Advertisement

Bigg Boss: ಬಿಗ್‌ ಬಾಸ್‌ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..

06:38 PM Oct 05, 2024 | Team Udayavani |

ಕಿರುತೆರೆಯಲ್ಲಿ ಬಿಗ್‌ ಬಾಸ್ ಕಾರ್ಯಕ್ರಮ ಶುರುವಾಗಿದೆ. ತೆಲುಗು, ಮರಾಠಿ, ಕನ್ನಡ ಹಾಗೂ ಇದೀಗ ಹಿಂದಿಯಲ್ಲೂ ಬಿಗ್‌ ಬಾಸ್‌ ಹೊಸ ಸೀಸನ್‌ ಆರಂಭವಾಗಿದೆ. ಬಿಗ್‌ ಬಾಸ್‌ ಅಂದರೆ ಅಲ್ಲಿಗೆ ಬರುವ ಸ್ಪರ್ಧಿಗಳ ಸುತ್ತ ವಿವಾದಗಳು ಸುತ್ತಿಕೊಂಡಿರುತ್ತದೆ ಅಥವಾ ಬಿಗ್‌ ಬಾಸ್‌ ಮನೆಯೊಳಗೆಯೇ ಸ್ಪರ್ಧಿಗಳು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ ಎನ್ನುವ ಮಾತೊಂದಿದೆ. ಒಟ್ಟಿನಲ್ಲಿ ಇದುವರೆಗೆ ಎಲ್ಲಾ ಭಾಷೆಯಲ್ಲಿ ಬಂದಿರುವ ಬಿಗ್‌ ಬಾಸ್‌ ಶೋ ತನ್ನ  ವಿವಾದದಿಂದಲೇ ಹೆಚ್ಚು ಸುದ್ದಿ ಮಾಡಿದೆ. ಹಾಗಾಗಿ ಬಿಗ್‌ ಬಾಸ್‌ ಶೋವನ್ನು ವಿವಾದಿತ ಕಾರ್ಯಕ್ರಮವೆಂದು ಕರೆಯಲಾಗುತ್ತದೆ.

Advertisement

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಾಗೂ ವಿವಾದದಿಂದ ಸುದ್ದಿಯಾದ ಸೆಲೆಬ್ರಿಟಿಗಳು ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಹೋಗುತ್ತಾರೆ. ವಿಶೇಷವೆಂದರೆ ಬಿಗ್‌ ಬಾಸ್‌ ಮನೆಯೊಳಗೆ ಹೋಗಲು ಆಯಾ ಸ್ಪರ್ಧಿಗಳು ಸಂಭಾವನೆಯೂ ಇರುತ್ತದೆ. ವಾರಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆದು ಬಿಗ್‌ ಬಾಸ್‌ ಮನೆಗೆ ಹೋಗಿರುವ ಸ್ಪರ್ಧಿಗಳು ಕೂಡ ಇದ್ದಾರೆ.

ವಿವಾದಿತ ಬಿಗ್‌ ಬಾಸ್‌ ಅಂದರೆ ಹೆಚ್ಚು ಗಮನಕ್ಕೆ ಬರುವುದು ಹಿಂದಿ ಬಿಗ್‌ ಬಾಸ್.‌ ಇದುವರೆಗೆ ಬಂದಿರುವ ಹಿಂದಿ ಬಿಗ್‌ ಬಾಸ್ ಸೀಸನ್‌ ಗಳು ಒಂದಲ್ಲ ಒಂದು ಕಾರಣದಿಂದ ಸುದ್ದಿ ಆಗಿದೆ.

ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ವಿವಾದಾತ್ಮಕ ಸ್ಪರ್ಧಿಗಳು ಪಟ್ಟಿಯೂ ದೊಡ್ಡದಿದೆ. ಇಲ್ಲಿದೆ ಬಿಗ್‌ ಬಾಸ್‌ ಕಾರ್ಯಕ್ರಮದ ವಿವಾದಿತ ಸ್ಪರ್ಧಿಗಳು..

ರಾಖಿ ಸಾವಂತ್ (Rakhi Sawant – Bigg Boss 1) : ರಾಖಿ ಸಾವಂತ್‌ ಬಣ್ಣದ ಲೋಕದಲ್ಲಿ ತನ್ನ ಮೈಮಾಟವನ್ನು ತೋರಿಸಿ ಆರಂಭಿಕ ದಿನಗಳಲ್ಲಿ ಸಲೆಬ್ರಿಟಿಯಾಗಿ ಸದ್ದು ಮಾಡಿದವರು. ಬಾಲಿವುಡ್‌ನಲ್ಲಿ ಮೋಹಕ ನಟಿಯಾಗಿ ಒಂದು ಕಾಲದಲ್ಲಿ ಮಿಂಚಿದ ರಾಖಿ 2006ರಲ್ಲಿ ಅಂದರೆ ಹಿಂದಿ ಬಿಗ್‌ ಬಾಸ್‌ನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಪ್ರವೇಶ ಮಾಡಿದ್ದರು.

Advertisement

ಬಿಗ್‌ ಬಾಸ್‌ ಮನೆಯಲ್ಲಿ ರಾಖಿ ಅವರು ಬಹುತೇಕ ಎಲ್ಲರೊಂದಿಗೆ ಮಾತಿಗೆ ಮಾತು ಬೆಳೆಸಿ ವಾಗ್ವಾದಕ್ಕೆ ಇಳಿದಿದ್ದಾರೆ. ಮಾತಿನಲ್ಲಿ ಬೆದರಿಕೆ ಮಾತ್ರವಲ್ಲದೆ ದೈಹಿಕವಾಗಿ ಹಲ್ಲೆಗೂ ಮುಂದಾಗಿದ್ದರು.

ಮೊದಲ ಸೀಸನ್‌ ಮಾತ್ರವಲ್ಲದೆ ಬಿಗ್‌ ಬಾಸ್‌ 14ರಲ್ಲೂ ರಾಖಿ ಸಾವಂತ್‌ ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದರಲ್ಲಿ ಅವರು ಫಿನಾಲೆವರೆಗೆ ಬಂದಿದ್ದರು. ಬಿಗ್‌ ಬಾಸ್‌ ಮರಾಠಿ -4  ನಲ್ಲಿ ಕೂಡ ರಾಖಿ ಸ್ಪರ್ಧಿಯಾಗಿದ್ದರು.

ಬಿಗ್‌ ಬಾಸ್‌ -14ರಲ್ಲಿ ರಾಖಿ ಟಾಸ್ಕ್‌ ವೊಂದರ ಸಂದರ್ಭದಲ್ಲಿ ಸಹ ಸ್ಪರ್ಧಿ ರುಬಿನಾ ದಿಲಾಕ್ ಅವರ ಪತಿ ಅಭಿನವ್ ಶುಕ್ಲಾ ಅವರು ಶಾರ್ಟ್ಸ್‌ನ ದಾರವನ್ನು ಎಳೆದು ವಿವಾದಕ್ಕೆ ಗುರಿಯಾಗಿದ್ದರು.

ಡಾಲಿ ಬಿಂದ್ರಾ – ಬಿಗ್ ಬಾಸ್ 4 (Dolly Bindra – Bigg Boss 4) : ಬಿಗ್‌ ಬಾಸ್‌ ಹಿಂದಿಯ ಸೀಸನ್‌ -4ರ ಸ್ಪರ್ಧಿಯಾಗಿದ್ದ ಡಾಲಿ ಬಿಂದ್ರಾ ವಿವಾದಿತ ಸ್ಪರ್ದಿಯಾಗಿಯೇ ಗಮನ ಸೆಳೆದಿದ್ದರು, ಡಾಲಿ ಬಿಂದ್ರಾ, ಇತರ ಸ್ಪರ್ಧಿಗಳ ವಿರುದ್ಧ, ವಿಶೇಷವಾಗಿ ಶ್ವೇತಾ ತಿವಾರಿ ವಿರುದ್ಧ ಆಕ್ರಮಣಕಾರಿ ಮತ್ತು ನಿಂದನೀಯ ರೀತಿಯಾಗಿ ವರ್ತಿಸಿದ್ದರು.

ಆಶ್ಲೀಲ ಭಾಷೆ ಮತ್ತು ದೈಹಿಕವಾಗಿ ಹಲ್ಲೆಗೆ ಮುಂದಾಗಿದ್ದ ಘಟನೆಗಳು ಬಿಗ್‌ ಬಾಸ್‌ -4 ನಲ್ಲಿ ನಡೆದಿತ್ತು.

ಗಾಯಕ, ನಟ ಮತ್ತು ರಾಜಕಾರಣಿ ಮನೋಜ್ ತಿವಾರಿ ಅವರೊಂದಿಗೂ ಡಾಲಿ ಬಿಂದ್ರಾ ಅಸಹ್ಯವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದರು.

ಡಾಲಿ ಹಾಗೂ ಶ್ವೇತಾ ತಿವಾರಿ ಅವರ ವಾಗ್ವಾದ ದೃಶ್ಯಗಳು ಬಿಗ್‌ ಬಾಸ್‌ ಇತಿಹಾಸದಲ್ಲಿ ಇಂದಿಗೂ ಹೆಚ್ಚು ಸದ್ದು ಮಾಡಿರುವ ಘಟನೆ ಆಗಿದೆ.

ಪೂಜಾ ಮಿಶ್ರಾ: ಬಿಗ್‌ ಬಾಸ್‌ -5 (Pooja Misrra – Bigg Boss 5):  

ಬಿಗ್ ಬಾಸ್‌ -5 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ಪೂಜಾ ಮಿಶ್ರಾ ತನ್ನ ಅತಿರೇಕದ ವರ್ತನೆಯಿಂದ ಸದ್ದು ಮಾಡಿದ್ದರು. ಸಹ ಸ್ಪರ್ಧಿಗಳೊಂದಿಗೆ ನಿರಂತರ ವಾಗ್ವಾದ ಹಾಗೂ ದೈಹಿಕವಾಗಿ ಹಲ್ಲೆಗೆ ಮುಂದಾದ ಘಟನೆಗಳಿಂದ ಪೂಜಾ ಮಿಶ್ರಾ ಈ ಸೀಸನ್‌ ನಲ್ಲಿ ಸದ್ದು ಮಾಡಿದ್ದರು.

ಶೋನಿಂದ ಹೊರಹೋದ ಬಳಿಕವೂ ಪೂಜಾ ಸುದ್ದಿಯಾಗಿದ್ದರು. ಸನ್ನಿ ಲಿಯೋನ್ ವಿರುದ್ಧ ಮೊಕದ್ದಮೆ ಹೂಡಿದ್ದು ಹಾಗೂ ಸೋಶಿಯಲ್‌ ಮೀಡಿಯಾದಲ್ಲಿನ ವಿವಾದಿತ ಪೋಸ್ಟ್‌ ನಿಂದ ಅವರು ಸುದ್ದಿಯಾಗಿದ್ದರು.

ಇಮಾಮ್ ಸಿದ್ದಿಕ್ – ಬಿಗ್ ಬಾಸ್ 9: (Imam Siddique – Bigg Boss 9):  

ಕಾಸ್ಟಿಂಗ್ ಡೈರೆಕ್ಟರ್, ನಟ ಮತ್ತು ಸ್ಟೈಲಿಸ್ಟ್ ಇಮಾಮ್ ಸಿದ್ದಿಕ್ ಬಿಗ್‌ ಬಾಸ್‌  ಸೀಸನ್‌ -9ರಲ್ಲಿ ಭಾಗಿಯಾಗಿದ್ದರು. ಆಕ್ರಮಣಕಾರಿ ನಡವಳಿಕೆ, ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳಿಂದ ಅವರು ಸುದ್ದಿಯಾಗಿದ್ದರು.

ಸಹ ಸ್ಪರ್ಧಿ ಆಶ್ಕಾ ಗೊರಾಡಿಯಾ ಅವರೊಂದಿಗಿನ ತೀವ್ರ ವಾಗ್ವಾದದ ನಂತರ, ಸಿದ್ದಿಕ್ ಅವರನ್ನು ಬಿಗ್ ಬಾಸ್ ನಿಂದ ಅರ್ಧ ಸೀಸನ್‌ ನಿಂದಲೇ ಎಲಿಮಿನೇಟ್‌ ಮಾಡಲಾಗಿತ್ತು.

ಅರ್ಮಾನ್ ಕೊಹ್ಲಿ – ಬಿಗ್ ಬಾಸ್ 7 (Armaan Kohli – Bigg Boss 7): ಬಿಗ್‌ ಬಾಸ್‌ -7ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ಅರ್ಮಾನ್‌ ಕೊಹ್ಲಿ ಕೂಡ ವಿವಾದಿತ ಸ್ಪರ್ಧಿಗಳಲ್ಲಿ ಒಬ್ಬರು. ಸಹ ಸ್ಪರ್ಧಿ ಸೋಫಿಯಾ ಹಯಾತ್‌ನ ವಿರುದ್ಧ ನಿಂದನೀಯ ವರ್ತನೆ ತೋರಿದ್ದರು.

ಇದಲ್ಲದೆ ಅರ್ಮಾನ್‌ ಅವರ ಗೆಳತಿ ಆಗಿದ್ದ ಕಾಜೋಲ್ ಅವರ ಸಹೋದರಿ, ನಟಿ ತನಿಶಾ ಮುಖರ್ಜಿ ಅವರೊಂದಿಗೆ ಕೆಲ ವಿಚಾರಗಳಿಂದ ಸುದ್ದಿಯಾಗಿದ್ದರು. ಇದರಿಂದಾಗಿ ಕಾರ್ಯಕ್ರಮದಿಂದ ಅರ್ಮಾನ್‌ ಅವರನ್ನು ಹೊರಹಾಕಲಾಗಿತ್ತು.

ಟಾಸ್ಕ್‌ವೊಂದರಲ್ಲಿ ಹಯಾತ್ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.

ಸ್ವಾಮಿ ಓಂ – ಬಿಗ್ ಬಾಸ್ 10: (Swami Om – Bigg Boss 10): ಬಿಗ್‌ ಬಾಸ್‌ ಸೀಸನ್‌ -10ರಲ್ಲಿ ಭಾಗಿಯಾಗಿದ್ದ ಸ್ವಯಂ ಘೋಷಿತ ಸ್ವಾಮೀಜಿ ಓಂ ಅವರು ವಿವಾದಕ್ಕೆ ಗುರಿಯಾಗಿದ್ದರು. ಸಹ ಸ್ಪರ್ಧಿಗಳೊಂದಿಗಿನ ವಾಗ್ವಾದದಿಂದ ಅವರು ಸುದ್ದಿಯಾಗಿದ್ದರು.

ಟಾಸ್ಕ್ ವೊಂದರ ಸಮಯದಲ್ಲಿ ಮೂತ್ರವನ್ನು ಬಟ್ಟಲಿನಲ್ಲಿ ಸಂಗ್ರಹಿಸಿ ಇತರ ಸ್ಪರ್ಧಿಗಳ ಮೇಲೆ ಎಸೆದ ಆರೋಪದ ನಂತರ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಗಿತ್ತು.

ಪ್ರಿಯಾಂಕಾ ಜಗ್ಗಾ ಮುಯಿಸ್ – ಬಿಗ್ ಬಾಸ್ 10: (Priyanka Jagga Muise – Bigg Boss 10) : ಬಿಗ್‌ ಬಾಸ್‌ ಸೀಸನ್‌ -10 ವಿವಾದಿಕ್ಕೀಡಾದ ಮತ್ತೊಬ್ಬ ಸ್ಪರ್ಧಿ ಪ್ರಿಯಾಂಕ. ಅವರ ಅತಿರೇಕದ ವರ್ತನೆಯಿಂದಾಗಿ ಅವರನ್ನು ಸಲ್ಮಾನ್‌ ಖಾನ್‌ ಅವರೇ ಶೋನಿಂದ ಹೊರಹಾಕಿದ್ದರು.

ಸಹ ಸ್ಪರ್ಧಿಗಳೊಂದಿಗೆ ವಾಗ್ವಾದ ಹಾಗೂ ನಿಂದನೀಯ ಮಾತುಗಳನ್ನಾಡಿ ಅವರು ಸುದ್ದಿ ಆಗಿದ್ದರು.

ಜುಬೇರ್ ಖಾನ್ – ಬಿಗ್ ಬಾಸ್ 11: Zubair Khan – Bigg Boss 11; ನಿರ್ದೇಶಕ ಜುಬೇರ್‌ ಖಾನ್‌ ಬಿಗ್‌ ಬಾಸ್‌ ಸೀಸನ್ -11ರಲ್ಲಿ ಭಾಗಿಯಾಗಿದ್ದರು. ಬಿಗ್‌ ಬಾಸ್‌ ಮನೆಯಲ್ಲಿ ಅವರು ಸ್ವಲ್ಪ ದಿನ ಮಾತ್ರ ಇದ್ದರೂ, ಆ ದಿನಗಳಲ್ಲೇ ಅವರು ಹೆಚ್ಚು ವಿವಾದಕ್ಕೆ ಗುರಿಯಾಗಿದ್ದರು.

ಇತರ ಸ್ಪರ್ಧಿಗಳ ಜತೆಗಿನ ಅವರ ಆಕ್ರಮಣಕಾರಿ ಮತ್ತು ನಿಂದನೀಯ ವರ್ತನೆ, ಸಹ ಸ್ಪರ್ಧಿ ಹೌಸ್‌ಮೇಟ್ ಆಕಾಶ್ ದದ್ಲಾನಿ ಅವರ ಮೇಲೆ ದೈಹಿಕ ಹಲ್ಲೆ ಸೇರಿದಂತೆ ಇತರೆ ವರ್ತನೆಗಳು ಅವರನ್ನು ಬಿಗ್‌ ಬಾಸ್‌ ನಿಂದ ಹೊರಹಾಕುವಂತೆ ಮಾಡಿತು.

ಕಮಲ್‌ ಆರ್‌ ಖಾನ್‌/ ಕೆಆರ್‌ಕೆ (Kamaal R. Khan):

ಬಿಗ್‌ ಬಾಸ್‌ ಸೀಸನ್‌-3 ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ಸ್ವಯಂ ಘೋಷಿತ ನಟ, ವಿಮರ್ಶಕ ಕಮಲ್‌ ಖಾನ್‌ ಸಹ ಸ್ಪರ್ಧಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಕಾರಣದಿಂದ ಅವರು ಬಿಗ್‌ ಬಾಸ್‌ನಲ್ಲಿ ಹೆಚ್ಚು ಚರ್ಚೆ ಆಗಿದ್ದರು.

ರಾಹುಲ್ ಮಹಾಜನ್ (Rahul Mahajan): 2008ರಲ್ಲಿ ಬಂದಿದ್ದ ಬಿಗ್‌ ಬಾಸ್‌ ಸೀಸನ್ -2 ರಲ್ಲಿ ದೊಡ್ಮನೆಯಲ್ಲಿ ಹೆಚ್ಚು ಸದ್ದು ಮಾಡಿದ ಸ್ಪರ್ಧಿಗಳ ಪೈಕಿ ರಾಹುಲ್‌ ಮಹಾಜನ್‌ ಕೂಡ ಒಬ್ಬರು.

ಬಿಗ್ ಬಾಸ್ 2 ಗ್ರ್ಯಾಂಡ್ ಫಿನಾಲೆಗೆ ಒಂದೆರಡು ದಿನಗಳ ಮೊದಲು, ರಾಹುಲ್ ಮಹಾಜನ್, ರಾಜಾ ಚೌಧರಿ, ಅಶುತೋಷ್ ಕೌಶಿಕ್ ಮತ್ತು ಜುಲ್ಫಿ ಸೈಯದ್ ಮನೆಯಿಂದ ಹೊರಬರಲು ಗೋಡೆಯನ್ನು ಹತ್ತಿದ್ದರು. ಈ ವಿಚಾರದಿಂದ ಅವರು ಸುದ್ದಿಯಾಗಿದ್ದರು.

ಇನ್ನು ವಿವಾದಿತ ಬಿಗ್‌ ಬಾಸ್‌ ಸೀಸನ್‌ ಗಳಲ್ಲಿ ಕನ್ನಡದ ಬಿಗ್‌ ಬಾಸ್‌ ಕೂಡ ಸೇರುತ್ತದೆ. ಕೆಲ ಸ್ಪರ್ಧಿಗಳು ವಿವಾದಕ್ಕೆ ಗುರಿಯಾಗಿದ್ದಾರೆ.

ಹುಚ್ಚ ವೆಂಕಟ್:‌ ಕನ್ನಡ ಬಿಗ್‌ ಬಾಸ್‌ ಇತಿಹಾಸದಲ್ಲಿ ದೊಡ್ಡ ವಿವಾದಿತ ಸ್ಪರ್ಧಿಗಳ ಸಾಲಿಗೆ ಹುಚ್ಚ ವೆಂಕಟ್‌ ಸೇರುತ್ತಾರೆ.

ಬಿಗ್‌ ಬಾಸ್‌’ ಕನ್ನಡ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಅವರು ಶೋನಲ್ಲಿ ಸಹ ಸ್ಪರ್ಧಿ ಮೇಲೆ ಕೈ ಮಾಡಿ  ವಿವಾದಕ್ಕೆ ಗುರಿಯಾಗಿದ್ದರು. ಇದಾದ ಬಳಿಕ ಬಿಗ್‌ ಬಾಸ್‌ ಸೀಸನ್‌ -4 ರಲ್ಲಿ ಗೆಸ್ಟ್‌ ಆಗಿ ವೆಂಕಟ್‌ ದೊಡ್ಮನೆಗೆ ಬಂದಿದ್ದರು. ಮನೆಯೊಳಗೆ ಹೋಗುತ್ತಿದ್ದಂತೆ ವೆಂಕಟ್‌ ಪ್ರಥಮ್‌ ಅವರ ಮೇಲೆ ಹಲ್ಲೆ ನಡೆಸಿದ್ದರು.

ಬಿಗ್‌ ಬಾಸ್‌ -11 ಶುರುವಾದ ವೇಳೆ ಹುಚ್ಚ ವೆಂಕಟ್‌  ಈ ಬಾರಿ ತಮಗೆ ಬಿಗ್‌ ಬಾಸ್‌ ಮನೆಗೆ ಹೋಗಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next