ನವದೆಹಲಿ: ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ 22 ಅಭ್ಯರ್ಥಿಗಳ ಮೂರು ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ಜೂನ್ 10ರಂದು ಮೇಲ್ಮನೆಗೆ ನಡೆಯಲಿರುವ ಚುನಾವಣೆಯಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಪ್ರಮುಖರನ್ನು ಕೈಬಿಡಲಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಒಂದು ವಾರ ಸುಮ್ಮನಿದ್ದರೆ ರಾಜ್ಯ ಶಾಂತವಾಗಿರುತ್ತದೆ: ಪ್ರತಾಪ್ ಸಿಂಹ
ಸಚಿವರಾದ ಮುಖ್ತಾರ್ ಅಬ್ಬಾಸ್, ಮಾಜಿ ಸಚಿವ ಪ್ರಕಾಶ್ ಜಾವ್ಡೇಕರ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್, ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಡಾ.ವಿನಯ್ ಸಹಸ್ರಬುದ್ಧೆ, ಮಾಜಿ ಕೇಂದ್ರ ಸಚಿವ ಶಿವ್ ಪ್ರತಾಪ್ ಶುಕ್ಲಾ ಮತ್ತು ರಾಷ್ಟ್ರೀಯ ವಕ್ತಾರ ಸೈಯದ್ ಝಾಫರ್ ಇಸ್ಲಾಂ ಹೆಸರು ಬಿಜೆಪಿ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ನಮೂದಾಗಿಲ್ಲ ಎಂದು ವರದಿ ತಿಳಿಸಿದೆ.
ಐಎಎನ್ ಎಸ್ ಗೆ ಮೂಲಗಳು ತಿಳಿಸಿರುವ ಪ್ರಕಾರ, ಜೂನ್ 23ರಂದು ಉತ್ತರಪ್ರದೇಶದ ರಾಮ್ ಪುರ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯನ್ನಾಗಿ ನಖ್ವಿಯನ್ನ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಬಾರಿ ನಖ್ವಿ ಅವರನ್ನು ಜಾರ್ಖಂಡ್ ನಿಂದ ಮೇಲ್ಮನೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಈ ಬಾರಿ ಜಾರ್ಖಂಡ್ ನಿಂದ ಆದಿತ್ಯ ಸಾಹು ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ವರದಿ ಹೇಳಿದೆ.
ಮುಖ್ಯವಾಗಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಆರ್ ಪಿಎನ್ ಸಿಂಗ್ ರಾಜ್ಯಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿರುವುದಾಗಿ ವರದಿ ವಿವರಿಸಿದೆ.