ಪ್ರಜಾಪ್ರಭುತ್ವ ಹಾಳು ಮಾಡುತ್ತಿದ್ದಾರೆ ಪ್ರಧಾನಿ ಮೋದಿ, ಅಮಿತ್ ಶಾ
ಸಿಪಿಎಂನ ಇಬ್ಬರು ಶಾಸಕರ ಬೆಂಬಲ ಕಾಂಗ್ರೆಸ್‌ಗೆ ಎಂದ ಅಶೋಕ್ ಗೆಹ್ಲೋಟ್
ಜೈಪುರ: ಶಾಸಕರನ್ನು ಖರೀದಿಸುವ ನಿಟ್ಟಿನ ಲ್ಲಿಯೇ ರಾಜ್ಯಸಭೆ ಚುನಾವಣೆಯನ್ನು ಎರಡು ತಿಂಗಳಿನಷ್ಟು ತಡವಾಗಿ ಆಯೋಜಿಸಲು ಬಿಜೆಪಿ ಯತ್ನಿಸಿದೆ. ದೇಶ ಕೋವಿಡ್ ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಪ್ರಧಾನಿ ಮೋದಿ. ಗೃಹ ಸಚಿವ ಅಮಿತ್ ಶಾ ಪ್ರಜಾಪ್ರಭುತ್ವವನ್ನು ಹಾಳು ಮಾಡುವುದರಲ್ಲಿ ನಿರತರಾಗಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದೂರಿದ್ದಾರೆ.
ಶುಕ್ರವಾರ ಮಾತನಾಡಿದ ಅವರು, “ಎರಡು ತಿಂಗಳ ಹಿಂದೆಯೇ ರಾಜ್ಯ ಸಭೆಯ ಸ್ಥಾನಗಳಿಗೆ ಚುನಾವಣೆ ನಡೆಸಬಹುದಿತ್ತು. ಶಾಸಕರನ್ನು ಖರೀದಿ ಮಾಡುವ ಬಿಜೆಪಿಯ ಯತ್ನ ಪೂರ್ತಿಯಾಗಿರಲಿಲ್ಲ. ಹೀಗಾಗಿ, ಕಾರಣವಿಲ್ಲದೆ ಚುನಾವಣೆ ಮುಂದೂಡಲಾಯಿತು’ ಎಂದು ದೂರಿದರು. ಕಾಂಗ್ರೆಸ್ ಶಾಸಕರು ಒಗ್ಗಟ್ಟಿನಿಂದ ಇದ್ದಾರೆ. ಬಿಜೆಪಿಗೆ ಪಕ್ಷದ ಶಾಸಕರ ಮತಗಳು ಹೋಗಲಾರವು. ಸಿಪಿಎಂನ ಇಬ್ಬರು ಶಾಸಕರು ಪಕ್ಷದ ಪರವಾಗಿದ್ದಾರೆ ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ.
ವಿಶ್ವವೇ ಕೊರಾನಾ ವಿರುದ್ಧ ಹೋರಾಡುತ್ತಿದ್ದಾಗ ಮಧ್ಯಪ್ರದೇಶದಲ್ಲಿ ಸರಕಾರವನ್ನು ಬೀಳುಸುವಲ್ಲಿ ಬಿಜೆಪಿ ಸಕ್ರಿಯವಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ದೊಡ್ಡ ರಾಜ್ಯಗಳಾದ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರವನ್ನು ಬೀಳಿಸಿದೆ. ಇದೀಗ ರಾಜಸ್ಥಾನದಲ್ಲೂ ಶಾಸಕರನ್ನು ಖರೀದಿಸಲು ಮುಂದಾಗುವ ಮೂಲಕ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೂ.19ಕ್ಕೆ ರಾಜ್ಯಸಭಾಸ್ಥಾನಗಳಿಗೆ ಚುನಾವಣೆ ನಡೆಯಲಿದೆ.