Advertisement
ಆಂಧ್ರ ಪ್ರದೇಶದ, 37 ವರ್ಷದ ಕೊನೆರು ಹಂಪಿ ವಿಶ್ವ ರ್ಯಾಪಿಡ್ ಚೆಸ್ ಪ್ರಶಸ್ತಿಯನ್ನು 2 ಸಲ ಗೆದ್ದ ವಿಶ್ವದ ಕೇವಲ 2ನೇ ಆಟಗಾರ್ತಿ. ಇದಕ್ಕೂ ಮುನ್ನ ಅವರು 2019ರಲ್ಲಿ ಚಾಂಪಿಯನ್ ಆಗಿದ್ದರು. ಚೀನದ ಜು ವೆಂಜುನ್ 2017, 2018ರಲ್ಲಿ ಈ ಪ್ರಶಸ್ತಿ ಜಯಿಸಿದ್ದರು.
ಕೊನೆರು ಹಂಪಿ ಸೋಲಿನೊಂದಿಗೆ ಈ ಕೂಟವನ್ನು ಆರಂಭಿಸಿದ್ದರು. ಆದರೆ 11ನೇ ಮತ್ತು ಕೊನೆಯ ಸುತ್ತಿಲ್ಲಿ ಕೊನೆರು ಒಬ್ಬರೇ ಗೆದ್ದಿದ್ದರಿಂದ ಅವರು ಗರಿಷ್ಠ 8.5 ಅಂಕ ಗಳಿಸಿ ವಿಜೇತರೆನಿಸಿದರು. ಭಾರತದವರೇ ಆದ ದ್ರೋಣವಲ್ಲಿ ಹರಿಕಾ ಸೇರಿ 6 ಮಂದಿ 8 ಅಂಕ ಗಳಿಸಿದ್ದರು. ದ್ವಿತೀಯ ಮತ್ತು ತೃತೀಯ ಸ್ಥಾನಕ್ಕಾಗಿ ಟೈಬ್ರೇಕರ್ ನಡೆಯಿತು. ಇಲ್ಲಿ ಜು ವೆಂಜುನ್ ದ್ವಿತೀಯ, ರಷ್ಯಾದ ಕ್ಯಾಥರಿನಾ ಲ್ಯಾಗ್ನೊ ತೃತೀಯ ಸ್ಥಾನಿಯಾದರು. ಅರ್ಜುನ್ ಜಂಟಿ 4ನೇ ಸ್ಥಾನ
ಮುಕ್ತ ವಿಭಾಗದ ಸ್ಪರ್ಧೆಯಲ್ಲಿ ರಷ್ಯಾದ 18 ವರ್ಷದ ವೊಲೊಡರ್ ಮುರ್ಜಿನ್ (10 ಅಂಕ) ಬಂಗಾರ ಗೆದ್ದರು. ಇದೇ ದೇಶದ ಅಲೆಕ್ಸಾಂಡರ್ ಗ್ರಿಸುcಕ್ (9.5) ದ್ವಿತೀಯ ಮತ್ತು ಇಯಾನ್ ನೆಪೋಮ್ನಿಯಾಚಿ (9.5) ತೃತೀಯ ಸ್ಥಾನಿಯಾದರು. 9 ಅಂಕ ಗಳಿಸಿದ ಭಾರತದ ಅರ್ಜುನ್ ಎರಿಗಾಯ್ಸಿ ಮತ್ತು ಇತರ 5 ಮಂದಿ 4ನೇ ಸ್ಥಾನ ಹಂಚಿಕೊಂಡರು. ಪ್ರಜ್ಞಾನಂದ 8.5 ಅಂಕ ಗಳಿಸಿ ಐದರಾಚೆಯ ಸ್ಥಾನ ಪಡೆದರು.
Related Articles
ಆಂಧ್ರಪ್ರದೇಶದ ಗುಡಿವಾಡದವರಾದ ಕೊನೆರು ಹಂಪಿ, 2002ರಲ್ಲಿ 15 ವರ್ಷದವರಾಗಿದ್ದಾಗಲೇ ಗ್ರ್ಯಾಂಡ್ ಮಾಸ್ಟರ್ ಆಗಿ ಗುರುತಿಸಿಕೊಂಡರು. ಈ ಮೂಲಕ ಅವರು ವಿಶ್ವದ ಅತೀ ಕಿರಿಯ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಎಂಬ ದಾಖಲೆ ನಿರ್ಮಿಸಿದ್ದರು. ಬಳಿಕ ಈ ದಾಖಲೆಯನ್ನು ಚೀನದ ಹೌ ಯಿಫಾನ್ ಮುರಿದರು.
Advertisement
10ನೇ ವಯಸ್ಸಿನಿಂದಲೇ ಕಿರಿಯರ ಚೆಸ್ ಕೂಟಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಕೊನೆರು, ಚೆಸ್ ಒಲಿಂಪಿಯಾಡ್, ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಬಂಗಾರ ಗೆದ್ದಿರುವ ಸಾಧಕಿ.
“ನಾನು ಬಹಳ ಉದ್ವೇಗಕ್ಕೊಳಗಾಗಿದ್ದೇನೆ, ವಿಪರೀತ ಸಂತೋಷಗೊಂಡಿದ್ದೇನೆ. ಇದು ನನಗೆ ಬಹಳ ಕಠಿನ ದಿನವಾಗಿತ್ತು. ಟೈಬ್ರೇಕರ್ಗೆ ಪಂದ್ಯ ಹೋಗಬಹುದೆಂದು ಭಾವಿಸಿದ್ದೆ. ಯಾವಾಗ ಪಂದ್ಯವನ್ನು ನಾನು ಮುಗಿಸಿದೆನೋ, ಆಗ ನಾನು ಗೆದ್ದೆ ಎಂದು ನಿರ್ವಾಹಕರು ತಿಳಿಸಿದರು. ಅದು ಬಹಳ ಒತ್ತಡದ ಸನ್ನಿವೇಶವಾಗಿತ್ತು’-ಕೊನೆರು ಹಂಪಿ