Advertisement

ಮಕ್ಕಳ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ  ಶಿಫಾರಸು

05:10 PM Jun 06, 2018 | Team Udayavani |

ಧಾರವಾಡ: ವಿಕಲಚೇತನ ಮಕ್ಕಳು, ಪೋಷಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮಹತ್ವದ ಬೇಡಿಕೆಗಳನ್ನು ಆಯೋಗದ ಗಮನಕ್ಕೆ ತಂದಿದ್ದು, ಇವುಗಳನ್ನು ಕ್ರೋಢಿಕರಿಸಿ ವರದಿ ಮೂಲಕ ರಾಜ್ಯ ಸರ್ಕಾರಕ್ಕೆ ಶೀಘ್ರ ಶಿಫಾರಸು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ|ಕೃಪಾ ಅಮರ ಆಳ್ವಾ ಹೇಳಿದರು. ಇಲ್ಲಿನ ಜಿಪಂ ಸಭಾಂಗಣದಲ್ಲಿ ಆಯೋಗದಿಂದ ಆಯೋಜಿಸಿದ್ದ ವಿಕಲಚೇತನ ಮಕ್ಕಳ ಸಮಸ್ಯೆಗಳ ನಿವಾರಣೆಗಾಗಿ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಸರ್ಕಾರ ಮಕ್ಕಳ ಹಿತರಕ್ಷಣೆ ಹಾಗೂ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ವಿಶೇಷವಾಗಿ ವಿಕಲಚೇತನ ಮಕ್ಕಳ ಹಿತರಕ್ಷಣೆಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಆದರೆ ಅರ್ಹ ಫಲಾನುಭವಿಗಳಿಗೆ ತಲುಪುತ್ತಿರುವ ಬಗ್ಗೆ ಗಂಭೀರವಾಗಿ ಪರಿಶೀಲಿಸಬೇಕಿದೆ. ಅನೇಕ ವಿಕಲಚೇತನ ಮಕ್ಕಳು ಹಾಗೂ ಪಾಲಕರು ಆರೋಗ್ಯ, ಮಕ್ಕಳ ಪಾಲನೆಗಾಗಿ ಹೆಚ್ಚಿನ ಆರ್ಥಿಕ ನೆರವು ಕೇಳಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ವಿಕಲಚೇತನರ ಇಲಾಖೆಯಿಂದ ನೀಡುತ್ತಿರುವ ಸವಲತ್ತುಗಳನ್ನು ಹೆಚ್ಚಿಸಬೇಕೆಂದು ಕೋರಿದ್ದಾರೆ ಎಂದರು.

150ಕ್ಕೂ ಹೆಚ್ಚು ಅಹವಾಲು: ಇಂದಿನ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಬೇಡಿಕೆಗಳು ಬಂದಿದ್ದು, ಎಲ್ಲವೂ ನ್ಯಾಯಯುತವಾಗಿವೆ. ಈ ಕುರಿತು ಸಮಗ್ರವಾಗಿ ಪರಿಶೀಲಿಸಿ, ಪೂರಕ ವರದಿಯನ್ನು ರಾಜ್ಯ ಸರ್ಕಾರಕ್ಕೆ ಆಯೋಗದಿಂದ ಸಲ್ಲಿಸುತ್ತೇವೆ ಮತ್ತು ಸರ್ಕಾರ ಈ ಕುರಿತು ಸಕಾರಾತ್ಮಕ ಕ್ರಮ ಕೈಗೊಳ್ಳುವಂತೆ ಗಮನ ಸೆಳೆಯಲಾಗುವುದು ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ನೇಹಲ್‌ ಆರ್‌, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ರೂಪಾ ನಾಯಕ್‌, ಆನಂದ ಲೋಬೋ, ಆಯೋಗದ ಹಿರಿಯ ಸಹಾಯಕ ನಿರ್ದೇಶಕರಾದ ಡಾ|ಬಿ. ಉಷಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್‌.ಎಚ್‌.ನಾಗೂರ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಅಮರನಾಥ ಕೆ.ಎಂ, ಬೆಳಗಾವಿ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ನಾಮದೇವ ಬಲಕರ ಉಪಸ್ಥಿತರಿದ್ದರು. ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ವಿಕಲಚೇತನರು, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು ಭಾಗವಹಿಸಿದ್ದರು.

ಸಮಸ್ಯೆ ಬಿಚ್ಚಿಟ್ಟ ವಿಕಲಚೇತನರು
ನನ್ನ ತಂದೆ ಕುಡುಕನಾಗಿದ್ದಾನೆ. ಅವನು ನನಗೆ ಸರ್ಕಾರದಿಂದ ಬರುವ ಅನುದಾನ ಮತ್ತು ತಿಂಗಳ ಸಂಬಳವನ್ನು ತಾನೇ ಕಸಿದುಕೊಂಡು ಹೋಗುತ್ತಿದ್ದಾನೆ. ದಯಮಾಡಿ ನನಗೆ ರಕ್ಷಣೆ ಕೊಡಿ. ನನ್ನ ಮಗಳಿಗೆ ಕಾಲಿಲ್ಲ. ಅವಳನ್ನು ಪ್ರತಿದಿನ ಧಾರವಾಡಕ್ಕೆ ಓದಲು ಕರೆ ತರುತ್ತೇನೆ. ಆದರೆ ಅವಳಿಗೆ ಬಸ್‌ ಪಾಸ್‌ ಇದೆ. ನನಗೆ ಇಲ್ಲ. ನನಗೂ ಉಚಿತ ಬಸ್‌ಪಾಸ್‌ ಕೊಡಿಸಿ…ನಾನು ಓದಿ ದೊಡ್ಡ ಹುದ್ದೆ ಅಲಂಕರಿಸುವ ಆಸಕ್ತಿ ಇದೆ. ಆದರೆ ಮನೆಯಲ್ಲಿ ತಂದೆ-ತಾಯಿ ಕೂಲಿ ಮಾಡುತ್ತಿದ್ದು ನನ್ನ ಸಾಕುವುದಕ್ಕೆ ಅವರಿಗೆ ಶಕ್ತಿ ಇಲ್ಲ. ಹೀಗಾಗಿ ನನಗೆ ಆರ್ಥಿಕವಾಗಿ ಸಹಾಯ ಮಾಡಿ….ಇಂತಹ 150 ಕ್ಕೂ ಹೆಚ್ಚು ಸಮಸ್ಯೆಗಳನ್ನು ಹೊತ್ತ ವಿಕಲಚೇತನ ಮಕ್ಕಳು ಮಕ್ಕಳ ಹಕ್ಕು ಆಯೋಗದ ಮುಂದೆ ತಮ್ಮ ಅಹವಾಲು ಸಲ್ಲಿಸಿದರು.

Advertisement

ಧಾರವಾಡ, ದಾವಣಗೆರೆ, ಮಂಗಳೂರು, ಕಲಬುರ್ಗಿ, ಬೆಂಗಳೂರು ಸೇರಿದಂತೆ ಎಲ್ಲೆಡೆ ಇದೀಗ ವಿಕಲಚೇತನ ಮಕ್ಕಳ ಸಮಸ್ಯೆಗಳ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸಾರ್ವಜನಿಕವಾಗಿ ಅಹವಾಲು ಸ್ವೀಕರಿಸುತ್ತಿದ್ದೇವೆ. ಈ ಕುರಿತು ಜೂನ್‌ 30ರೊಳಗೆ ರಾಜ್ಯ ಸರ್ಕಾರಕ್ಕೆ ಅಗತ್ಯ ಮಾಹಿತಿ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಲಾಗುವುದು.
 ಡಾ|ಕೃಪಾ ಆಳ್ವಾ, ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷೆ  

Advertisement

Udayavani is now on Telegram. Click here to join our channel and stay updated with the latest news.

Next