‘ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತು ಅದೆಷ್ಟು ಸತ್ಯ. ಊಟ ತಯಾರಿಸುವಾಗ ಉಪಯೋಗಿಸುವ ಪದಾರ್ಥಗಳಲ್ಲಿ ಯಾವುದಾದರು ಒಂದು ಸ್ವಲ್ಪ ಹೆಚ್ಚಾದರೆ ಅಲ್ಲಿ ನಾಲಗೆ, ಹೊಟ್ಟೆ ಕೆಡುತ್ತದೆ. ಮಾತು ಸ್ವಲ್ಪ ತಪ್ಪಿದರೆ ಅಲ್ಲಿ ಸಂಬಂಧವೇ ಕೆಡುತ್ತದೆ.
ಹಾಗೆ ಆರೋಗ್ಯ ಎಂದು ಬಂದಾಗ ದೇಹಕ್ಕೆ ಆಹಾರವು ತುಂಬಾ ಮುಖ್ಯವಾಗುತ್ತದೆ. ತಿನ್ನುವ ಆಹಾರದಲ್ಲಿಯೂ ಕೂಡ ಉಪ್ಪು, ಹುಳಿ, ಖಾರ ಎಲ್ಲವೂ ತುಂಬಾ ಮುಖ್ಯವಾಗುತ್ತದೆ. ಅದರಲ್ಲಿಯೂ ಕೂಡ ಯಾವುದಾದರೂ ಒಂದು ಅಂಶ ಹೆಚ್ಚಾದರೆ ಅದರ ರುಚಿಯೇ ಬದಲಾಗುತ್ತದೆ. ಫಲಿತಾಂಶ ತುಂಬಾ ಉತ್ತಮವಾಗಿರಬಹುದು, ಇಲ್ಲವೇ ತುಂಬಾ ಕಳಪೆಯಾಗಿರಬಹುದು. ಅದು ಕೇವಲ ರುಚಿಯಲ್ಲಿ ಮಾತ್ರವಲ್ಲದೇ ಆರೋಗ್ಯದಲ್ಲಿಯೂ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇರುತ್ತದೆ.
‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ’ ಎಂಬ ಮಾತಿನಂತೆ ಉಪ್ಪಿಲ್ಲದ ಅಡುಗೆ ಬರೀ ಸಪ್ಪೆ. ಉಪ್ಪಿಲ್ಲದೆ ಯಾವುದೇ ಅಡುಗೆ ಕೂಡ ರುಚಿ ಇರುವುದಿಲ್ಲ. ಒಂದು ಚಿಟಿಕೆ ಉಪ್ಪಿನಿಂದ ಅಡುಗೆಯ ರುಚಿಯೇ ಬದಲಾಗಿ ಹೋಗುತ್ತದೆ. ಹಾಗೆಯೇ ಅಧಿಕ ಉಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಕೂಡ ಇದು ದುಷ್ಪರಿಣಾಮ ಬೀರುತ್ತದೆ. ಆದರೆ ಅತಿಯಾಗಿ ಆಹಾರದಲ್ಲಿ ಉಪ್ಪನ್ನು ಸೇರಿಸುವವರು, ಇಲ್ಲವೇ ಖಾಲಿ ಉಪ್ಪನ್ನೇ ರುಚಿ ಎಂದು ತಿನ್ನುವವರು ನಮ್ಮ ನಿಮ್ಮೆಲ್ಲರ ನಡುವೆ ಇದ್ದೇ ಇರುತ್ತಾರೆ. ಸಂಬಂಧಿಕರು, ಗೆಳೆಯರು ಅಧಿಕ ಉಪ್ಪು ಸೇವನೆ ಒಳ್ಳೆಯದಲ್ಲ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಹೆಚ್ಚಿನವರಿಗೆ ಅತಿಯಾದ ಉಪ್ಪಿನ ಸೇವನೆಯಿಂದ ದೇಹಕ್ಕೆ ಕ್ಯಾನ್ಸರ್ ರೋಗ ತಗಲಬಹುದು ಎಂಬ ಅರಿವು ಇರುವುದಿಲ್ಲ. ಉಪ್ಪಿನ ಸೇವನೆಯಿಂದ ನೀರು ಹೆಚ್ಚು ಕುಡಿಯಬೇಕಾಗಿ ಬರಬಹುದು, ಆದರೆ ಕ್ಯಾನ್ಸರ್ ಹೇಗೆ ಬರುತ್ತದೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
ಆಹಾರ ಇನ್ನೂ ರುಚಿಕರವಾಗಬೇಕೆನ್ನುವಾಗ ಮಸಾಲೆಗಳ ಜೊತೆಗೆ ಉಪ್ಪು ಪ್ರಮುಖ ಪಾತ್ರವಹಿಸುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆಯು ನಮ್ಮ ಆರೋಗ್ಯಕ್ಕೆ, ಪ್ರತ್ಯೇಕವಾಗಿ ನಮ್ಮ ಹೊಟ್ಟೆಗೆ ಹಾನಿ ಮಾಡುತ್ತದೆ.
ಅಧ್ಯಯನಗಳ ಪ್ರಕಾರ ಉಪ್ಪಿನ ಅತಿಯಾದ ಸೇವನೆಯು ಹೊಟ್ಟೆಯ ಕ್ಯಾನ್ಸರ್ನಂತಹ ಅಪಾಯಕ್ಕೆ ಕಾರಣವಾಗಬಹುದು. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಹೊಟ್ಟೆಯ ಒಳಪದರಕ್ಕೆ ಹಾನಿಯಾಗುತ್ತದೆ. ಹಾನಿಗೊಳಗಾದ ಹೊಟ್ಟೆಯ ಒಳಪದರದಲ್ಲಿ ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾ ಸೋಂಕನ್ನು ಹರಡಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.
ಉಪ್ಪಿನಕಾಯಿಗಳು, ಸಂಸ್ಕರಿಸಿದ ಮಾಂಸಗಳು ಮತ್ತು ಸಂರಕ್ಷಿತ ಮೀನುಗಳಂತಹ ಉಪ್ಪು ಆಹಾರಗಳು, ಆಹಾರ ಪ್ರಧಾನವಾಗಿರುವ ದೇಶಗಳಲ್ಲಿ ಈ ಸಮಸ್ಯೆ ಕಾಣಸಿಗಬಹುದು. ಹಾಗಾಗಿ ಮುಂದೆ ಆಗುವ ಅಪಾಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ನಮ್ಮ ಹೊಟ್ಟೆಯ ಆರೋಗ್ಯವನ್ನು ರಕ್ಷಿಸಲು ಹಾಗೂ ಸಮತೋಲಿತ ಆಹಾರ ಅಭ್ಯಾಸವನ್ನು ನಡೆಸಲು ಸಹಾಯ ಮಾಡುತ್ತದೆ.
ಉಪ್ಪಿನ ಅತಿಯಾದ ಸೇವನೆಯಿಂದ ಹೊಟ್ಟೆಯ ಒಳಪದರವನ್ನು ಹಾನಿಕಾರಕ ವಸ್ತುಗಳಿಂದ ರಕ್ಷಿಸುವ ಪ್ರೊಸ್ಟಗ್ಲಾಂಡಿನ್ ಎಂಬ ಹಾರ್ಮೋನ್ ಗಳ ಉತ್ಪಾದನೆಯು ಕಡಿಮೆಯಾಗುತ್ತದೆ. ಜೊತೆಗೆ ಇದು ಇನ್ನಷ್ಟು ದುರ್ಬಲವಾಗುತ್ತದೆ.
ಉಪ್ಪಿನ ಅತಿಯಾದ ಸೇವನೆಯು ಹೊಟ್ಟೆಯಲ್ಲಿ ರಾಡಿಕಲ್ಗಳನ್ನು ಉತ್ಪಾದಿಸುತ್ತದೆ. ಇದು ಡಿಎನ್ಎ ಹಾನಿಗೆ ಕಾರಣವಾಗುವುದರ ಜೊತೆಗೆ ಕ್ಯಾನ್ಸರ್ ರೂಪಾಂತರಗಳ ಅಪಾಯವನ್ನು ಹೆಚ್ಚಿಸುತ್ತದೆ.
ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಕರುಳಿನಲ್ಲಿ ಬ್ಯಾಕ್ಟೀರಿಯಾ ಅಸಮತೋಲನಕ್ಕೆ ಕಾರಣವಾಗಬಹುದು. ಇದು ಒಟ್ಟಾರೆ ಹೊಟ್ಟೆಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಹಿರಿಯರಲ್ಲಿ ಅಥವಾ ವಂಶಸ್ತರಲ್ಲಿ ಹೊಟ್ಟೆಯ ಕ್ಯಾನ್ಸರ್ ಅಥವಾ ಜಠರಗರುಳಿನ ಸಮಸ್ಯೆಗಳಿದ್ದು, ಮುಂದಿನ ಪೀಳಿಗೆಯಲ್ಲಿ ಹುಟ್ಟಿದ ವ್ಯಕ್ತಿಯು ಅತಿಯಾದ ಉಪ್ಪು ಸೇವಿಸುತ್ತಿದ್ದರೆ ಆತನಲ್ಲಿ ರೋಗವು ಕಾಣಿಸಿಕೊಳ್ಳಬಹುದು.
ಹಾಗಾಗಿ ನಾವು ದೈನಂದಿನವಾಗಿ ಸೇವಿಸುವ ಆಹಾರದಲ್ಲಿ ಉಪ್ಪಿನ ಪ್ರಮಾಣ ಸಮತೋಲನದಲ್ಲಿದ್ದರೆ ಉಚಿತ. ಆಹಾರಕ್ಕೆ ಉಪ್ಪು ಬಹಳವೇ ಮುಖ್ಯ. ಆದರೆ ಅದನ್ನೆ ತಿಂದರೆ ಆಹಾರದ ಜೊತೆ ಆರೋಗ್ಯವೂ ಕೆಡುವ ಸಾಧ್ಯತೆಯಿದೆ. ಆದಷ್ಟು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ ಹೊಟ್ಟೆಯ ಕ್ಯಾನ್ಸರ್ ನಂತಹ ರೋಗ ಬರದಂತೆ ತಡೆಯುವುದು ಉತ್ತಮ.
ಉಪ್ಪಿನಕಾಯಿಗಳು, ಸಂಸ್ಕರಿಸಿದ ಮಾಂಸಗಳು ಮತ್ತು ಸಂರಕ್ಷಿತ ಮೀನುಗಳಂತಹ ಅತಿಯಾದ ಉಪ್ಪು ಬಳಸಿದ ಆಹಾರವನ್ನು ಇಷ್ಟ ಎಂದು ಅಗತ್ಯಕ್ಕಿಂತ ಹೆಚ್ಚು ಸೇವಿಸದೆ, ಸಮತೋಲಿತ ಆಹಾರವನ್ನು ಸೇವಿಸುವುದು ಉತ್ತಮ. ಹಾಗೆಯೇ ಹಣ್ಣುಹಂಪಲು, ತರಕಾರಿಗಳನ್ನು ಸೇವನೆಯಂತಹ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಳ್ಳುವುದು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
-ಪೂರ್ಣಶ್ರೀ.ಕೆ