ಚಂಡೀಗಢ : ‘ಡೇರಾ ಮುಖ್ಯಸ್ಥ ”ವಿಶ್ವ ಪರಿತ್ಯಾಗಿ”ಯಾಗಿರುವುದರಿಂದ, ಆತನ ಬಳಿ ಹಣ ಇಲ್ಲ, ವಿಶೇಷ ಸಿಬಿಐ ನ್ಯಾಯಾಲಯ ವಿಧಿಸಿರುವ 30 ಲಕ್ಷ ರೂ. ದಂಡವನ್ನು ಪಾವತಿಸಲು ಆತನಿಗೆ ಅಸಾಧ್ಯ’ ಎಂದು ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಂ ಸಿಂಗ್‌ನ ವಕೀಲರು ಇಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿಗೆ ಹೇಳಿದರು.
ಅತ್ಯಾಚಾರ ಅಪರಾಧಿಯಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರುಮೀತ್ ರಾಮ್ ರಹೀಮ್‌ಗೆ ಸಿಬಿಐ ನ್ಯಾಯಾಲಯ ಎರಡು ತಿಂಗಳ ಒಳಗಾಗಿ ದಂಡ ಮೊತ್ತವಾಗಿರುವ 30 ಲಕ್ಷ ರೂ.ಗಳನ್ನು ಬ್ಯಾಂಕಿನಲ್ಲಿ ಇರಿಸುವಂತೆ ತೀರ್ಪಿನಲ್ಲಿ ಆದೇಶಿಸಿತ್ತು.
ಡೇರಾ ಮುಖ್ಯಸ್ಥ ರಾಮ್ ರಹೀಮ್‌ನನ್ನು ಕೋರ್ಟಿನಲ್ಲಿ ಪ್ರತಿನಿಧಿಸಿದ ಹಿರಿಯ ನ್ಯಾಯವಾದಿ ಸ್ ಕೆ ಗರ್ಗ್ ನರ್ವಾನಾ ಅವರು, “ಎರಡು ತಿಂಗಳ ಒಳಗಾಗಿ 30 ಲಕ್ಷ ರೂ. ದಂಡವನ್ನು ಬ್ಯಾಂಕಿನಲ್ಲಿ ನಿರಖು ಠೇವಣಿ ರೂಪದಲ್ಲಿ ಇರಿಸುವಂತೆ ನ್ಯಾಯಾಲಯ ನಮಗೆ ಆದೇಶಿಸಿತ್ತು. ಒಂದೊಮ್ಮೆ ಮೇಲಿನ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ತೀರ್ಪು ಬಂದಲ್ಲಿ ನಾವು ನಿರ್ದೇಶಿತ ಮೊತ್ತದ ದಂಡವನ್ನು (30 ಲಕ್ಷ ರೂ.) ಬಡ್ಡಿ ಸಹಿತವಾಗಿ ಪಾವತಿಸುವೆವು’ ಎಂದು ಹೇಳಿದರು.
ಡೇರಾ ಮುಖ್ಯಸ್ಥನ ಎಲ್ಲ ಆಸ್ತಿ ಪಾಸ್ತಿಗಳನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿರುವುದರಿಂದ ಮತ್ತು ಆತನು ಸರ್ವ ಪರಿತ್ಯಾಗಿಯಾಗಿರುವುದರಿಂದ ಆತನ ಬಳಿ ದಂಡ ಪಾವತಿಸಲು ಯಾವುದೇ ಹಣವಿಲ್ಲ ಎಂದು ವಕೀಲ ಗರ್ಗ್ ನರ್ವಾನಾ ಕೋರ್ಟಿಗೆ ಹೇಳಿದರು.
ಜಸ್ಟಿಸ್ ಸೂರ್ಯ ಕಾಂತ್ ಮತುತ ಜಸ್ಟಿಸ್ ಸುಧೀರ್ ಮಿತ್ತಲ್ ಅವರು ಡೇರಾ ಮುಖ್ಯಸ್ಥನ ವಕೀಲರ ನಿವೇದನೆಯನ್ನು ಆಲಿಸಿದರು.
ಡೇರಾ ಮುಖ್ಯಸ್ಥ ಗುರುಮೀತ್ ರಾಮ್ ರಹೀಮ್‌ನನ್ನು ಪ್ರಕೃತ ರೋಹಟಕ್ ಜಿಲ್ಲೆಯ ಸುನಾರಿಯಾ ಜೈಲಿನಲ್ಲಿ ಇಡಲಾಗಿದೆ.