ ದಿನ ತಮ್ಮನ್ನು ಭೇಟಿಯಾದ ಉನ್ನತಾಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದ ಅವರು ಮಾರ್ಚ್‌ನಲ್ಲಿ ಬಜೆಟ್‌ ಮಂಡನೆ ಸುಳಿವು ನೀಡಿದ್ದರು. ಅಲ್ಲದೆ ಜ. 2ರ ಗುರುವಾರವೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳೊಂದಿಗೆ ಸಭೆ ನಡೆಸಲು ಉದ್ದೇಶಿಸಿದ್ದರು. ಅದೇ ದಿನ ಸಂಪುಟ ಸಭೆಯೂ ಇದ್ದುದರಿಂದ ಇಲಾಖಾವಾರು ಸಭೆಗಳಿಗೆ ಚಾಲನೆ ನೀಡಲಾಗಿರಲಿಲ್ಲ.

ಇದೀಗ ಜ. 7ರ ಮಂಗಳವಾರ ಸರಣಿ ಸಭೆಗಳನ್ನು ಕರೆದಿರುವ ಸಿಎಂ, ಆಯಾ ಇಲಾಖೆಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳ ಆಯವ್ಯಯ ಕಂಡಿಕೆ, ಕೈಗೊಂಡ ಕ್ರಮ, ಆರ್ಥಿಕ ಮತ್ತು ಭೌತಿಕ ಪ್ರಗತಿ, ಇಲಾಖೆಯಿಂದ ಕೈಗೊಳ್ಳಬಹುದಾದ ಹೊಸ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ (ಪಿಪಿಟಿ) ಸಿದ್ಧಪಡಿಸಿಕೊಂಡು ಬರುವಂತೆ ನಿರ್ದೇಶನ ನೀಡಿದ್ದಾರೆ.

ತೆರಿಗೇಯತರ ಆದಾಯಕ್ಕೆ ಒತ್ತು
ಹಣಕಾಸು ಇಲಾಖೆಯೊಂದಿಗೆ ಈಗಾಗಲೇ ಮೂರು ಸುತ್ತಿನ ಸಭೆಗಳನ್ನು ನಡೆಸಿರುವ ಸಿದ್ದಾರಾಮಯ್ಯ ಇದುವರೆಗಿನ ಆರ್ಥಿಕ ಮತ್ತು ಭೌತಿಕ ಪ್ರಗತಿಯ ಪಕ್ಷಿನೋಟವನ್ನು ಪಡೆದುಕೊಂಡಿದ್ದಾರೆ. ತೆರಿಗೆ ಗುರಿ ಮತ್ತು ವಾಸ್ತವಿಕ ಸಂಗ್ರಹಣೆಯ ಮಾಹಿತಿಯನ್ನೂ ಕಲೆ ಹಾಕಿದ್ದಾರೆ. ಜಾರಿಯಲ್ಲಿರುವ 5 ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದರ ಜತೆಗೆ ಶಾಸಕರಿಗೆ ಪ್ರದೇಶಾಭಿವೃದ್ಧಿ ನಿಧಿ ಸೇರಿದಂತೆ ವಿವಿಧ ಅನುದಾನಗಳ ಹಂಚಿಕೆಯ ದಾರಿಗಳನ್ನು ಹುಡುಕಲಾರಂಭಿಸಿದ್ದಾರೆ. ಇದಕ್ಕಾಗಿ ತೆರಿಗೆಯೇತರ ಆದಾಯ ಮೂಲಗಳನ್ನು ಶೋಧಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next