Advertisement

ಮತಪತ್ರ ಗೊಂದಲ, ಕೈ, ಕಮಲಕ್ಕೆ ಜಯ

06:00 AM Mar 24, 2018 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆ ಕೆಲವೊಂದು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಸಚಿವ ಬಾಬೂರಾವ್‌ ಚಿಂಚನಸೂರ್‌ ಮತಗಳು ಅಸಿಂಧುಗೊಂಡ ಘಟನೆಗೂ ಸಾಕ್ಷಿಯಾಯಿತು. ಇದೇ ಮೊದಲು ಎಂಬಂತೆ ಜೆಡಿಎಸ್‌ ಚುನಾವಣೆ ಬಹಿಷ್ಕರಿಸಿದ ಪ್ರಸಂಗವೂ ನಡೆಯಿತು.


ಇದೆಲ್ಲದರ ನಡುವೆಯೇ ಕಾಂಗ್ರೆಸ್‌ನ ಎಲ್‌.ಹನುಮಂತಯ್ಯ, ನಾಸೀರ್‌ ಅಹಮದ್‌ ಹಾಗೂ ಜೆ.ಸಿ.ಚಂದ್ರಶೇಖರ್‌, ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ರಾಜ್ಯಸಭೆಗೆ ಆಯ್ಕೆಯಾದರು. ಜೆಡಿಎಸ್‌ ಅಭ್ಯರ್ಥಿ ಫ‌ರೂಕ್‌ ಸೋಲು ಅನುಭವಿಸಿದರು.

Advertisement

ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ಅತಿ ಹೆಚ್ಚು 50 ಮತ ಪಡೆದರು. ಬಿಜೆಪಿಗೆ ಇದ್ದ ಬೆಂಬಲ 48. ಇನ್ನೂ ಎರಡು ಮತ ಹೆಚ್ಚುವರಿಯಾಗಿ ಬಂದಿದ್ದು, ಇದು ಸಿ.ಪಿ. ಯೋಗೇಶ್ವರ್‌, ಎ.ಎಸ್‌.ಪಾಟೀಲ್‌ ನಡಹಳ್ಳಿ ಹಾಗೂ ಎಂಇಎಸ್‌ ಶಾಸಕ ಅರವಿಂದ ಪಾಟೀಲ್‌ ಮತ ಬಂದಿದೆ. ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳಿಗೆ 132 ಮತ ಬಂದಿದೆ.

ಕಾಂಗ್ರೆಸ್‌ಗೆ ಇದ್ದ ಬಲ 123. ಆ ಪೈಕಿ ಎರಡು ಅಸಿಂಧುಗೊಂಡಿವೆ. ಜೆಡಿಎಸ್‌ನ  ಏಳು ಬಂಡಾಯ ಶಾಸಕರು ಹಾಗೂ ಪಕ್ಷೇತರರು ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದಾರೆ. 217 ಶಾಸಕರು ಮತದಾನ ಮಾಡಲು ಅರ್ಹತೆ ಹೊಂದಿದ್ದರೂ ಚುನಾವಣೆ ಬಹಿಷ್ಕರಿಸಿದ್ದರಿಂದ ಜೆಡಿಎಸ್‌ನ 28 ಸದಸ್ಯರು ಮತ ಚಲಾವಣೆ ಮಾಡಲಿಲ್ಲ. ಕಾಂಗ್ರೆಸ್‌ನ ರುದ್ರೇಶಗೌಡರು ಅನಾರೋಗ್ಯ ಕಾರಣ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, 188 ಮತ ಚಲಾವಣೆಯಾಗಿ ಅದರಲ್ಲಿ ಎರಡು ಅಸಿಂಧು ಆಗಿವೆ. ಇನ್ನೆರಡು, ಮತ ಪತ್ರದಲ್ಲಿ ಸರಿಯಾಗಿ ಗುರುತು ಮಾಡದ ಕಾರಣ ತಡೆಹಿಡಿಯಲಾಗಿತ್ತು. ಈ ಎರಡೂ ಮತಗಳು ಪಕ್ಷೇತರರದ್ದು ಎಂದು ಹೇಳಲಾಗಿದೆ.

ಅಂತಿಮವಾಗಿ ಎಲ್‌.ಹನುಮಂತಯ್ಯ-44 ನಾಸೀರ್‌ ಅಹಮದ್‌-42  ಜೆ.ಸಿ.ಚಂದ್ರಶೇಖರ್‌-46  ರಾಜೀವ್‌ ಚಂದ್ರಶೇಖರ್‌ -50 ಮತ ಪಡೆದು ಜಯಶೀಲರಾದರು. ಬಿ.ಎಂ.ಫ‌ರೂಕ್‌ಗೆ 2 ಮತ ಲಭಿಸಿದವು.

ಇಂದು ರಾಜೀನಾಮೆ
ರಾಜ್ಯಸಭೆ ಚುನಾವಣೆ ಅಂತ್ಯಗೊಂಡಿದ್ದರಿಂದ ಏಳೂ ಜನ ಬಂಡಾಯ ಶಾಸಕರು ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾನುವಾರ ಮೈಸೂರಿನಲ್ಲಿ ನಡೆಯುವ ರಾಹುಲ್‌ ಗಾಂಧಿ ಜನಾಶೀರ್ವಾದ ಯಾತ್ರೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ. ಸಂಬಂಧ ಮತದಾನದ ಬಳಿಕ ಸಭೆ ಸೇರಿ ಚರ್ಚಿಸಿದರು. ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಆಧ್ಯಕ್ಷ ಡಾ.ಜಿ.ಪರಮೇಶ್ವರ್‌, ಸಚಿವ ಡಿ.ಕೆ.ಶಿವಕುಮಾರ್‌ ಜತೆಗೂ ಸಮಾಲೋಚನೆ ನಡೆಸಿದರು.

Advertisement

ನಿಯಮ ಬಾಹಿರವಾಗಿ ಚುನಾವಣೆ ನಡೆಸಿದ್ದು ಚುನಾವಣಾಧಿಕಾರಿ ಕಾಂಗ್ರೆಸ್‌ ಏಜೆಂಟರಂತೆ ವರ್ತಿಸಿದ್ದಾರೆ. ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್‌ ಪ್ರಜಾಪ್ರಭುತ್ವದ ಕಗ್ಗೊàಲೆ ಮಾಡಿದೆ. ಹೀಗಾಗಿ ನಾವು ಮತದಾನ ಬಹಿಷ್ಕರಿಸಿ ದೂರ ಉಳಿದಿದ್ದೆವು.
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಜೆಡಿಎಸ್‌ನವರು ಹತಾಶರಾಗಿ ಅಕ್ರಮದ ಆರೋಪ ಮಾಡುತ್ತಿದ್ದಾರೆ. ಎರಡನೇಯ ಮತ ಪತ್ರ ಕೊಡಲು ನಿಯಮಗಳಲ್ಲಿ ಅವಕಾಶ ಇದೆ. ಜೆಡಿಎಸ್‌ ಬಹಿಷ್ಕಾರ ಮಾಡಿದ್ದ‌ರಿಂದ ತೊಂದರೆಯಿಲ್ಲ. ನಮ್ಮ ಪಕ್ಷದ ಮೂವರು ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಸಂತಸ ತಂದಿದೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ.

ನಮ್ಮ ಅಭ್ಯರ್ಥಿ ಗೆಲುವಿಗೆ ಎಲ್ಲ ಶಾಸಕರ ಬೆಂಬಲ ದೊರೆತಿದೆ. ರಾಜೀವ್‌ ಚಂದ್ರಶೇಖರ್‌ ಗೆಲುವಿಗೆ ಶ್ರಮಿಸಿದ ಶಾಸಕರಿಗೆ ಅಭಿನಂದನೆಗಳು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಂಕಾರದಿಂದ ಮೆರೆಯುತ್ತಿದ್ದಾರೆ. ಅವರು ಅಹಂಕಾರ ಬಿಡಲು ಯೋಚಿಸಲಿ.
– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

ಸಂಖ್ಯಾಬಲ ಇಲ್ಲದಿದ್ದರೂ ರಾಜಕೀಯಕ್ಕೆ ಹೊಸಬರೂ ಅಮಾಯಕರೂ ಆಗಿರುವ ಫ‌ರೂಕ್‌ ಅವರನ್ನು ಕಣಕ್ಕಿಳಿಸಿ ಅವಮಾನ ಮಾಡಲಾಗಿದೆ. ಹಿಂದೆ ಜೆಡಿಎಸ್‌ಗೆ ಸಂಖ್ಯಾಬಲ ಇದ್ದಾಗ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ ಬದಲಿಗೆ ರಾಮಸ್ವಾಮಿ, ವಿಜಯಮಲ್ಯ, ಕುಪೇಂದ್ರರೆಡ್ಡಿ ಅವರನ್ನು ಆಯ್ಕೆ ಮಾಡಲಾಯಿತು. ಇದು ಜೆಡಿಎಸ್‌ಗೆ ಅಲ್ಪಸಂಖ್ಯಾತರ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.
– ಜಮೀರ್‌ ಅಹಮದ್‌, ಬಂಡಾಯ ಶಾಸಕ

ಕಾಗೋಡು ತಿಮ್ಮಪ್ಪ ಹಾಗೂ ಚಿಂಚನಸೂರ್‌ ಮತದಾನಕ್ಕೂ ಮೊದಲೇ ತಪ್ಪು ಸರಿಪಡಿಸಿರುವುದರಿಂದ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ. ಸೋಲಿನ ಹತಾಸೆಯಿಂದ ಜೆಡಿಎಸ್‌ನವರು ಆರೋಪ ಮಾಡಿದ್ದಾರೆ.
– ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next