Advertisement

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

06:26 PM Dec 23, 2024 | Team Udayavani |

ತಿರುವನಂತಪುರಂ: ಕೇರಳದ ಪಾಲಕ್ಕಾಡ್ ನ ಸರ್ಕಾರಿ ಶಾಲೆಯೊಂದರಲ್ಲಿ ಕ್ರಿಸ್‌ಮಸ್ ಆಚರಣೆ ನಡೆಸುತ್ತಿದ್ದ ವೇಳೆ ವಿಶ್ವ ಹಿಂದೂ ಪರಿಷತ್ (VHP) ಕಾರ್ಯಕರ್ತರು ಶಿಕ್ಷಕರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Advertisement

ಕೇಂದ್ರ ಅಲ್ಪಸಂಖ್ಯಾಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಾರ್ಜ್ ಕುರಿಯನ್ ಸೋಮವಾರ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಕುರಿಯನ್ ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುರಿಯನ್, ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡಿರುವ ಕಾನೂನು ಕ್ರಮವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಕೇರಳ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಕ್ರಿಸ್‌ಮಸ್ ಆಚರಿಸಲು ನಿರ್ಧರಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಮಿಲಾದ್-ಉನ್-ನಬಿ ಮತ್ತು ಶ್ರೀಕೃಷ್ಣ ಜಯಂತಿಯಂತಹ ಇತರ ಧರ್ಮಗಳ ಆಚರಣೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸಿ ಮಕ್ಕಳಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ವಿ.ಮುರಳೀಧರನ್ ಅವರು ಪ್ರತಿಕ್ರಿಯಿಸಿ ‘ಘಟನೆಯ ನಿಖರವಾದ ವಿವರಗಳನ್ನು ತಿಳಿದಿಲ್ಲ ಮತ್ತು ಬಿಜೆಪಿ ಕಾರ್ಯಕರ್ತರು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ನಂಬುವುದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಸ್‌ಮಸ್ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಬಿಜೆಪಿಯ ನಿಲುವು ಸ್ಪಷ್ಟವಾಗಿದೆ’ ಎಂದು ಹೇಳಿದ್ದಾರೆ.

Advertisement

ಕೇರಳದ ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು,” ಸಂಘಪರಿವಾರವು ಯುಗಗಳಿಂದ ಕೇರಳದಲ್ಲಿ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಉತ್ತರ ಭಾರತದಲ್ಲಿ ಮಾಡುವ ರೀತಿಯಲ್ಲಿಯೇ ಪಾಲಕ್ಕಾಡ್ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿಪಡಿಸಲಾಗಿದೆ. ಆಡಳಿತಾರೂಢ ಸಿಪಿಐ(ಎಂ)ನ ಕೋಮುವಾದಿ ತುಷ್ಟೀಕರಣವು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಬಿಜೆಪಿಗೆ ಪ್ರೇರಣೆಯಾಗಿದೆ” ಎಂದರು.

ಕ್ರಿಸ್‌ಮಸ್‌ ಸಂದರ್ಭದಲ್ಲಿ ಕ್ರೈಸ್ತರ ಮನೆಗಳಿಗೆ ಕೇಕ್‌ಗಳೊಂದಿಗೆ ತೆರಳುವ ಸಂಘಪರಿವಾರದ ಕಾರ್ಯಕರ್ತರ ನೈಜ ಮುಖಕ್ಕೆ ಪಾಲಕ್ಕಾಡ್ ಶಾಲೆ ಸಾಕ್ಷಿಯಾಗಿದ್ದು, ಅವರು ಕುರಿಗಳ ವೇಷದಲ್ಲಿರುವ ತೋಳಗಳಂತೆ. ಕೇರಳದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗಲು ಬಿಡುವುದಿಲ್ಲ, ಇದರ ವಿರುದ್ಧ ಕಠಿನ ನಿಲುವು ತೆಗೆದುಕೊಳ್ಳಲಾಗುವುದು” ಎಂದು ಕಿಡಿ ಕಾರಿದ್ದಾರೆ.

ಪಾಲಕ್ಕಾಡ್‌ನ ನಲ್ಲೆಪಿಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕ್ರಿಸ್‌ಮಸ್ ಆಚರಣೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ವಿಎಚ್‌ಪಿಯ ಸ್ಥಳೀಯ ಕಾರ್ಯಕರ್ತರಾದ ಕೆ.ಅನಿಲ್ ಕುಮಾರ್, ವಿ. ಸುಸಾಸನನ್ ಮತ್ತು ಕೆ. ವೇಲಾಯುಧನ್ ಅವರನ್ನು ಚಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಪಾಲಕ್ಕಾಡ್‌ನ ತಥಮಂಗಲಂನಲ್ಲಿರುವ ಮತ್ತೊಂದು ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ನಿರ್ಮಿಸಿದ ಗೋದಲಿ ಯನ್ನು ಸೋಮವಾರ ಬೆಳಗ್ಗೆ ಧ್ವಂಸಗೈಯಲಾಗಿದೆ. ರಜೆ ಇದ್ದ ಕಾರಣ ಕಟ್ಟಡಕ್ಕೆ ಬೀಗ ಹಾಕಲಾಗಿದ್ದು, ಗೋದಲಿ ಮತ್ತಿತರ ಅಲಂಕಾರಗಳನ್ನು ಕಟ್ಟಡದೊಳಗೆ ಇಡಲಾಗಿತ್ತು ಎಂದು ಶಾಲಾ ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗೆ ಭೇಟಿ ನೀಡಿದ ರಾಜ್ಯ ಸಚಿವ ಕೆ.ಕೃಷ್ಣನ್‌ಕುಟ್ಟಿ, ಗೋದಲಿಯನ್ನು ಯಾರೋ ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. ವಿಶೇಷ ಪೊಲೀಸ್ ತಂಡ ಈ ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next